ಕಲಬುರಗಿ: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಲ್ಲದೇ ಮುಂಬರುವ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೂ ಪಕ್ಷದಲ್ಲಿ ಈಗಾಗಲೇ ಆಂತರಿಕವಾಗಿ ಸಿದ್ದತೆಗಳು ನಡೆದಿವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ವಿವಿಧ ಕಾರ್ಯಕ್ರ.ಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಶುಕ್ರವಾರ ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸ್ಪಷ್ಟ ಬಹುಮತ ಪಡೆಯುವಲ್ಲಿ ಕೆಲವೇ ಸೀಟುಗಳ ಕೊರತೆಯಾಗಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದನ್ನು ತಪ್ಪಿಸಲು, ಬಹು ಮುಖ್ಯವಾಗಿ ಬಿಜೆಪಿ ಪಕ್ಷ 140ರಿಂದ 150 ಸೀಟುಗಳನ್ನು ಗೆಲ್ಲಲು ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಈಗಲೇ ಸಿದ್ದತೆಗಳನ್ನು ಅಂದರೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತಾಗಲು ಜತೆಗೆ ಕಲ್ಯಾಣ ಕರ್ನಾಟಕದ ಭಾಗದಲ್ಲೂ ಇನ್ನಷ್ಟು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಲಕ್ಷ್ಯ ವಹಿಸಿ ಕಾರ್ಯೋನ್ಮುಖಗೊಳ್ಳಬೇಕಿದೆ. ಅಂದರೆ ಸ್ವಲ್ಲೇ ಮತಗಳ ಅಂತರದಲ್ಲಿ ಪಕ್ಷ ಸೋತಿರುವುದು ಜತೆಗೆ ಈ ಸಲ ಯಾರು ಅಭ್ಯರ್ಥಿಯಾದರೆ ಗೆಲ್ಲಬಹುದು ಹಾಗೂ ಗೆಲ್ಲಲು ಪೂರಕವಾಗುವ ಅಂಶಗಳ್ಯಾವವು ಎಂಬುದರ ಕುರಿತು ಚಿಂತನೆಗೆ ಚಾಲನೆ ನೀಡಲಾಗುವುದು ಎಂದು ವಿವರಣೆ ನೀಡಿದರು.
ಇದನ್ನೂ ಓದಿ: ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ 24 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರು. ಇದನ್ನು ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ಆದರೆ 25 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಹೇಳಿಕೆ ಕಾರ್ಯರೂಪಕ್ಕೆ ಬಂದಿತು. ಅದೇ ರೀತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಸಿಎಂ ಹೇಳಿರುವಂತೆ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಾಯಿತು. ಈಗ 150 ಸ್ಥಾನಗಳನ್ನು ಗೆಲ್ಲುವತ್ತ ಲಕ್ಷ್ಯ ಹೊಂದಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಬಸವಕಲ್ಯಾಣ ಉಪ ಚುನಾವಣೆಗೆ ಏಳೆಂಟು ಉತ್ತಮ ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ಒಬ್ಬರನ್ನು ಆಯ್ಕೆಗೊಳಿಸಲಾಗುವುದು. ಏಳೆಂಟು ಅಭ್ಯರ್ಥಿಗಳಲ್ಲಿ ತಾವೊಬ್ಬರು ಆಗಿದ್ದೀರಾ? ಎಂಬುದಕ್ಕೆ ನಿಂತು ಗೆಲ್ಲುವುದರಕ್ಕಿಂತ ನಿಂತವರನ್ನು ಗೆಲ್ಲಿಸುವುದೇ ಹೆಚ್ಚು ಖುಷಿ ತರುತ್ತದೆ ಎಂದು ಬಿ.ವೈ. ವಿಜೇಯಂದ್ರ ಹೇಳಿದರು
ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಯುವಕರಿಗೆ ಹಾಗೂ ಮಹಿಳೆಯರಿಗೂ ಆದ್ಯತೆ ನೀಡಲಾಗುವುದು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂದರು.
ಇದನ್ನೂ ಓದಿ: ಹುಣಸೋಡು ದುರ್ಘಟನೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಚಿವ ಮುರುಗೇಶ್ ನಿರಾಣಿ