Advertisement

ಸೋಲು ಗೆಲುವಾಗಿ ಪರಿವರ್ತಿಸಲು ಸನ್ನದ್ಧರಾಗಿ

06:16 PM Nov 12, 2021 | Team Udayavani |

ಹಾನಗಲ್ಲ: ಚುನಾವಣೆಯ ಸೋಲು-ಗೆಲುವಿನಲ್ಲಿ ಬಹಳಷ್ಟು ಕಲಿಯುವುದು ಇರುತ್ತದೆ. ಪ್ರತಿಯೊಂದು ಚುನಾವಣೆ ಒಂದೊಂದು ಪಾಠ ಕಲಿಸುತ್ತದೆ. ಹೀಗಾಗಿ, ಚುನಾವಣೆಯ ಸೋಲನ್ನು ಗೆಲುವಾಗಿ ಪರಿವರ್ತಿಸಲು ಇಂದಿನಿಂದಲೇ ಸನ್ನದ್ಧರಾಗಬೇಕು ಎಂದು ಸಂಸದ ಶಿವಕುಮಾರ ಉದಾಸಿ ಕರೆ ನೀಡಿದರು.

Advertisement

ಗುರುವಾರ ಪಟ್ಟಣದ ಶ್ರೀಮತಿ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾನಗಲ್ಲ ಮಂಡಲ ಕಾರ್ಯಕರ್ತರು ಹಾಗೂ ಮತದಾರರಿಗಾಗಿ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ಚುನಾವಣೆಯನ್ನು ಹಣದಿಂದ ಮಾಡಬಾರದು, ಹೋರಾಟದಿಂದ ಮಾಡಬೇಕು ಎಂದು ದಿ.ಸಿ.ಎಂ. ಉದಾಸಿ ಹೇಳುತ್ತಿದ್ದರು. ಉದಾಸಿ ಅವರು ಮಾಡಿದ ಸಾಧನೆಗಳ ಕುರಿತು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ವಿಫಲರಾಗಿದ್ದಾರೆ. ಕೇವಲ
ಮೂರು ವರ್ಷದಲ್ಲಿ ಕ್ಷೇತ್ರದಲ್ಲಿದ್ದು, ಮಾಡಿದ ಅಲ್ಪ ಸೇವೆಯನ್ನೇ ದೊಡ್ಡದಾಗಿ ಪ್ರಚಾರ ಮಾಡಿ ಸುಳ್ಳು ಅಪಪ್ರಚಾರ ನಡೆಸಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಮುಂದಿ ನ ದಿನಗಳಲ್ಲಿ ಪೇಜ್‌ ಪ್ರಮುಖರಾದಿಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾರೇ ಅಭ್ಯರ್ಥಿಯಾಗಲಿ 2023ರಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಇಂದೇ ಪ್ರತಿಜ್ಞೆ ಮಾಡಬೇಕು ಎಂದರು. ಪರಾಭವಗೊಂಡ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮಾತನಾಡಿ, ಚುನಾವಣೆ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳೋಣ. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಿಟ್ಟು ಹೋಗಿರುವ ಕಾರ್ಯಕರ್ತರನ್ನು ಮತ್ತೆ ಕರೆ ತರೋಣ. ನಿಮ್ಮ ತಾಲೂಕಿನ ಮತದಾರರ ಋಣ ನನ್ನ ಮೇಲಿದೆ.

ಅದಕ್ಕಾಗಿ ಹಾನಗಲ್ಲಿನಲ್ಲಿಯೇ ವಾಸ್ತವ್ಯ ಮಾಡಿ ನಿಮ್ಮ ಋಣ ತೀರಿಸುತ್ತೇನೆ. ಪಕ್ಷದ ಕಾರ್ಯಕರ್ತರು ಯಾವುದೇ ದೌರ್ಜನ್ಯಕ್ಕೂ ಭಯಪಡುವ ಅಗತ್ಯವಿಲ್ಲ. ಕೇಂದ್ರ ಹಾಗೂ ರಾಜ್ಯಗಳಲ್ಲಿ ನಮ್ಮದೇ ಸರಕಾರ ಇದೆ. ನಾವೆಲ್ಲ ನಿಮ್ಮೊಂದಿಗಿದ್ದೇವೆ. ಮುಂದೆ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ತಾಪಂ, ಜಿಪಂ, ಎಪಿಎಂಸಿ ಮುಂತಾದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಚುನಾವಣೆಯ ಸೇಡು ತೀರಿಸಿಕೊಳ್ಳೋಣ ