Advertisement

ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಸಿದ್ಧಾಂತಕ್ಕೆ ರಾಜಿಯಿಲ್ಲ

06:00 AM Jul 13, 2018 | Team Udayavani |

ಬೆಂಗಳೂರು: ನಾನು ಹಿರಿಯನೂ ಅಲ್ಲ. ಯುವಕನೂ ಅಲ್ಲ. ಮಧ್ಯ ವಯಸ್ಕ. ಆ ಕಾರಣದಿಂದ ರಾಹುಲ್‌ ಗಾಂಧಿ ಹೊಸ ನಾಯಕತ್ವ ಬೆಳೆಯಲು ರಾಜ್ಯದಲ್ಲಿ ಅವಕಾಶ ಕಲ್ಪಿಸಿದ್ದಾರೆ. ನನಗೆ ರಾಜಕೀಯ ಅನುಭವ ಇದೆ.

Advertisement

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಎಲ್ಲ ನಾಯಕರೊಂದಿಗೆ ಸಂಪರ್ಕವಿದೆ. ಹೊಸ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿ, ಎಲ್ಲರನ್ನೂ ವಿಶ್ವಾಸದಿಂದ ಒಗ್ಗೂಡಿಸಿಕೊಂಡು ಪಕ್ಷವನ್ನು ಸದೃಢಗೊಳಿಸಲಿದ್ದೇನೆ. ಇದು, ಸರ್ಕಾರದ ಪಾಲುದಾರರಾಗಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್‌ ಗುಂಡೂರಾವ್‌ ಅವರ ಆತ್ಮವಿಶ್ವಾಸದ ನುಡಿಗಳು.

ಹೊಸ ಜವಾಬ್ದಾರಿ ನಿರೀಕ್ಷಿತವಾಗಿತ್ತಾ ? ಆಶ್ವರ್ಯ ತಂದಿದೆಯಾ ?
         ನನ್ನ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಶೀಲನೆಯಲ್ಲಿತ್ತು ಎನ್ನುವುದು ನನ್ನ ಗಮನಕ್ಕಿತ್ತು. ಆದ್ದರಿಂದ ಇದು ಅನಿರೀಕ್ಷಿತವಲ್ಲ. ಆದರೆ, ಈ ಹುದ್ದೆ ಸಿಕ್ಕೇ ಸಿಗುತ್ತದೆ ಎನ್ನುವ ಸಂಪೂರ್ಣ ಭರವಸೆ ಇರಲಿಲ್ಲ.

ಹಿರಿಯರು ಮತ್ತು ಕಿರಿಯರ ಮಧ್ಯೆ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಹೇಗೆ ನಿಭಾಯಿಸುತ್ತೀರಾ?
          ನಾನು ಹಿರಿಯನೂ ಅಲ್ಲ. ಯುವಕನೂ ಅಲ್ಲ. ಮಧ್ಯ ವಯಸ್ಕ. ಆ ಕಾರಣದಿಂದ ರಾಹುಲ್‌ ಗಾಂಧಿ ಹೊಸ ನಾಯಕತ್ವ ಬೆಳೆಯಲು ರಾಜ್ಯದಲ್ಲಿ ಅವಕಾಶ ಕಲ್ಪಿಸುವ ದೃಷ್ಟಿಯಿಂದ ನನಗೆ ಈ ಅವಕಾಶ ಒದಗಿಸಿಕೊಟ್ಟಿದ್ದಾರೆ.

ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಹಿರಿಯರು ಮುನಿಸಿಕೊಂಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
       ಹಾಗೇನಿಲ್ಲ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಎಲ್ಲ ನಾಯಕರೂ ಇದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆ.ಎಚ್‌. ಮುನಿಯಪ್ಪ, ಎಚ್‌.ಕೆ.ಪಾಟೀಲ್‌, ಬಿ.ಕೆ.ಹರಿಪ್ರಸಾದ್‌ ಎಲ್ಲರೂ ಪಾಲ್ಗೊಂಡಿದ್ದರು. ನನ್ನೊಂದಿಗೆ ಯಾವ ನಾಯಕರಿಗೂ ಮುನಿಸಿಲ್ಲ. ಎಲ್ಲರೂ ಆಶೀರ್ವಾದ ಮಾಡಿದ್ದಾರೆ. ನನ್ನ ವಿಚಾರದಲ್ಲಿ ಯಾವುದೇ ಬಣಗಳಿಲ್ಲ. ನಾನು ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎನ್ನುವುದು ಮುಖ್ಯ. 

