ಚಿತ್ತಾಪುರ: ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗುವುದರ ಜೊತೆಗೆ ರಾಜ್ಯ ಸರ್ಕಾರದ ನೂತನ ಸಮಾಜ ಕಲ್ಯಾಣ ಇಲಾಖೆ ಮತ್ತು ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಚಿತ್ತಾಪುರ ಪಟ್ಟಣಕ್ಕೆ ಆಗಮಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರನ್ನು ಸ್ವಾಗತಿಸಲು ಪಟ್ಟಣದಲ್ಲಿ ಭರದ ಸಿದ್ಧತೆ ನಡೆದಿದೆ.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆಯುವ ನೂತನ ಸಚಿವರಿಗೆ ಸನ್ಮಾನ ಹಾಗೂ ಅಭಿನಂದನ ಸಮಾರಂಭದ ವೇದಿಕೆ ನಿರ್ಮಾಣಗೊಂಡಿದೆ.ಜೂ.27ರಂದು ಬೆಳಗ್ಗೆ 11:00ಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಪಾರ ಗಣ್ಯರಿಂದ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಿಂದ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ಧ್ವಜಗಳು, ಪ್ಲೇಕ್ಸ್‌ಗಳು, ಕಟೌಟ್‌ಗಳು ರಾರಾಜಿಸಲಿವೆ.
ಮೆರವಣಿಗೆಯು ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಿಂದ ಲಾಡ್ಜೀಂಗ್ ಕ್ರಾಸ್, ಕೋರ್ಟ್ ರಸ್ತೆ, ಕೇಳಗೇರಿ ವೃತ್ತ, ಬಸವೇಶ್ವರ ವೃತ್ತ, ಚಿತ್ತಾವಲಿ ಚೌಕ್, ಕಪಡಾ ಬಜಾರ್, ಜನತಾ ಚೌಕ್, ನಾಗಾವಿ ವೃತ್ತ, ಸ್ಟೇಷನ್ ರಸ್ತೆ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಸಾಗಿ ಮಧ್ಯಾಹ್ನ 1:00ರ ಹೊತ್ತಿಗೆ ಬಜಾಜ್ ಕಲ್ಯಾಣ ಮಂಟಪದ ಪ್ರಧಾನ ವೇದಿಕೆ ತಲುಪಲಿದೆ.
ನಂತರ ಬಜಾಜ್ ಕಲ್ಯಾಣ ಮಂಟಪದಲ್ಲಿ ನೂತನ ಸಚಿವರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ಪ್ರಧಾನ ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಚಿತ್ತಾಪುರ ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಹಾಗೂ ತಾಲೂಕು ಯುವ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಮುಖಂಡರಿಂದ ಸನ್ಮಾನ ನಡೆಯಲಿದೆ.
ಸನ್ಮಾನ ಹಾಗೂ ಅಭಿನಂದನಾ ಸಮಾರಂಭಕ್ಕೆ ಸುಮಾರು 10ರಿಂದ 15 ಸಾವಿರ ಜನ ಬರುವ ನಿರೀಕ್ಷೆ ಇದೆ. ಮಹಿಳೆಯರಿಗೆ ಹಾಗೂ ಗಣ್ಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಚಾಲಕರ ಸಮಿತಿ, ಸ್ವಾಗತ ಸಮಿತಿ, ಸ್ವಚ್ಛತಾ ಸಮಿತಿ, ಪ್ರಚಾರ ಸಮಿತಿ ಸೇರಿ ಹಲವು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 5-6 ಜನ ಸದಸ್ಯರಿದ್ದಾರೆ. ಕಾಂಗ್ರೆಸ್ ತಾಲೂಕು ಘಟಕದ ವತಿಯಿಂದ ಬೃಹತ್ ವೇದಿಕೆ ನಿರ್ಮಿಸಿದೆ. ಭದ್ರತೆಗಾಗಿ ಪಟ್ಟಣದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ನೂತನ ಸಚಿವರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭಕ್ಕೆ ತಾಲೂಕು ಹಾಗೂ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಲಿದ್ದಾರೆ. ಆದ್ದರಿಂದ ಈ ಸನ್ಮಾನ ಕಾರ್ಯಕ್ರಮ ರಾಜ್ಯದಲ್ಲಿಯೇ ಮಾದರಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಕಾರ್ಯಕ್ರಮದಲ್ಲಿ ಯಾವುದೇ ರಿತೀಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.ಕಾರ್ಯಕ್ರಮವನ್ನು ಶಿಸ್ತು ಬದ್ಧವಾಗಿ ನಡೆಸುವ ಹೊಣೆ ನಮ್ಮೆಲ್ಲರ ಮೇಲಿದೆ. ಜಾಗರೂಕತೆಯಿಂದ ಜವಾಬ್ದಾರಿ ನಿರ್ವಹಿಸಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ.
ಭೀಮಣ್ಣ ಸಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಾಗರೆಡ್ಡಿ ಪಾಟೀಲ್, ಕೆಪಿಸಿಸಿ ಸದಸ್ಯ