Advertisement

ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

11:51 PM Nov 28, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ಗಡಿ ಪ್ರದೇಶಗಳಲ್ಲಿ ತಪಾಸಣೆ ಬಿಗಿಗೊಳಿಸಿ, ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸಿ. ಲಸಿಕೆ ಹಾಕಿಸಿಕೊಳ್ಳದವರನ್ನು ಗುರುತಿಸಿ, ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು.ಹಾಟ್‌ಸ್ಪಾಟ್‌ಗಳ ಮೇಲೆ ನಿಗಾ ಇರಿಸಬೇಕು.

Advertisement

– ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಿವಾರ ಬರೆದ ಪತ್ರದ ಪ್ರಧಾನ ಅಂಶ. ಹೀಗಾಗಿ ಮತ್ತೆ ದೇಶಾದ್ಯಂತ ಬಿಗಿ ಕೊರೊನಾ ತಡೆ ನಿಯಮಗಳು ಜಾರಿಯಾಗುವ ಸಾಧ್ಯತೆಗಳು ಅಧಿಕವಾಗಿವೆ.

ಇದರ ಜತೆಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಕುಮಾರ್‌ ಭಲ್ಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿ. 15ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭ ಮಾಡುವ ನಿರ್ಧಾರವನ್ನು ಪುನರ್‌ ಪರಿಶೀಲಿಸಲಾಗಿದೆ. ಹೆಚ್ಚು ಅಪಾಯವಿರುವ ದೇಶಗಳಿಂದ ಸದ್ಯ ವಿಮಾನ ಯಾನ ಬೇಡ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರಕಾ ರಕ್ಕೆ ಮನವಿ ಮಾಡಿದ್ದಾರೆ.

ಹಲವು ದೇಶಗಳಲ್ಲಿ ಸೋಂಕಿನ ಹೊಸ ರೂಪಾಂತರಿ ಹಬ್ಬುತ್ತಿರುವುದರಿಂದ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ. ಅದಕ್ಕಾಗಿ ರವಿವಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್‌ಭೂಷಣ್‌ ಪತ್ರ ಬರೆದಿದ್ದಾರೆ. ಕಟ್ಟುನಿಟ್ಟಿನ ಕ್ರಮಗಳಿಂದ ಹೊಸ ರೂಪಾಂತರಿ ಹಬ್ಬ ದಂತೆ ತಡೆಯಬಹುದಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ವಿದೇಶಗಳಿಂದ ಆಗಮಿಸಿದವರ ವಿವರಗಳನ್ನು ಸಂಗ್ರಹಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಹೊಸ ಸಮಸ್ಯೆಯ ಹಿನ್ನೆಲೆಯಲ್ಲಿ ಅದನ್ನು ಮತ್ತಷ್ಟು ಬಿಗಿಗೊಳಿಸಬೇಕಾಗಿದೆ. ಅದಕ್ಕಾಗಿ ಹಾಲಿ ಇರುವ ಕ್ರಮಗಳಲ್ಲಿ ಬದಲಾವಣೆ ತರಬೇಕಾಗಿದೆ ಎಂದಿದ್ದಾರೆ. ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ ಎಂಬ ವರ್ಗೀಕರಣದಡಿ ಇರುವ ದೇಶಗಳಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇರಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement

ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಮತ್ತಷ್ಟು ಪರೀಕ್ಷೆಗಳು
ರೂಪಾಂತರಗೊಂಡ ತಳಿಯ ಸೋಂಕನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪರೀಕ್ಷೆ ಹೆಚ್ಚಳಕ್ಕೆ ವ್ಯವಸ್ಥೆ ಮಾಡಬೇಕು. 2ನೇ ಅಲೆಯ ತೀವ್ರತೆ ತಗ್ಗಿರುವ ಹಿನ್ನೆಲೆಯಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗಳ ಪ್ರಮಾಣ ಕೆಲವು ರಾಜ್ಯಗಳಲ್ಲಿ ಕುಗ್ಗಿದೆ. ಹೀಗಾಗಿ ಸೋಂಕು ಪತ್ತೆ ಕಷ್ಟವಾಗಲಿದೆ ಎಂದು ಆರೋಗ್ಯ ಕಾರ್ಯದರ್ಶಿ ಉಲ್ಲೇಖೀಸಿದ್ದಾರೆ.

