Advertisement

ಧಾರವಾಡದಲ್ಲಿ ಮಹಿಳಾ ಬಯಲು ಬಂದೀಖಾನೆಗೆ ಸಿದ್ಧತೆ

06:45 AM Aug 16, 2018 | Team Udayavani |

ಧಾರವಾಡ: ರಾಜ್ಯದ ಮೊದಲ ಮಹಿಳಾ ಬಯಲು ಬಂದೀಖಾನೆ ಧಾರವಾಡದಲ್ಲಿ ಸ್ಥಾಪನೆಗೆ ಸಿದ್ಧತೆ ನಡೆದಿದ್ದು, ಈ ಬಗ್ಗೆ ಧಾರವಾಡ ಕೇಂದ್ರ ಕಾರಾಗೃಹ ಸಮಗ್ರ ಅಧ್ಯಯನ ನಡೆಸಿ ಶೀಘ್ರವೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

Advertisement

ಸದ್ಯ ರಾಜ್ಯದಲ್ಲಿ ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಬಯಲು ಬಂದೀಖಾನೆ ಇದೆ. ಆದರೆ ಇದು ಪುರುಷರಿಗೆ ಮಾತ್ರ. ಸನ್ನಡತೆ ಆಧಾರಿತ ಮಹಿಳೆಯರಿಗಾಗಿಯೇ ಪ್ರತ್ಯೇಕ ಬಯಲು ಕಾರಾಗೃಹ ಅಗತ್ಯವಿದ್ದು, ಅದನ್ನು ಧಾರವಾಡದಲ್ಲಿ ಸ್ಥಾಪಿಸಬೇಕೆಂದು ಬಂದೀಖಾನೆ ಇಲಾಖೆ ಹೊಸ ಯೋಜನೆ ರೂಪಿಸುತ್ತಿದ್ದು, ಇದಕ್ಕೆ  ಹಿರಿಯ ಅಧಿಕಾರಿಗಳು ಸಹಮತ ಸೂಚಿಸಿದ್ದಾರೆ.

ಕೇರಳದಲ್ಲಿ ಈಗಾಗಲೇ ಮಹಿಳೆಯರಿಗೆ ಪ್ರತ್ಯೇಕ ಬಯಲು ಬಂದೀಖಾನೆ ಆರಂಭಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿತ್ತಲ್ಲದೇ ಮಹಿಳಾ ಕೈದಿಗಳ ಮನಃ ಪರಿವರ್ತನೆಗೆ ಹೆಚ್ಚು ಅನುಕೂಲವಾಗಿದೆ. ಉತ್ತರ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಮಹಿಳಾ ಕೈದಿಗಳನ್ನು ಬಂಧನದಲ್ಲಿಡದೆ ಅವರಿಗೆ ಉದ್ಯೋಗ, ಕುಟುಂಬ ನಿರ್ವಹಣೆಗೆ ಕೆಲಸ ಮಾಡಲು ಅವಕಾಶ ನೀಡಿದೆ. ಇದೆಲ್ಲವನ್ನೂ ಆಧಾರವಾಗಿಟ್ಟುಕೊಂಡು ದೇಶದಲ್ಲೇ ಮಾದರಿ ಮಹಿಳಾ ಬಯಲು ಬಂದೀಖಾನೆ ಸ್ಥಾಪಿಸುವುದಕ್ಕೆ ಚಿಂತನೆ ನಡೆದಿದೆ.

