Advertisement

ಮಂಗಳೂರಿಗೆ ರಾಷ್ಟ್ರಪತಿ ಆಗಮನ

10:56 PM Oct 07, 2021 | Team Udayavani |

ಮಂಗಳೂರು: ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಗುರವಾರ ಸಂಜೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ವಿಮಾನ ನಿಲ್ದಾಣದಲ್ಲಿ ಗೌರವಪೂರ್ವಕ  ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

Advertisement

ಮೈಸೂರಿನಿಂದ ಸಂಜೆ 6.45ಕ್ಕೆ  ವಿಶೇಷ ವಿಮಾನದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೊತ್‌ ಬರಮಾಡಿಕೊಂಡರು. ರಾಷ್ಟ್ರಪತಿ ಅವರು 7.10ಕ್ಕೆ ವಿಮಾನ ನಿಲ್ದಾಣದಿಂದ ಹೊರಟು 7.20ಕ್ಕೆ  ಸಕೀìಟ್‌ ಹೌಸ್‌ಗೆ  ತಲುಪಿದರು.

ವಿಮಾನ ನಿಲ್ದಾಣದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಹಾನಗರ ಪಾಲಿಕೆ ಮೇಯರ್‌ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ರಾಷ್ಟ್ರಪತಿಯವರನ್ನು  ಸ್ವಾಗತಿಸಿದರು. ಅವರ ಜತೆಗೆ ಪತ್ನಿ  ಸವಿತಾ ಕೋವಿಂದ್‌ ಮತ್ತು ಪುತ್ರಿ ಸ್ವಾತಿ ಕೋವಿಂದ್‌ ಆಗಮಿಸಿದ್ದಾರೆ.

ಸರ್ಕೀಟ್‌ಹೌಸ್‌ನಲ್ಲಿ ವಾಸ್ತವ್ಯ :

ರಾಷ್ಟ್ರಪತಿಯವರು ರಸ್ತೆ ಮೂಲಕ ಕದ್ರಿಹಿಲ್ಸ್‌ನ ಸರಕಾರಿ ಅತಿಥಿಗೃಹ ಸಕೀìಟ್‌ ಹೌಸ್‌ಗೆ ಆಗಮಿಸಿದರು. ನೂತನ ಸರ್ಕೀಟ್ ಹೌಸನ್ನು  ಅವರ ವಾಸ್ತವ್ಯಕ್ಕೆ ಸಂಪೂರ್ಣವಾಗಿ ಮೀಸಲಿರಿಸಲಾಗಿದೆ. ಸೂಟ್‌ ನಂ. 1, 2 ಮತ್ತು 3 ಅನ್ನು ರಾಷ್ಟ್ರಪತಿ ಹಾಗೂ ಅವರ ಕುಟುಂಬದವರ ವಾಸ್ತವ್ಯಕ್ಕೆ ಸಿದ್ಧಗೊಳಿಸಲಾಗಿದೆ.

Advertisement

ರಾತ್ರಿಯ ಭೋಜನ:

ರಾಷ್ಟ್ರಪತಿಯವರ ರಾತ್ರಿಯ ಭೋಜನ, ಉಟೋಪಚಾರ ವ್ಯವಸ್ಥೆಗಾಗಿ  ಹೊಸದಿಲ್ಲಿಯಿಂದ ಆಗಮಿಸಿದ್ದ ಬಾಣಸಿಗನ ನೇತೃತ್ವದಲ್ಲಿ ರಾತ್ರಿಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ನಗರದ ಹೊಟೇಲ್‌ ಓಶಿಯನ್‌ ಪರ್ಲ್ ನ 15ಕ್ಕೂ ಹೆಚ್ಚು ಮಂದಿ ಅಡುಗೆ ಸಿಬಂದಿ ಸಹಕರಿಸಿದರು. ಗ್ರೀನ್‌ ಸಲಾಡ್‌, ಪರ್ವಾಲ್‌ ಸಬ್ಜಿ, ಹಾಗಲಕಾಯಿ ಪಲ್ಯ, ಬೇಳೆಸಾರು, ಮೊಸರು, ದಾಲ್‌, ರೋಟಿ, ಅನ್ನವನ್ನು ಸಿದ್ಧಪಡಿಸಲಾಗಿತ್ತು.