ಸೋಂಕಿನ ಹಾಟ್‌ಸ್ಪಾಟ್‌ಗಳಲ್ಲಿ ಹೆಚ್ಚಿನ ನಿಗಾ ಇರಿಸಬೇಕು, ಸೂಕ್ತ ಸಮಯಕ್ಕೆ ಸ್ಯಾಂಪಲ್‌ಗ‌ಳನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ), ಜೈವಿಕ ವಿಜ್ಞಾನ ಖಾತೆ ಸಹಯೋಗದಲ್ಲಿ ಸ್ಥಾಪನೆಯಾಗಿರುವ ಲ್ಯಾಬ್‌ಗಳಿಗೆ ವಂಶವಾಹಿ ಪರೀಕ್ಷೆಗಾಗಿ ಕಳುಹಿಸಬೇಕು ಎಂದು ಸೂಚಿಸಿದ್ದಾರೆ. ಪಾಸಿಟಿವ್‌ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಗೃಹ ಕಾರ್ಯದರ್ಶಿ ಸಭೆ
ಹೊಸ ಆತಂಕದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಶನಿವಾರ ನಡೆಸಿದ್ದ ಸಭೆಯಲ್ಲಿ ಡಿ. 15ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭ ನಿರ್ಧಾರವನ್ನು ಕೇಂದ್ರ ಸರಕಾರ ಪುನರ್‌ ಪರಿಶೀಲಿಸಲಿದೆ. ರವಿವಾರ ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಕುಮಾರ್‌ ಭಲ್ಲಾ ನೇತೃತ್ವದಲ್ಲಿ ಮತ್ತೂಂದು ಸುತ್ತಿನ ಸಭೆ ನಡೆದಿದೆ.

ಸಭೆಯಲ್ಲಿ ಹೊಸ ರೂಪಾಂತರಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಪರಿಸ್ಥಿತಿಯ ಆಮೂಲಾಗ್ರ ಪರಾಮರ್ಶೆ ನಡೆಸಲಾಯಿತು. ಡಿ. 15ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಪುನಾರಂಭ ವಿಚಾರವನ್ನು ಪುನರ್‌ಪರಿಶೀಲಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ಸೋಂಕು ಪತ್ತೆ ಪರೀಕ್ಷೆ, ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಇರಿಸಲಾಗುತ್ತಿರುವ ನಿಗಾ, ಆರೋಗ್ಯ ತಪಾಸಣೆ, ವಿಶೇಷವಾಗಿ ಕೇಂದ್ರ ಸರಕಾರ ಅತ್ಯಂತ ಅಪಾಯಕಾರಿ ಎಂದು ವರ್ಗೀಕರಿಸಿರುವ ದೇಶಗಳಿಂದ ಆಗಮಿಸುವರ ಮೇಲೆ ಹೆಚ್ಚಿನ ನಿಗಾ ಇರಿಸಲು ನಿರ್ಧರಿಸಲಾಗಿದೆ.

ಎರಡು ತಿಂಗಳು ಕಾರ್ಯಕ್ರಮ ಬೇಡ: ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರಕಾರ ಸೂಚನೆ
ಮುಂದಿನ ಎರಡು ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಾ ಗಾರಗಳು ಬೇಡ ಎಂದು ರಾಜ್ಯ ಸರಕಾರವು ಶಿಕ್ಷಣ ಸಂಸ್ಥೆಗಳಿಗೆ ರವಿವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸೂಚಿಸಿದೆ.

ಕೇರಳ, ಮಹಾರಾಷ್ಟ್ರಗಳಿಂದ ಆಗಮಿ ಸುವ ವಿದ್ಯಾರ್ಥಿಗಳು 72 ತಾಸುಗಳ ಒಳಗಿನ ನೆಗೆಟಿವ್‌ ವರದಿ ಹೊಂದಿರ ಬೇಕು. ಆಗಮಿಸಿದ 7 ದಿನಗಳ ಬಳಿಕ ಮತ್ತೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾ ಗಬೇಕು. 15 ದಿನಗಳ ಅವಧಿಯಲ್ಲಿ ಕೇರಳ ದಿಂದ ಆಗಮಿಸಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ.

