Advertisement

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಸಿದ್ಧತೆ

11:37 PM May 24, 2022 | Team Udayavani |

ಮಂಗಳೂರು: ನಗರದ ಪುರಭವನದಲ್ಲಿ ಮೇ 28ರಂದು ಆಯೋಜಿಸಲಾಗಿರುವ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ| ಕೃಷ್ಣಮೂರ್ತಿ ಕೋರಿದ್ದಾರೆ.

Advertisement

ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಆಹ್ವಾನ ನೀಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೂರು ಹಂತಗಳಲ್ಲಿ ಈ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಮೇ 28 ರಂದು ಮಂಗಳೂರು, ಉಳ್ಳಾಲ ಹಾಗೂ ಅಮರ ಸುಳ್ಯದಲ್ಲಿ ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ದೇಶಭಕ್ತಿ ಹಾಗೂ ದೇಶಪ್ರೇಮದ ಜಾಗೃತಿ ಮೂಡಿಸುವ ಮೆರವಣಿಗೆಗೆ ಅಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಅಂಬೇಡ್ಕರ್‌ ವೃತ್ತದಲ್ಲಿ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ನಾಗರಿಕರು ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು. 2 ರಿಂದ 3 ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಕಲಾತಂಡಗಳು, ಕಾಲೇಜು ವಿದ್ಯಾರ್ಥಿ ಗಳು, ಮಂಗಳೂರಿನ ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಮೆರವಣಿಗೆ ಯಲ್ಲಿ ಭಾಗವಹಿಸಲಿದ್ದಾರೆ. ಪುರ ಭವನದಲ್ಲಿ ಸಭಾ ಕಾರ್ಯಕ್ರಮ, ಉಪನ್ಯಾಸ, ಸ್ವಾತಂತ್ರ್ಯ ಹೋರಾಟದ ಸಾಕ್ಷ್ಯಚಿತ್ರ ಮತ್ತು ಶಿಲಾಫಲಕ ಅನಾವರಣಗೊಳ್ಳಲಿದೆ ಎಂದರು.

ಸಹಾಯಕ ಆಯುಕ್ತ ಮದನ್‌ ಮೋಹನ್‌ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ ದಾಸ್‌ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಸ್ವಾಗತಿಸಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು, ನಾಟಕ, ಸಂಗೀತ, ಯಕ್ಷಗಾನ ಸೇರಿದಂತೆ ವಿವಿಧ ಅಕಾಡೆಮಿಗಳ ಪ್ರಮುಖರು ರೈತ ಸಂಘದ ಅಧ್ಯಕ್ಷರು, ಮಹಿಳಾ ಒಕ್ಕೂಟಗಳು, ಚೇಂಬರ್‌ ಆಫ್‌ ಕಾಮರ್ಸ್‌ ಹಾಗೂ ತುಳು ಚಿತ್ರರಂಗ ಒಕ್ಕೂಟಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next