Advertisement

ನಿಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಮೋದಿ ಎದುರಿಸುವ ಶಕ್ತಿ ನಿಮ್ಮ ಪಕ್ಷಕ್ಕಿದೆಯಾ ?
      ಮೋದಿಯವರು ಕೇವಲ ಮಾತನಾಡುತ್ತಾರೆ. ನಾಲ್ಕೂವರೆ ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎನ್ನುವುದು ದೇಶದ ಜನತೆಗೆ ಇನ್ನೂ ತಿಳಿಯುತ್ತಿಲ್ಲ. ನಾಲ್ಕೂವರೆ ವರ್ಷದಲ್ಲಿ ರೈತರಿಗೆ ಏನೂ ಮಾಡದೆ ಈಗ ಎಂಎಸ್‌ಪಿ ಹೆಚ್ಚಳ ಮಾಡಿದ್ದಾರೆ.ಲೋಕಸಭೆ ಚುನಾವಣೆ ಡಿಸೆಂಬರ್‌ನಲ್ಲಿ ಮಾಡಲು ಯೋಚಿಸಿರುವುದರಿಂದ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ. ಉತ್ತರ ಭಾರತದಲ್ಲಿ ಬಿಜೆಪಿ ವಿರೋಧಿ ಅಲೆ ಆರಂಭವಾಗಿದೆ.  ರಾಜಸ್ಥಾನ, ಮಧ್ಯಪ್ರದೇಶ ಉತ್ತರ ಪ್ರದೇಶಗಳಲ್ಲಿ ಮೋದಿಗೆ ಭಯ ಶುರುವಾಗಿದೆ. ಅಬ್ಬರದ ಪ್ರಚಾರ, ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಅದನ್ನು ಜನತೆಗೆ ಮುಟ್ಟಿಸುವ ಪ್ರಯತ್ನ ಮಾಡುತ್ತೇವೆ.

ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದೀರಾ. ಸವಾಲು ಅನಿಸಲ್ವಾ ?
       ಖಂಡಿತವಾಗಿಯೂ ಇದು ದೊಡ್ಡ ಸವಾಲಾಗಿದೆ. ಇದು ಹೂವಿನ ಹಾಸಿಗೆ ಅಂತ ನಾನು ಹೇಳುವುದಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರ ಸಂಪೂರ್ಣ ಪರಿಚಯ ಇದೆ. ಎಲ್ಲ ಜಿಲ್ಲೆಗಳ ರಾಜಕಾರಣ ಏನು ಅಂತ ಗೊತ್ತಿದೆ. ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ತಿಳಿದುಕೊಂಡಿದ್ದೇನೆ.ಯಾರು ಯಾವ ಬಣದಲ್ಲಿದ್ದಾರೆ. ಯಾರ ಶಕ್ತಿ ಏನು ಎನ್ನುವುದು ನನಗೆ ಗೊತ್ತಿದೆ. ಕಾಂಗ್ರೆಸ್‌ ಹಿಂದೂ ವಿರೋಧಿ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದರು. ಅದೆಲ್ಲವನ್ನೂ ಸಂಘಟನೆ ಮೂಲಕ ಜನತೆಗೆ ಮನವರಿಕೆ ಮಾಡಿಕೊಡಬೇಕಿದೆ. ಕಾಂಗ್ರೆಸ್‌ ಯಾವುದೇ ಒಂದು ವರ್ಗದ ಪರವಾಗಿಲ್ಲ. ನಾವು ಬಡವರ ಪರವಾಗಿದ್ದೇವೆ.

ಮುಸ್ಲಿಮರ ಓಲೈಕೆ ಚುನಾವಣೆಯಲ್ಲಿ ನಿಮಗೆ ಹಿನ್ನಡೆಗೆ ಕಾರಣವಾಯಿತು ಅನಿಸುತ್ತಾ ?
       ಕರಾವಳಿ ಪ್ರದೇಶದಲ್ಲಿ ಕಾಂಗ್ರೆಸ್‌ ಸಾಕಷ್ಟು ಅಭಿವೃದಿಟಛಿ ಕೆಲಸ ಮಾಡಿತ್ತು. ರಮಾನಾಥ ರೈ, ಲೋಬೊ, ವಿನಯಕುಮಾರ್‌ ಸೊರಕೆ ಎಲ್ಲರೂ ಸಾಕಷ್ಟು ಕೆಲಸ ಮಾಡಿದ್ದರು. ಭಾವನಾತ್ಮಕ  ವಿಚಾರಗಳು ಒಂದು ಚುನಾವಣೆಗೆ ಕೆಲಸ ಮಾಡಿರಬಹುದು. ಅದೆಲ್ಲವನ್ನು ಜನರು ವಿಚಾರ ಮಾಡುತ್ತಾರೆ. ಜನರ ಮನಸಲ್ಲಿ ಮೂಡಿರುವ ಭಾವನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತೇವೆ.

