ಅಥಣಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಬಿಇಒ ಎಂ.ಬಿ. ಮುರಟಗಿ ಪತ್ರಿಕೆಗೆ ವಿವರಣೆ ನೀಡಿದರು.
ಜೂ. 25ರಿಂದ ಜು. 4ರ ವರೆಗೆ ಪರಿಕ್ಷೆ ನಡೆಯಲಿದೆ. ತಾಲೂಕಿನಲ್ಲಿ 5,827 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿನಲ್ಲಿ 21 ಪರೀಕ್ಷೆ ಕೇಂದ್ರಗಳಿವೆ. ಅದರಲ್ಲಿ ಪಟ್ಟಣದಲ್ಲಿ 3, ಗ್ರಾಮೀಣ ಭಾಗದಲ್ಲಿ 18 ಪರೀಕ್ಷೆ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ ಎಂದರು.
ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಜೊತೆಗೆ ಒಂದು ಕೊಠಡಿಯಲ್ಲಿ ಕನಿಷ್ಠ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಪರೀಕ್ಷೆ ಕೇಂದ್ರಗಳ ಮುಖ್ಯ ದ್ವಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದರೆ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪರೀಕ್ಷೆ ಸಮಯದಲ್ಲಿ ನಿಗದಿ ಪಡಿಸಿದ ಸ್ಥಳ ಕಂಟೇನ್ಮೆಂಟ್ ಝೋನ್ ಆದರೆ ಕೇಂದ್ರ ಬದಲಾವಣೆಗಾಗಿ ಹೆಚ್ಚುವರಿಯಾಗಿ ಮೂರು ಪರೀಕ್ಷೆ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಸಾರಿಗೆ ಅನುಕೂಲ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರಗಳಿಗೆ ಬರುವುದಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ನೀಡಲಾಗುವುದು. 75 ಲೀಟರ್ ಸ್ಯಾನಿಟೈಸರ್ ಹಾಗೂ 10,000 ಸಾವಿರ ಮಾಸ್ಕ್ ಕ್ರೋಢೀಕರಿಸಲಾಗಿದೆ ಎಂದು ವಿವರಿಸಿದರು.
ಬೇರೆ ಜಿಲ್ಲೆಯ 61 ವಿದ್ಯಾರ್ಥಿಗಳು ತಾಲೂಕಿಗೆ ಬಂದಿದ್ದಾರೆ. ತಾಲೂಕಿನ 12 ವಿದ್ಯಾರ್ಥಿಗಳು ಹೊರ ಜಿಲ್ಲೆಗೆ ಹೋಗಿದ್ದಾರೆ. ಅಕ್ರಮ ತಡೆಗಟ್ಟಲು ಪ್ರತಿ ಕೊಠಡಿಗಳಿಗೂ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.