Advertisement
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 5 ಸಾವಿರ ಎಕ್ರೆ ಭತ್ತದ ಗದ್ದೆಗಳಲ್ಲಿ ಈ ಬಾರಿ ಹಳದಿ ಹಸುರು ಪಾಚಿಗಳು ಮುತ್ತಿಕೊಂಡಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರತೀವರ್ಷ ಈ ಸಮಸ್ಯೆ ಕಂಡುಬರುತ್ತಿದ್ದು, ಹಳದಿ ಹಸುರು ಪಾಚಿಗಳಿಂದ ಪಾರ್ಶ್ವವಾಯುವಿಗೆ ಒಳಗಾದ ಭತ್ತದ ಗದ್ದೆಗಳಿಂದ ರೈತರು ಅವುಗಳನ್ನು ಕೈಯಾರೆ ತೆಗೆದು ಹಾಕಲು ಪ್ರಯತ್ನಿಸಿದರೂ, ಅದು ಪಕ್ಕದ ಭತ್ತದ ಗದ್ದೆಗಳಿಗೆ ಹರಡಿಕೊಳ್ಳುತ್ತಿರುವುದರಿಂದ ರೈತರು ಹಲವಾರು ರೀತಿಯ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ ಇದರಿಂದ ಭತ್ತದ ಪೈರುಗಳ ಬೆಳವಣಿಗೆಯೂ ಕುಂಠಿತಗೊಳ್ಳುತ್ತಿತ್ತು. ಈ ಕಾರಣಕ್ಕಾಗಿ ಇದೀಗ ಭತ್ತದ ಗದ್ದೆಗಳಲ್ಲಿ ಕಂಡುಬರುವ “ಹಳದಿ ಹಸುರು ಪಾಚಿ’ಗಳ ಬೆಳವಣಿಗೆಯನ್ನು ನಿಯಂತ್ರಿಸಲು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದ ಕೃಷಿ ವಿಜ್ಞಾನಿಗಳು ಸಸ್ಯನಾಶಕವನ್ನು ಪ್ರಯೋಗಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಭತ್ತ ಬೆಳೆಗಾರರಿಗೆ ಉಂಟಾಗುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದಾರೆ.
“ಪೆಂಡಿಮೆಥಾಲಿನ್’ ಎಂಬ ಸಸ್ಯನಾಶಕದೊಂದಿಗೆ ಪಾಚಿಗಳನ್ನು ನಿಯಂತ್ರಿಸಲು ತಂತ್ರವನ್ನು ರೂಪಿಸಿದೆ. ಕಸಿ ಮಾಡಿದ ಮೂರು ದಿನಗಳಲ್ಲಿ ಇದನ್ನು ಸಿಂಪಡಿಸಬೇಕು. ಒಂದು ಎಕ್ರೆ ಭತ್ತದ ಗದ್ದೆಯಲ್ಲಿ ಸಿಂಪಡಿಸಲು 330 ಮಿ.ಲೀ. ಸಸ್ಯನಾಶಕವನ್ನು 120 ಲೀಟರ್ ನೀರಿನಲ್ಲಿ ಬೆರೆಸಬೇಕು. ಇದರಲ್ಲಿ ಸಸ್ಯನಾಶಕವನ್ನು ಬಳಸುವ ಸಮಯ ಮತ್ತು ಪ್ರಮಾಣ ಮುಖ್ಯವಾಗಿದೆ. 2 ವರ್ಷಗಳ ಕಾಲ ಪ್ರಯೋಗ
ಹಲವಾರು ವರ್ಷಗಳಿಂದ ಕರಾವಳಿ ಭಾಗಗಳಲ್ಲಿ ಭತ್ತದ ರೈತರಿಗೆ ಹಳದಿ ಹಸುರು ಪಾಚಿಗಳು ತೀವ್ರ ತೊಂದರೆ ಉಂಟುಮಾಡುತ್ತಿತ್ತು. ಈ ಬಗ್ಗೆ ವಿವಿಧ ರೀತಿಯ ಸಸ್ಯನಾಶಕಗಳನ್ನು ಹೊಂದಿರುವ ಪ್ರಯೋಗಾಲಯದಲ್ಲಿ ಎರಡು ವರ್ಷಗಳ ಕಾಲ ಮಾಡಿದ ಪ್ರಯೋಗಗಳ ಅನಂತರ, “ಹಳದಿ ಹಸುರು ಪಾಚಿ’ಗಳ ಹರಡುವಿಕೆಯನ್ನು ತಡೆಯಲು ಪೆಂಡಿಮೆಥಾಲಿನ್ ಎಂಬ ಸಸ್ಯನಾಶಕ ಕೆಲಸ ಮಾಡುತ್ತದೆ ಎಂಬ ವಿಚಾರ ವಿಜ್ಞಾನಿಗಳಿಗೆ ತಿಳಿಯಿತು. ಇದರಿಂದ ರೈತರಿಗೆ ಮತ್ತಷ್ಟು ಅನುಕೂಲಕರವಾಗಲಿದೆ.