ನಿಮ್ಮ ಆಯ್ಕೆ ಜಾತಿ ಆಧಾರದಲ್ಲಿ ಆಗಿದೆಯಾ?
       ನನ್ನ ಆಯ್ಕೆ ಮಾಡಿದರೆ ಬ್ರಾಹ್ಮಣರ ಪರ, ಈಶ್ವರ್‌ ಖಂಡ್ರೆ ಆಯ್ಕೆಯಾದರೆ ಲಿಂಗಾಯತರ ಪರ ಎನ್ನುವುದು
ಸರಿಯಲ್ಲ. ಕಾಂಗ್ರೆಸ್‌ ಯಾವ ವರ್ಗದ ವಿರೋಧಿಯೂ ಅಲ್ಲ. ನಮ್ಮ ಸರ್ಕಾರ ಅರ್ಚಕರ ಸಂಬಳ ಹೆಚ್ಚು ಮಾಡಿತ್ತು. ಹಿಂದೂ ವಿರೋಧಿಯಾಗಿದ್ದರೆ ಆ ರೀತಿಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿತ್ತಾ ?

ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ ವಿಶ್ವಾಸವನ್ನೂಗಳಿಸಬೇಕಿದೆ. ಅದನ್ನು ಹೇಗೆ ನಿಭಾಯಿಸುತ್ತೀರಾ ?
       ಅದಕ್ಕಾಗಿಯೇ ಸಮನ್ವಯ ಸಮಿತಿ ರಚನೆಯಾಗಿದೆ. ಆರಂಭದಲ್ಲಿ ಕೆಲವು ಗೊಂದಲಗಳಾಗಿವೆ. ಅನ್ನಭಾಗ್ಯ ಯೋಜನೆ ಅಕ್ಕಿಯಿನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿರುವುದು ನಮ್ಮನ್ನು ಕೇಳದೇ ಮಾಡಿರುವ
ತೀರ್ಮಾನ. ಅದನ್ನು ಮೊದಲೇ ಚರ್ಚಿಸಿ ತೀರ್ಮಾನ ಕೈಗೊಂಡಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ. ಸಮನ್ವಯ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಂಡರೆ ಯಾವುದೇ ಗೊಂದಲ ಆಗುತ್ತಿರಲಿಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿಯವರದ್ದು ಸ್ಪಷ್ಟ ನಿಲುವಿದೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ಆಗಬೇಕೆಂದು ಆಸೆ ಇದೆ. ನಮ್ಮದೂ ಅದೇ ಭಾವನೆ ಇರುವುದರಿಂದ ಸಣ್ಣಪುಟ್ಟ ಸಮಸ್ಯೆಗಳಾದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಜೆಡಿಎಸ್‌ ಮೈತ್ರಿ ಧರ್ಮ ಪಾಲಿಸುವ ವಿಶ್ವಾಸ ಇದೆ.

ಸಮ್ಮಿಶ್ರ ಸರ್ಕಾರದ ಬಗ್ಗೆ ನಿಮ್ಮ ಶಾಸಕರಿಗೆ ಬೇಸರ ಇದೆಯಲ್ಲ ?
       ನೋಡಿ ಶಾಸಕರಿಗೆ ನಮ್ಮ ಸರ್ಕಾರ ಇದ್ದಾಗಲೂ ಬೇಸರ ಇತ್ತು ಶಾಸಕಾಂಗ ಸಭೆಗಳಲ್ಲಿ ಅನೇಕ ಬಾರಿ ಶಾಸಕರು ಆರೋಪ ಮಾಡಿದ್ದರು. ಸಮ್ಮಿಶ್ರ ಸರ್ಕಾರ ಇದ್ದಾಗ ಸಮಸ್ಯೆಯಾಗುತ್ತದೆ. ಅನುಸರಿಸಿಕೊಂಡು ಹೋಗಬೇಕು. 

