Advertisement

2ನೇ ಹಂತದ ವೈಟ್‌ ಟಾಪಿಂಗ್‌ಗೆ ಸಿದ್ಧತೆ

12:23 PM Sep 17, 2018 | |

ಬೆಂಗಳೂರು: ಮೊದಲ ಹಂತದ ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಲು ಹೆಣಗಾಡುತ್ತಿರುವ ಪಾಲಿಕೆ ಅಧಿಕಾರಿಗಳು, ಮೊದಲ ಹಂತ ಮುಗಿಯುವ ಮೊದಲೇ 2ನೇ ಹಂತದಲ್ಲಿ ಮತ್ತೆ 42 ರಸ್ತೆಗಳನ್ನು ವೈಟ್‌ಟಾಪಿಂಗ್‌ಗೆ ಒಳಪಡಿಸಲು ಟೆಂಡರ್‌ ಆಹ್ವಾನಿಸಿದ್ದಾರೆ. ಇದರಿಂದ ಮತ್ತೆ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಆತಂಕ ಎದುರಾಗಿದೆ.

Advertisement

ನಗರದ ರಸ್ತೆ ಗುಂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆಯು ಪ್ರಮುಖ 93.47 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ಟಾಪಿಂಗ್‌ಗೊಳಿಸಲು ಯೋಜನೆ ರೂಪಿಸಿತ್ತು. ಅದರಂತೆ ಮೊದಲ ಹಂತದಲ್ಲಿ 39.80 ಕಿ.ಮೀ. ರಸ್ತೆಯಲ್ಲಿ ಕಾಮಗಾರಿ ನಡೆಸಲು ಪಾಲಿಕೆ ಗುತ್ತಿಗೆ ನೀಡಿದೆ. ಆದರೆ, ಈವರೆಗೆ ಕೇವಲ 9.5 ಕಿ.ಮೀ ಉದ್ದದ ರಸ್ತೆಯಲ್ಲಿ ಮಾತ್ರ ಕಾಮಗಾರಿ ಮುಗಿದ್ದು, ಇನ್ನೂ 30 ಕಿ.ಮೀ ಕಾಮಗಾರಿ ಬಾಕಿಯಿದೆ. 

ಮೊದಲ ಹಂತದ ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳು, 2ನೇ ಹಂತದಲ್ಲಿ 42 ರಸ್ತೆಗಳ ವೈಟ್‌ ಟಾಪಿಂಗ್‌ಗೆ ಟೆಂಡರ್‌ ಆಹ್ವಾನಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪಾಲಿಕೆಯಿಂದ ಪರ್ಯಾಯ ವ್ಯವಸ್ಥೆ ಕೈಗೊಳ್ಳದ ಕಾರಣ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಜನ ಪರದಾಡಿದ್ದರು.

ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ, ಚುನಾವಣೆಗೆ ಮೊದಲು ವೈಟ್‌ ಟಾಪಿಂಗ್‌ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೂ ಎಚ್ಚೆತ್ತುಕೊಳ್ಳದ ಪಾಲಿಕೆ, ಇದೀಗ 2ನೇ ಹಂತದ ಕಾಮಗಾರಿಗೆ ಟೆಂಡರ್‌ ಕರೆದಿರುವುದು ಮುಂದೆ ಸಮಸ್ಯೆಗಳನ್ನು ತಂದೊಡ್ಡಲಿದೆ ಎಂಬುದು ಪ್ರತಿಪಕ್ಷದ ಆರೋಪ.

ವೈಟ್‌ಟಾಪಿಂಗ್‌ ವಸ್ತುಸ್ಥಿತಿ: ಹೊರವರ್ತುಲ ರಸ್ತೆಗಳು ಸೇರಿ ಒಟ್ಟು 29 ರಸ್ತೆಗಳನ್ನು ಪಾಲಿಕೆ ವೈಟ್‌ಟಾಪಿಂಗ್‌ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದೆ. ಅದರಂತೆ 972.69 ಕೋಟಿ ರೂ. ವೆಚ್ಚದಲ್ಲಿ ಒಟ್ಟು 93.47 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಮಾಡುವ ಉದ್ದೇಶವಿದೆ. ಈ ಪೈಕಿ ಮೊದಲ ಹಂತದಲ್ಲಿ 281 ಕೋಟಿ ರೂ. ವೆಚ್ಚದಲ್ಲಿ ಐದು ಮಾರ್ಗಗಳ 39.80 ಕಿ.ಮೀ. ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿ ಆರಂಭಿಸಿದ್ದು, ಈವರೆಗೆ 9.5 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ.