ಹೈಕೋರ್ಟ್‌ ಸಮೀಪ ಭೂಮಿ: ಬಂದೀಖಾನೆಗೆ ಕನಿಷ್ಠ 50ರಿಂದ 75 ಎಕರೆ ಜಮೀನು ಬೇಕು. ಸದ್ಯಕ್ಕೆ ಧಾರವಾಡ-ಬೆಳಗಾವಿ ರಸ್ತೆಯಲ್ಲಿನ ಹೈಕೋರ್ಟ್‌ ಬಳಿ ಅಥವಾ ಧಾರವಾಡ-ನವಲಗುಂದ ರಸ್ತೆಯ ಮಾರಡಗಿ ಸಮೀಪದಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ ನವಲಗುಂದ ರಸ್ತೆಯಲ್ಲಿ ಉತ್ತಮ ಕೃಷಿ ಭೂಮಿ ಇದ್ದು ಭೂ ಸ್ವಾಧೀನ ಕಷ್ಟವಾಗುವ ಸಾಧ್ಯತೆ ಇರುವುದನ್ನು ಮನಗಂಡಿರುವ ಅಧಿಕಾರಿಗಳು, ಧಾರವಾಡ-ಬೆಳಗಾವಿ ರಸ್ತೆಯಲ್ಲಿನ ಹೈಕೋರ್ಟ್‌ ಸಮೀಪ ಅಥವಾ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪಕ್ಕದಲ್ಲಿ ಬಯಲು ಬಂದೀಖಾನೆ ಸ್ಥಾಪಿಸುವುದು ಸೂಕ್ತ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಏನಿದು ಬಯಲು ಬಂದೀಖಾನೆ?
ವಿವಿಧ ಬಗೆಯ ಅಪರಾಧಗಳನ್ನು ಮಾಡಿ ಜೈಲುಪಾಲಾದ ಕೈದಿಗಳನ್ನು ಬರೀ ಕೊಠಡಿಯಲ್ಲಿ ಅಥವಾ ಕಂಬಿಯ ಹಿಂದೆ ಕೂಡಿ ಹಾಕಿ ಶಿಕ್ಷಿಸುವ ಬದಲು ಅವರಲ್ಲಿ ಮನಃ ಪರಿವರ್ತನೆ ತರಲು ಬಳಕೆಯಾಗುತ್ತಿರುವ ಹೊಸ ವಿಧಾನ ಇದು. ಇಲ್ಲಿ ಕೈದಿಗಳನ್ನು ಸ್ವತಂತ್ರವಾಗಿ ಬಿಟ್ಟು, ಅವರಿಂದ ಕೃಷಿ, ತೋಟಗಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ಹೈನುಗಾರಿಕೆ ಮಾಡಿಸಲಾಗುತ್ತದೆ. ಆ ಮೂಲಕ ಅವರಲ್ಲಿ ಬದಲಾವಣೆ ಮೂಡಿಸಿ ಮತ್ತೆ ಅಪರಾಧ ಚಟುವಟಿಕೆಯತ್ತ ಸುಳಿಯದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

Advertisement

ಪ್ರಸ್ತಾವನೆಯಲ್ಲೇನಿದೆ?
ಬಯಲು ಬಂದೀಖಾನೆ ಸ್ಥಾಪಿಸಲು ಧಾರವಾಡದ ಹವಾಗುಣ, ಸಾಮಾಜಿಕ, ಸಾಂಸ್ಕೃತಿಕ ವಾತಾವರಣ ಉತ್ತಮವಾಗಿದೆ ಎಂಬ ಅಭಿಪ್ರಾಯ  ವ್ಯಕ್ತವಾಗಿದೆ. ಇಲ್ಲಿ ಮಹಿಳೆಯರಿಗೆ ಕೃಷಿ, ತೋಟಗಾರಿಕೆ, ಕೈಮಗ್ಗ, ಕರಕುಶಲ ತರಬೇತಿ ಸೇರಿ ಸ್ವಂತ ಉದ್ಯೋಗಕ್ಕೆ ಅಗತ್ಯ ತರಬೇತಿ ನೀಡಲು ಅನುಕೂಲವಿದೆ. ಸಾರಿಗೆ ವ್ಯವಸ್ಥೆ, ಮಹಿಳಾ ಸುರಕ್ಷತೆ, ಅಧಿಕಾರಿಗಳ ಭೇಟಿ ಮತ್ತು ನಿರ್ವಹಣೆಗೂ ಧಾರವಾಡ ಸೂಕ್ತವಾಗಿದೆ. ಹೀಗಾಗಿ ಇಲ್ಲಿಯೇ  ಸ್ಥಾಪಿಸಬೇಕೆಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಶೀಘ್ರವೇ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಅಗತ್ಯವಾದ ಭೂಮಿ ನೀಡುವಂತೆ ಧಾರವಾಡ ಜಿಲ್ಲಾಧಿಕಾರಿಗಳ ಜತೆಗೂ ಚರ್ಚಿಸಲಾಗುವುದು.
– ಡಾ.ಅನೀತಾ, ಧಾರವಾಡ ಕೇಂದ್ರ ಕಾರಾಗೃಹ ಅಧೀಕ್ಷಕಿ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next