ಪಕ್ಷ ವಿರೋಧಿ ಚಟುವಟಿಕೆ ಸಹಿಸುವುದಿಲ್ಲ ಎಂದು ಹೇಳಿದ್ದೀರಿ?
       ನಾನು ಯಾರ ಪರವೂ ಇಲ್ಲ. ಯಾರ ವಿರೋಧವೂ ಇಲ್ಲ. ನಾನು ಯಾವ ನಾಯಕರ ಪರವಿಲ್ಲ. ನಾನು ಕಾಂಗ್ರೆಸ್‌ ಪರ. ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುವ ಯಾರೇ ಆಗಿದ್ದರೂ ಅವರ ವಿರುದಟಛಿ ಕ್ರಮ ಕೈಗೊಳ್ಳಬೇಕಾಗುತ್ತದೆ.

ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜತೆ ಸೇರಿದರೆ ಕಾಂಗ್ರೆಸ್‌ಗೆ ನಷ್ಟ ಆಗುತ್ತೆ ಅಂತ ಮಾತು ಕೇಳಿ ಬರುತ್ತಿದೆಯಲ್ಲಾ ?
      ಆ ರೀತಿಯ ಅಭಿಪ್ರಾಯ ಇರಬಹುದು. ಆದರೆ, ಹೈ ಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನ ಅಂತಿಮ.

ನಿಮ್ಮ ಜತೆಗೆ ಇನ್ನೂ ಇಬ್ಬರು ಕಾರ್ಯಾಧ್ಯಕ್ಷರ ನೇಮಕ ಮಾಡುವ ಪ್ರಸ್ತಾಪ ಇದೆಯಂತಲ್ಲಾ ?
      ಆ ರೀತಿಯ ಯಾವುದೇ ಪ್ರಸ್ತಾಪ ಇಲ್ಲ. ಈಶ್ವರ್‌ ಖಂಡ್ರೆ ಮತ್ತು ನಾನು ಇಬ್ಬರೇ ಇರುವುದು.

ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ನಿಮ್ಮ ಪಕ್ಷದ ನಾಯಕರೇ ಆರೋಪಿಸಿದ್ದಾರಲ್ಲಾ?
      ಸಿದ್ದರಾಮಯ್ಯ ಬಜೆಟ್‌ನಲ್ಲಿ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಅನುದಾನ ಕೊಟ್ಟಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಭಾಗಕ್ಕೆ ಅನುದಾನ ನೀಡಲಾಗಿದೆ. ಹೀಗಾಗಿ ಯಾವುದೇ ಭಾಗಕ್ಕೂ ಅನ್ಯಾಯವಾಗಿಲ್ಲ. ಕುಮಾರಸ್ವಾಮಿ ಬಜೆಟ್‌ನಲ್ಲಿ ಸಾಲ ಮನ್ನಾ ಪ್ರಮುಖ ವಿಷಯ. ಅದು ರಾಜ್ಯದ ಎಲ್ಲ ರೈತರಿಗೂ ಅನ್ವಯವಾಗಲಿದೆ.

ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಗುರಿ ಎಷ್ಟು?
      ನಾವು ಜಂಟಿಯಾಗಿ ಚುನಾವಣೆಗೆ ಹೋಗುತ್ತಿರುವುದರಿಂದ 28 ರಲ್ಲಿ 28 ಸ್ಥಾನ ಗೆಲ್ಲುವ ಗುರಿ
ಇಟ್ಟುಕೊಂಡಿದ್ದೇವೆ. ವಾತಾವರಣ ನಮ್ಮ ಪರವಾಗಿದೆ. ಕಳೆದ ಮೂರು ಅವಧಿಯಲ್ಲಿ ಬಿಜೆಪಿಯ ಸಂಸದರು ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಅವರು ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರಿಗೆ
ಯಾವ ಖಾತೆ ಇದೆ ಎನ್ನುವುದೇ ಗೊತ್ತಿಲ್ಲ. ಇವರಿಗೆ ಕೊಟ್ಟಿರುವ ಖಾತೆಯಿಂದ ರಾಜ್ಯಕ್ಕೆ ಏನು ಲಾಭವಾಗಿದೆ. ಬಿಜೆಪಿ ಸಂಸದರು ಹೋರಾಟ ಮಾಡಿ ಒಳ್ಳೆಯ ಖಾತೆ ಪಡೆಯಬೇಕಿತ್ತು. ಯಡಿಯೂರಪ್ಪಗೆ ಯಾವುದೇ ಅಧಿಕಾರ
ನೀಡಲಿಲ್ಲ. ಕೇಂದ್ರದ ಬಿಜೆಪಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಅದನ್ನು ಜನರಿಗೆ ಮನವರಿಕೆ ಮಾಡುತ್ತೇವೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next