ದಾವಣಗೆರೆ: ಚಳಿಗಾಲದ ವಾತಾವರಣದಲ್ಲಿ ಕೋವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆಯಿದ್ದು, ಎಲ್ಲರೂ ಮೊದಲಿಗಿಂತಲೂ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂಬ ಮಾತ್ರಕ್ಕೆ ಗೆದ್ದ ಭಾವನೆ ಸಲ್ಲದು. ಮುಂಬರುವ ದಿನಗಳು ಇನ್ನೂ ಕಠಿಣವಾಗಿರಲಿವೆ. ನವೆಂಬರ್ ನಿಂದ ಚಳಿಗಾಲ ಹೆಚ್ಚಾಗಲಿದ್ದು, ಇನ್ನೊಂದು ವಾರ, ಹದಿನೈದು ದಿನಗಳಲ್ಲಿ ಪ್ರಕರಣ ಹೆಚ್ಚಾಗುವ ಸಂಭವ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯಲ್ಲಿ ದಿನಕ್ಕೆ 5000 ಜನರಿಗೆ ಚಿಕಿತ್ಸೆ ನೀಡಲು ಬೇಕಾದ ಮೂಲಭೂತ ಸೌಕರ್ಯ, ಆಕ್ಸಿಜನ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್, ತಜ್ಞರು, ಕನ್ಸಲ್ಟೆಂಟ್ಸ್, ಸಿಬ್ಬಂದಿಯನ್ನು ತಯಾರಿ ಮಾಡಿಕೊಂಡಿದ್ದೇವೆ. ನ. 10 ರಿಂದ 15 ರನಂತರ ಈ ಹಿಂದೆ ವಹಿಸಿದ್ದಕ್ಕಿಂತ ಹತ್ತು ಪಟ್ಟು ಎಚ್ಚರಿಕೆ ವಹಿಸಬೇಕು ಎಂದರು.
ಶೇ. 95 ಗುಣಮುಖ: ಜಿಲ್ಲೆಯಲ್ಲಿ ಗುಣಮುಖ ಪ್ರಮಾಣ ಶೇ. 95 ಇದೆ. ಮರಣ ಪ್ರಮಾಣ ಶೇ.1 ಹಾಗೂ ಸಕ್ರಿಯ ಪ್ರಕರಣಗಳು ಶೇ.4 ಇದೆ. ವೈದ್ಯರ ತಂಡ, ಜಿಲ್ಲಾಡಳಿತ, ಜಿ.ಪಂ, ಪಾಲಿಕೆ ಸೇರಿದಂತೆ ನಮ್ಮ ತಂಡ ತೃಪ್ತಿದಾಯಕ ಕೆಲಸ ಮಾಡುತ್ತಿದೆ. ಕೆಲಸ ಮುಗಿದ ಭಾವನೆ ತಂಡದಲ್ಲಿ ಇಲ್ಲ. ಮುಂದೆಯೂ ಹಿಂದಿನಷ್ಟೇ ಸ್ಫೂರ್ತಿಯಿಂದ, ಸಕ್ರಿಯವಾಗಿ ನಮ್ಮ ತಂಡ ಕೆಲಸ ಮಾಡಲಿದೆ ಎಂದರು.
ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಡಿ ಗ್ರೂಪ್ ಆದಿಯಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕೆ ಬಂದಿದೆ. ಹಾಗೂ ಮರಣ ಪ್ರಮಾಣ ಸರಾಸರಿ ಶೇ.1.2 ಇದೆ. ಪ್ರತಿ ದಿನ ನೂರರ ಒಳಗೆ ಕೊರೊನಾ ಪ್ರಕರಣ ಬರುತ್ತಿವೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಇಂದು ಕೇವಲ 87ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿ ಕೇವಲ 1 ರೋಗಿಗೆ ಮಾತ್ರ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಜಿಲ್ಲೆಯಲ್ಲಿ ಒಟ್ಟು 11 ಜನ ಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‌ಒ ಡಾ| ನಾಗರಾಜ್, ಡಿಎಸ್ ಡಾ| ಜಯಪ್ರಕಾಶ್, ಡಿಎಸ್‌ಒ ಡಾ| ರಾಘವನ್, ಆರ್‌ಸಿಎಚ್‌ಒ ಡಾ| ಮೀನಾಕ್ಷಿ, ಡಾ| ರವಿ ಇತರೆ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.