ಒಂದೇ ಸ್ಥಳದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪತ್ತೆಯಾದ ಸೋಂಕುಪೀಡಿತರಿಗೆ ಸರಕಾರದ ಮಾರ್ಗಸೂಚಿ ಅನ್ವಯ ಚಿಕಿತ್ಸೆ ನೀಡಲಾಗುತ್ತದೆ.
ಸ್ಕ್ರೀನಿಂಗ್‌ಗೆ ಆದೇಶ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್‌ ಮಾಡುವಂತೆ ಆದೇಶಿಸಲಾಗಿದೆ. ಪ್ರತಿನಿತ್ಯ ಕೇರಳದಿಂದ ಉದ್ಯೋಗ, ಶಿಕ್ಷಣ ನಿಮಿತ್ತ ರಾಜ್ಯಕ್ಕೆ ಆಗಮಿಸುವವರು 14 ದಿನಗಳಿಗೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರಬೇಕು ಎಂದು ಸರಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಮೂರು ಜಿಲ್ಲೆಗಳಲ್ಲಿ ಪ್ರತಿನಿತ್ಯ ಸ್ಕ್ರೀನಿಂಗ್‌
ಒಂದೇ ಕಡೆ ಅತ್ಯಧಿಕ ಸೋಂಕು ಪತ್ತೆಯಾದ ಧಾರವಾಡ, ಬೆಂಗಳೂರು, ಮೈಸೂರು ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿನಿತ್ಯ ಕೋವಿಡ್‌ ಸ್ಕ್ರೀನಿಂಗ್‌ ಕಡ್ಡಾಯಗೊಳಿಸಿದ್ದು, ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮಾರ್ಗ ಸೂಚಿಗಳೇನು?
-ಕೇರಳ, ಮಹಾರಾಷ್ಟ್ರಗಳಿಂದ ಆಗಮಿಸುವ ವಿದ್ಯಾರ್ಥಿಗಳು 72 ತಾಸುಗಳ ಒಳಗಿನ ಕೊರೊನಾ ನೆಗೆಟಿವ್‌ ವರದಿ ತರಬೇಕು.
-7 ದಿನಗಳ ಬಳಿಕ ಮತ್ತೆ ಪರೀಕ್ಷೆಗೆ ಒಳಗಾಗಬೇಕು.
-ನೆಗೆಟಿವ್‌ ಬಂದಿರುವ ವಿದ್ಯಾರ್ಥಿ ಗಳಿಗೆ 7 ದಿನಗಳ ಕ್ವಾರಂಟೈನ್‌, ಬಳಿಕ ಮತ್ತೆ ಆರ್‌ಟಿ-ಪಿಸಿಆರ್‌ ಪರೀಕ್ಷೆ.
-ಶಿಕ್ಷಣ ಸಂಸ್ಥೆಗಳಲ್ಲಿ ಸೋಂಕು ಪತ್ತೆಯಾದವ ರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ.
-ಸಂಸ್ಥೆಗಳ ಮುಖ್ಯಸ್ಥರು ಕೊರೊನಾ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಮುಂಜಾಗರೂಕತೆ ವಹಿಸಬೇಕು.

ರಾಜ್ಯದಲ್ಲಿ ಇದುವರೆಗೆ ಹೊಸ ರೂಪಾಂತರಿ ಪ್ರಕರಣ ದೃಢಪಟ್ಟಿಲ್ಲ. ಅದು ಕಾಣಿಸಿಕೊಂಡಿರುವ ದೇಶಗಳಿಂದ ಪ್ರಯಾಣಿಕರ ಆಗಮನದ ಮೇಲೆ ಪೂರ್ಣ ನಿಷೇಧ ಹೇರಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇರಳದಿಂದ ಸೋಂಕು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
 -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next