Related Articles
ಈ “ಪೆಂಡಿಮೆಥಾಲಿನ್’ ಜತೆಗೆ 15 ದಿನ ಗಳ ಅಂತರದ ಅನಂತರ ಹೊರಹೊಮ್ಮುವ ಸಸ್ಯನಾಶಕ- “ಪೆನಾಕ್ಸ್ಯುಲಮ್’ ಅನ್ನು ಬಳಸಬೇಕು. ಒಂದು ಎಕ್ರೆ ಭತ್ತದ ಗದ್ದೆಯಲ್ಲಿ ಸಿಂಪಡಿಸಲು 25 ಮಿ.ಲೀ. ‘ ಪೆನಾಕ್ಸ್ಯುಲಮ್’ ಅನ್ನು 120 ಲೀಟರ್ ನೀರಿನಲ್ಲಿ ಬೆರೆಸಬೇಕು. ಭತ್ತದ ಸಸಿಗಳು ಸುಮಾರು 20 ದಿನಗಳ ವರೆಗೆ ಬೆಳೆದಂತೆ, ಅವುಗಳು ತಾವಾ ಗಿಯೇ ಉಳಿಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತವೆ ಎನ್ನುತ್ತಾರೆ ಬ್ರಹ್ಮಾವರದ ಕೃಷಿ ವಿಜ್ಞಾನಿ ಡಾ| ನವೀನ್.
Advertisement
ಶೀಘ್ರ ರೈತರಿಗೆ ಶಿಫಾರಸುವಿಜ್ಞಾನಿಗಳು ಈಗಾಗಲೇ ಈ ಸಸ್ಯನಾಶಕದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪ್ರಾಯೋಗಿಕವಾಗಿ ಕೆಲವೆಡೆ ಇದನ್ನು ಸಿಂಪಡಿಸಲಾಗಿದೆ. ಉತ್ತಮ ಪ್ರಯೋಜನಕಾರಿ ಎಂಬ ಅಂಶ ತಿಳಿದುಬಂದಿದೆ. ವಿಜ್ಞಾನಿಗಳ ವಲಯ ಸಭೆಯಲ್ಲಿ ಇದಕ್ಕೆ ಅನುಮೋದನೆಯೂ ದೊರಕಿದೆ. ಶೀಘ್ರದಲ್ಲೇ ಸಸ್ಯನಾಶಕವನ್ನು ಅಧಿಕೃತವಾಗಿ ಬಳಸುವಂತೆ ಇಲಾಖೆ ರೈತರಿಗೆ ಶಿಫಾರಸು ಮಾಡಬಹುದು.
– ಸತೀಶ್ ಬಿ., ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ - ಪುನೀತ್ ಸಾಲ್ಯಾನ್