ಬೆಂಗಳೂರು: ಚುನಾವಣಾ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ಈಗಿರುವ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಕೆ ಮಾಡುವ ತೀರ್ಮಾನ ಕೈಗೊಂಡಿದೆ. 20 ವರ್ಷಗಳ ಬಳಿಕ ಪರಿಷತ್ ತಿದ್ದುಪಡಿ ತರಲು ಮುಂದಾಗಿದ್ದು, ಮಹಿಳೆಯರಿಗೆ ಇನ್ನೊಂದು ಪ್ರಾತಿನಿಧ್ಯ ನೀಡುವುದು ಕೂಡ ಇದರಲ್ಲಿ ಸೇರಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ್, ಪರಿಷತ್ತಿನ ನಿಬಂಧನೆಯಂತೆಯೇ ಈ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆಯಲಾಗಿದೆ. ಅಲ್ಲದೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕೋಟ ಗ್ರಾಮದಲ್ಲಿ ಶಿವರಾಮ ಕಾರಂತರ ಥೀಮ್ ಪಾರ್ಕ್‌ನಲ್ಲಿ ಮಾ. 15ರಂದು ಸರ್ವ ಸದಸ್ಯರ ವಿಶೇಷ ಸಭೆ ನಡೆಯಲಿದ್ದು, ಇಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದರು.
ಅನೇಕ ಸಂಘ ಸಂಸ್ಥೆಗಳ, ಲೋಕಸಭೆ, ವಿಧಾನಸಭೆ ಸೇರಿ ಇನ್ನಿತರ ಸಹಕಾರ ಸಂಘಗಳ ಅಧಿಕಾರ ಅವಧಿ ಐದು ವರ್ಷ ಇರುವಂತೆ ಕಸಾಪ ಅಧ್ಯಕ್ಷರ ಮತ್ತು ಕಾರ್ಯಕಾರಿ ಸಮಿತಿಯ ಅವಧಿಯನ್ನೂ ಐದು ವರ್ಷಕ್ಕೆ ಏರಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು ಎಂದು ಹೇಳಿದರು. ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಸಲುವಾಗಿ ಈಗಿರುವ ಪಾತಿನಿಧ್ಯದ ಸಂಖ್ಯೆಯನ್ನು ಎರಡಕ್ಕೆ ಏರಿಸಲಾಗಿದೆ.
ಪರಿಶಿಷ್ಟರಿಗೆ ಮತ್ತಷ್ಟು ಪ್ರಾತಿನಿಧ್ಯ ನೀಡುವ ಸಲುವಾಗಿ ಪರಿಶಿಷ್ಟ ಜಾತಿ ಪ್ರತಿನಿಧಿಯನ್ನು ಒಂದರಿಂದ ಎರಡಕ್ಕೆ ಏರಿಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಒಂದು ಪ್ರತಿನಿಧಿಯನ್ನು ಸೇರಿಸಲಾಗಿದೆ ಎಂದು ತಿಳಿಸಿದರು. ಮತದಾರರ ಪಟ್ಟಿ ಪ್ರಕಟಿಸಲು ಸಾಕಷ್ಟು ಕಾಲಾವಕಾಶ ನೀಡಬೇಕಾಗಿರುವುದರಿಂದ ಈಗಿರುವ 75 ದಿನಗಳ ಅವಧಿಯನ್ನು 90 ದಿನಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಗಡಿನಾಡ ಘಟಕಗಳನ್ನು ಸ್ಥಾಪಿಸಿದ ರೀತಿಯಲ್ಲಿಯೇ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತೆಲಂಗಾಣ ರಾಜ್ಯದಲ್ಲಿಯೂ ಗಡಿನಾಡ ಘಟಕ ಆರಂಭಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರಕ್ಕೊಂದು ಮತ ಕೇಂದ್ರ: ಮತ ಕೇಂದ್ರ ಸ್ಥಾಪನೆ ಚುನಾವಣೆಯಲ್ಲಿ ಬೆಂಗಳೂರಿನ ಮತದಾರರು ಸುಮಾರು 25 ರಿಂದ 30 ಕಿ.ಮೀ ದೂರದಿಂದ ನ್ಯಾಷನಲ್ ಕಾಲೇಜಿಗೆ ಮತ ಹಾಕಲು ಬರುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಮತ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಹೋಬಳಿ ಮಟ್ಟದಲ್ಲಿಯೂ ಮತದಾನ ಕೇಂದ್ರ ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಪ್ರವಾಸ ಕೈಗೊಂಡಾಗ ಹಲವಾರು ಜಿಲ್ಲೆ ಹಾಗೂ ಗ್ರಾಮೀಣ ಭಾಗದಲ್ಲಿ ಈಗಿರುವ ಅಧ್ಯಕ್ಷರ ಅವಧಿಯನ್ನು ಮೂರರಿಂದ ಐದು ವರ್ಷಕ್ಕೆ ಏರಿಕೆ ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲವು ತಿದ್ದುಪಡಿಗೆ ಮುಂದಾಗಲಾಗಿದೆ.
-ಮನು ಬಳಿಗಾರ್, ಕಸಾಪ ಅಧ್ಯಕ್ಷ