Advertisement

ಜಾಹೀರಾತು ಪ್ರಕಟಣೆ ಮುನ್ನ ಪೂರ್ವಾನುಮತಿ ಕಡ್ಡಾಯ

10:30 AM May 17, 2022 | Team Udayavani |

ಧಾರವಾಡ: ಕರ್ನಾಟಕ ವಿಧಾನಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಜೂ.13ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಣೆಗೆ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಎಂಸಿಎಂಸಿ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಡಾ|ಸುರೇಶ ಇಟ್ನಾಳ ಹೇಳಿದರು.

Advertisement

ನಗರದ ಜಿಪಂ ಕಚೇರಿಯಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ(ಎಂಸಿಎಂಸಿ) ರಚಿಸಲಾಗಿದೆ. ಅನುಮಾನಾಸ್ಪದ ಪೇಡ್‌ ನ್ಯೂಸ್‌ಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.

ಯಾವುದೇ ಅಭ್ಯರ್ಥಿ, ರಾಜಕೀಯ ಪಕ್ಷಗಳ ಪರವಾಗಿ ಪ್ರಭಾವ ಬೀರುವ ರೀತಿಯಲ್ಲಿ ವಿಶೇಷ ಸುದ್ದಿ, ಬರಹಗಳನ್ನು ಪ್ರಕಟಿಸಬಾರದು. ಟಿವಿ, ಕೇಬಲ್‌ ಚಾನೆಲ್‌, ರೇಡಿಯೋ, ಧ್ವನಿ ಸಂದೇಶ, ಬಲ್ಕ್ ಎಸ್‌ಎಂಎಸ್‌, ಇ-ಪೇಪರ್‌ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಣೆಗೆ ಮುನ್ನ ಜಾಹೀರಾತಿನ ವಿನ್ಯಾಸದ ಸಿಡಿ ಹಾಗೂ ಅಕ್ಷರರೂಪದ ಮುದ್ರಿತ ಪ್ರತಿಗಳನ್ನು ಅನೆಕ್ಸರ್‌ “ಎ’ದೊಂದಿಗೆ ಲಗತ್ತಿಸಿ ಜಿಲ್ಲಾ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಸಮಿತಿ ಅವುಗಳನ್ನು ಪರಿಶೀಲಿಸಿ ಅನೆಕ್ಸರ್‌ “ಬಿ’ದಲ್ಲಿ ಪ್ರಮಾಣ ಪತ್ರ ನೀಡುವುದು. ಮಾಧ್ಯಮಗಳು ಈ ಪ್ರಮಾಣ ಪತ್ರದ ಪ್ರತಿಯನ್ನು ಪಡೆದ ಬಳಿಕವೇ ಜಾಹೀರಾತು ಪ್ರಕಟಿಸಬೇಕು. ಜಾಹೀರಾತು ಪ್ರಕಟಣೆಗೆ ಮುನ್ನ ಅಭ್ಯರ್ಥಿಯ ಸಮ್ಮತಿಯನ್ನು ಖಚಿತಪಡಿಸಿಕೊಳ್ಳಬೇಕು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆ 171 ಹೆಚ್‌ ಪ್ರಕಾರ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಲಾಗುವುದು. ಕರಪತ್ರಗಳು, ಭಿತ್ತಿಪತ್ರಗಳನ್ನು ಮುದ್ರಿಸುವಾಗ ಮುದ್ರಕರು, ಪ್ರಕಾಶಕರ ಹೆಸರು,ವಿಳಾಸ ಹಾಗೂ ಪ್ರತಿಗಳ ಸಂಖ್ಯೆಯನ್ನು ಅದರಲ್ಲಿ ನಮೂದಿಸಬೇಕು. ಈ ಸೂಚನೆ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದರು. ಜಿಲ್ಲಾ ಎಂಸಿಎಂಸಿ ಸಮಿತಿ ಸದಸ್ಯ ಕಾರ್ಯದರ್ಶಿ ಮಂಜುನಾಥ ಡೊಳ್ಳಿನ ಸಭೆ ನಿರ್ವಹಿಸಿದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪ್ರಕಾಶ ಹಳ್ಯಾಳ, ಸಿದ್ದು ಕಲ್ಯಾಣಶೆಟ್ಟಿ, ಮಹೇಶ ಪತ್ತಾರ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next