ಇಂದು ಬೆಳಗ್ಗೆ ಶೃಂಗೇರಿಗೆ:

ರಾಷ್ಟ್ರಪತಿಯವರು ಶುಕ್ರವಾರ ಬೆಳಗ್ಗೆ ಉಪಾಹಾರ ಸ್ವೀಕರಿಸಿ 10.30ಕ್ಕೆ ವಿಮಾನ ನಿಲ್ದಾಣಕ್ಕೆ  ತೆರಳಿ 10.55ಕ್ಕೆ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ತೆರಳಲಿದ್ದಾರೆ. ಉಪಾಹಾರಕ್ಕೆ  ದಕ್ಷಿಣ ಭಾರತದ ಖಾದ್ಯವಾದ ಇಡ್ಲಿ, ಉತ್ತಪ್ಪಮ್‌, ಚಟ್ನಿ, ಸಾಂಬಾರು, ಚಹಾ/ಕಾಫಿ, ಹಣ್ಣು ಹಂಪಲು ವ್ಯವಸ್ಥೆಗೊಳಿಸಲಾಗಿದೆ. ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್‌ ಅವರಿಗೂ ಕರಾವಳಿಯ ಜನಪ್ರಿಯ ತಿಂಡಿಗಳಾದ ನೀರುದೋಸೆ, ಸಂಜೀರ, ಬಾಳೆ ಹಣ್ಣು ಪೋಡಿ, ಮದ್ದೂರು ವಡೆ ಸೇರಿದಂತೆ ಪ್ರತ್ಯೇಕ ಮೆನು ವ್ಯವಸ್ಥೆಗೊಳಿಸಲಾಗಿದೆ.

ರಾಷ್ಟ್ರಪತಿಯವರನ್ನು ಸ್ವಾಗತಿಸಲು ಆಗಮಿಸಿರುವ ರಾಜ್ಯಪಾಲರು ನಗರದ ಓಶಿಯನ್‌ ಪರ್ಲ್ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಷ್ಟ್ರಪತಿಯವರು ಶುಕ್ರವಾರ ಸಂಜೆ ಹೊಸದಿಲ್ಲಿಗೆ ತೆರಳಿದ ಬಳಿಕ ರಾಜ್ಯಪಾಲರು ಬೆಂಗಳೂರಿಗೆ ತೆರಳುವರು.

ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಜತೆ ಆಗಮಿಸಿರುವ ಸಿಬಂದಿಗೆ ನಗರದ  ನವಭಾರತ ವೃತ್ತ ಹಾಗೂ ಬಿಜೈ ಕಾಪಿಕಾಡ್‌ನ‌ಲ್ಲಿರುವ ಓಶಿಯನ್‌ ಪರ್ಲ್ ಹೊಟೇಲ್‌ಗ‌ಳ 65 ಕೊಠಡಿಗಳಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.

ಬಿಗಿ ಭದ್ರತೆ:

ರಾಷ್ಟ್ರಪತಿ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅವವರ ಸಂಚಾರದ ವೇಳೆ ವಿಮಾನ ನಿಲ್ದಾಣದಿಂದ ಸಕೀìಟ್‌ ಹೌಸ್‌ ವರೆಗಿನ ರಸ್ತೆಯನ್ನು ಝೀರೋ ಟ್ರಾಫಿಕ್‌ ಮಾಡಲಾಗಿತ್ತು. ಕೆಪಿಟಿ ಸರ್ಕಲ್‌ ಬಳಿ ಹೆದ್ದಾರಿಯಲ್ಲಿಯೂ ಅವರ ಆಗಮನಕ್ಕೂ ಅರ್ಧತಾಸು ಮೊದಲೇ ವಾಹನಗಳ ಸಂಚಾರ ತಡೆ ಹಿಡಿಯಲಾಗಿತ್ತು. ಗುರುವಾರ ಸಂಜೆ 6ರಿಂದ ಸಕೀìಟ್‌ ಹೌಸ್‌ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದ್ದು, ಶುಕ್ರವಾರ ಬೆಳಗ್ಗೆ 11 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಎಡಿಜಿಪಿ ಹಿತೇಂದ್ರ ಭದ್ರತಾ ವ್ಯವಸ್ಥೆಗಳ ಮೇಲುಸ್ತುವಾರಿ ವಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next