Advertisement

ಪ್ರವಾಹ-ಅತಿವೃಷ್ಟಿ ಎದುರಿಸಲು ಸನ್ನದರಾಗಿ

03:26 PM May 25, 2022 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಪ್ರವಾಹ ಮತ್ತು ಅತಿವೃಷ್ಟಿ ಎದುರಿಸಲು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕು. ಸತತ ಮಳೆಯಿಂದ ಹಾನಿಯಾದ ಮನೆಗಳಿಗೆ ಶನಿವಾರದೊಳಗೆ ಕನಿಷ್ಟ ಪರಿಹಾರ ಹಣ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಸಕ್ತ ಮುಂಗಾರು ಪ್ರವಾಹ, ಅತಿವೃಷ್ಟಿ ಎದುರಿಸಲು ಮುಂಜಾಗ್ರತಾ ಕ್ರಮಗಳ ಪೂರ್ವಸಿದ್ಧತೆಗಾಗಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರವಾಹಕ್ಕೆ ತುತ್ತಾಗುವ ತಗ್ಗು ಪ್ರದೇಶ ಹಾಗೂ ಮನೆಗೆ ನೀರು ನುಗ್ಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಿಪತ್ತು ಸಂದರ್ಭದಲ್ಲಿ ಅಗತ್ಯವಾದ ಪರಿಕರಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಪ್ರವಾಹಕ್ಕೆ ತುತ್ತಾಗುವ 12 ಗ್ರಾಮಗಳನ್ನು ಗುರುತಿಸಲಾಗಿದ್ದು, ಈ ಗ್ರಾಮಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಹಾಗೂ ಪ್ರವಾಹ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯ ವೈದ್ಯಕೀಯ ಸೇವೆ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಪೊಲೀಸ್‌ ಹಾಗೂ ಅಗ್ನಿಶಾಮಕ ತಂಡ ಸನ್ನದ್ಧರಾಗಿರಬೇಕೆಂದು ಸೂಚಿಸಿದರು.

ಅತಿವೃಷ್ಟಿ ಸಮಯದಲ್ಲಿ ಸಂತ್ರಸ್ತರ ವಾಸಕ್ಕೆ ತಾತ್ಕಾಲಿಕ ಶೆಡ್‌ ನಿರ್ಮಾಣ ಹಾಗೂ ಪರಿಹಾರ ಕೇಂದ್ರ ಸ್ಥಾಪನೆಗೆ ಸ್ಥಳ ನಿಗದಿಪಡಿಸಬೇಕು. ಖಾಸಗಿ ಜಮೀನಿನಲ್ಲಿ ಶೆಡ್‌ ಹಾಗೂ ಪರಿಹಾರ ಕೇಂದ್ರ ಸ್ಥಾಪಿಸಿದರೆ ಬಾಡಿಗೆ ನೀಡಲು ಅವಕಾಶವಿರುವುದಿಲ್ಲ. ಹಾಗಾಗಿ, ಸರ್ಕಾರಿ ಶಾಲಾ-ಕಾಲೇಜು ಇತರೆ ಕಟ್ಟಡಗಳನ್ನು ಗುರುತಿಸಬೇಕು ಹಾಗೂ ಅಗತ್ಯ ಆಹಾರ ಪೂರೈಕೆಗೆ ಕ್ರಮ ವಹಿಸಬೇಕು. ಹಾನಗಲ್ಲ ತಾಲೂಕು ಕೂಡಲ ಗ್ರಾಮದ ನದಿ ದಡದ ಮನೆಗಳ ಸ್ಥಳಾಂತರಕ್ಕೆ ಜಾಗ ಗುರುತಿಸಬೇಕೆಂದು ತಿಳಿಸಿದರು.

ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿಗಳನ್ನು ಗುರುತಿಸಬೇಕು. ಅಪಾಯಕಾರಿ ಕಟ್ಟಡಗಳಲ್ಲಿನ ಮಕ್ಕಳ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಹಾನಗಲ್ಲ ಸೇರಿ ದಂತೆ ವಿವಿಧೆಡೆ ರಸ್ತೆಗಳ ಮೇಲೆ ಬೀಳುವ ಮರಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತೆ ವಹಿಸಬೇಕು. ಕಾಲ ಕಾಲಕ್ಕೆ ಕುಮದ್ವತಿ ಹಾಗೂ ಧರ್ಮಾ ಬ್ಯಾರೇಜ್‌ಗಳಲ್ಲಿ ನೀರಿನ ಪ್ರಮಾಣ ಪರಿಶೀಲಿಸಬೇಕು. ನೀರಿನ ಪ್ರಮಾಣ ಹೆಚ್ಚಾದಾಗ ಸಾರ್ವಜನಿಕರು ನದಿಗಳಿಗೆ ಇಳಿಯದಂತೆ ಹಾಗೂ ದನಕರುಗಳನ್ನು ನದಿ ದಂಡೆಗೆ ಬಿಡದಂತೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಜಂಟಿ ಸರ್ವೇ ಕೈಗೊಂಡು ತ್ವರಿತವಾಗಿ ದಾಖಲಿಸಬೇಕು. ಪಂಚಾಯತ್‌ ರಾಜ್‌ ವಿಭಾಗದ ಹಾನಿಯಾದ ರಸ್ತೆಗಳ ವರದಿ ಸಲ್ಲಿಸಿದರೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಅದೇ ರೀತಿ, ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆಯಾಗಿದ್ದರೆ ದೂರುಗಳು ಬರುವ ಮೊದಲೇ ರಿಪೇರಿ ಮಾಡಿಸಬೇಕು. ಈ ಎಲ್ಲ ಕಾರ್ಯಗಳನ್ನು ಉಪವಿಭಾಗಾಧಿಕಾರಿಗಳು ಪರಿಶೀಲನೆ ಮಾಡಬೇಕು ಹಾಗೂ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿಯೇ ವಾಸವಿರಬೇಕೆಂದು ಸೂಚಿಸಿದರು.

ಜಿಪಂ ಸಿಇಒ ಮಹಮ್ಮದ ರೋಷನ್‌ ಮಾತನಾಡಿ, ಮನೆಗಳ ಹಾನಿ ಪ್ರದೇಶಕ್ಕೆ ಆಯಾ ತಹಶೀಲ್ದಾರ್‌ರು ಭೇಟಿ ನೀಡಿ ಪರಿಶೀಲನೆ ನಡಸಬೇಕು. ಮನೆಗಳ ಹಾನಿ ಸರ್ವೇಗೆ ಲೋಕೊಪಯೋಗಿ ಇಲಾಖೆಯಿಂದ ಎಂಜಿನಿಯರ್‌ಗಳನ್ನು ನಿಯೋಜಿಸಬೇಕು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಪಿಡಿಒಗಳು ಗ್ರಾಮೀಣ ಪ್ರದೇಶದಲ್ಲಿ ಚರಂಡಿ ಹಾಗೂ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಸ್ವತ್ಛ ಮಾಡಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 869 ಹೆಕ್ಟೇರ್‌ ಕೃಷಿ ಹಾಗೂ 402 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ|ಎನ್‌.ತಿಪ್ಪೇ ಸ್ವಾಮಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಜಯ ಕುಮಾರ ಸಂತೋಷ್‌, ಸವಣೂರ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಪಲ್ಲವಿ ಸಾತೇನಹಳ್ಳಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ರಾಜೀವ ಕೂಲೇರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎಚ್‌.ಎಸ್‌.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಹಾವೇರಿ ತಹಶೀಲ್ದಾರ್‌ ಎನ್‌.ಬಿ.ಗೆಜ್ಜಿ ಸೇರಿದಂತೆ ವಿಡಿಯೋ ಕಾನ್ಪರೆನ್ಸ್‌ ಮೂಲಕ ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ವಿವಿಧ ತಾಲೂಕುಗಳ ತಹಶೀಲ್ದಾರ್‌ರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮೇ ತಿಂಗಳಲ್ಲಿ ಸತತ ಮಳೆಯಿಂದ ಹಾನಿಯಾದ ಮನೆಗಳ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ, ಯಾವುದೇ ಲೋಪದೋಷವಿಲ್ಲದಂತೆ ಬಹಳ ಜಾಗೃತಿಯಿಂದ ಫೈಲ್‌ ಸಿದ್ಧಪಡಿಸಿ ಗುರುವಾರದೊಳಗೆ ಸಲ್ಲಿಸಬೇಕು. ಎನ್‌ ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಶನಿವಾರದೊಳಗೆ ಕನಿಷ್ಟ ಪರಿಹಾರ ಹಣ ಪಾವತಿ ಮಾಡಿ, ಜಾಯಿಂಟ್‌ ಖಾತೆ ಸಮಸ್ಯೆ ಇರುವ ಮನೆಗಳ ಹಾನಿ ಪರಿಹಾರ ನಂತರ ಪಾವತಿಸಬೇಕು. -ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next