Advertisement

642.46 ಕೋಟಿ ರೂ. ವೆಚ್ಚ: ವೈಟ್‌ಟಾಪಿಂಗ್‌ ಕಾಮಗಾರಿಗೆ ಒಟ್ಟು 972.96 ಕೋಟಿ ರೂ. ವೆಚ್ಚವಾಗುವ ಅಂದಾಜಿದ್ದು, ಆ ಪೈಕಿ ಮೊದಲ ಹಂತದಲ್ಲಿ 281 ಕೋಟಿ ರೂ. ವ್ಯಯಿಸಿದರೆ, ಎರಡನೇ ಹಂತದಲ್ಲಿ 642.46 ಕೋಟಿ ರೂ. ವೆಚ್ಚ ಮಾಡಿ 40 ರಸ್ತೆ ಹಾಗೂ 2 ಜಂಕ್ಷನ್‌ಗಳನ್ನು ವೈಟ್‌ಟಾಪಿಂಗ್‌ಗೆ ಪರಿವರ್ತಿಸಲು ಟೆಂಡರ್‌ ಕರೆಯಲಾಗಿದೆ. 

8 ಪ್ಯಾಕೇಜ್‌ಗಳಲ್ಲಿ ಟೆಂಡರ್‌: ಒಬ್ಬರೇ ಗುತ್ತಿಗೆದಾರರಿಗೆ ಹೆಚ್ಚಿನ ರಸ್ತೆಗಳನ್ನು ನೀಡುವುದರಿಂದ ಕಾಮಗಾರಿ ವಿಳಂಬವಾಗಲಿದೆ ಎಂಬ ಉದ್ದೇಶದಿಂದ 2ನೇ ಹಂತದ ವೈಟ್‌ಟಾಪಿಂಗ್‌ ಅನ್ನು 8 ಪ್ಯಾಕೇಜ್‌ಗನ್ನಾಗಿ ಮಾಡಲಾಗಿದೆ. ಅದರಂತೆ ಒಂದು ಪ್ಯಾಕೇಜ್‌ನಲ್ಲಿ ಗರಿಷ್ಠ 15 ರಸ್ತೆಗಳನ್ನು ಒಬ್ಬ ಗುತ್ತಿಗೆದಾರರು ಪಡೆಯಬಹುದಾಗಿದೆ.

ಪ್ರಮುಖ ರಸ್ತೆಗಳಲ್ಲಿ ದಟ್ಟಣೆ: ಎರಡನೇ ಹಂತದ ಯೋಜನೆಯಡಿ ಕೆ.ಆರ್‌.ರಸ್ತೆ, ಗಾಂಧಿಬಜಾರ್‌ ರಸ್ತೆ, ಬಾಣಸವಾಡಿ ಮುಖ್ಯರಸ್ತೆ, ಶೇಷಾದ್ರಿಪುರ ರಸ್ತೆ, ರೇಸ್‌ಕೋರ್ಸ್‌ ರಸ್ತೆ ಸೇರಿ ಇನ್ನಿತರ ಅತಿ ಹೆಚ್ಚು ವಾಹನ ಸಂಚಾರವಿರುವ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭವಾದರೆ, ನಗರದ ಕೇಂದ್ರ ಭಾಗದ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಲಿದೆ. 

ಚಾಲ್ತಿಯಲ್ಲಿರುವ ಕಾಮಗಾರಿ ವಿವರ: ಹೊರವರ್ತುಲ ರಸ್ತೆಯ ನಾಯಂಡಹಳ್ಳಿಯಿಂದ ಸುಮನಹಳ್ಳಿ ಜಂಕ್ಷನ್‌, ತುಮಕೂರು ರಸ್ತೆಯಿಂದ ಹಳೇ ಮದ್ರಾಸ್‌ ರಸ್ತೆ, ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ, ಹೊಸೂರು ರಸ್ತೆ, ಕೋರಮಂಗಲ, ಮೈಸೂರು ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಆ ಪೈಕಿ ಸುಮನಹಳ್ಳಿ ಮೇಲ್ಸೇತುವೆಯಿಂದ ನಾಯಂಡಹಳ್ಳಿ ಜಂಕ್ಷನ್‌, ಹೆಬ್ಟಾಳ ಮೇಲ್ಸೇತುವೆಯಿಂದ ಹೆಣ್ಣೂರು ಜಂಕ್ಷನ್‌ವರೆಗೆ ಕಾಮಗಾರಿ ಆರಂಭಿಸಲು ಪೊಲೀಸರು ಇತ್ತೀಚೆಗೆ ಅನುಮತಿ ನೀಡಿದ್ದು, ಆ.27ರಿಂದ ಕಾಮಗಾರಿ ಆರಂಭವಾಗಿದೆ.

ಪಾಲಿಕೆಯಿಂದ ಕೈಗೊಂಡಿರುವ ಯೋಜನೆಗಳಿಗೆ ಈವರೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಕಮಿಷನ್‌ಗಾಗಿ ಕೋಟ್ಯಂತರ ರೂ.ಗಳ ಟೆಂಡರ್‌ ಕರೆಯುತ್ತಿದೆ. ವಸತಿ ಪ್ರದೇಶಗಳ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ನಡೆಸುವುದರಿಂದ ನೀರು, ಒಳಚರಂಡಿ, ಬೆಸ್ಕಾಂ ಸೇವೆ ಪೂರೈಗೆ ತೊಂದರೆಯಾಗಲಿದೆ.
-ಪದ್ಮನಾಭ ರೆಡ್ಡಿ, ವಿಪಕ್ಷ ನಾಯಕ ಬಿಬಿಎಂಪಿ

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next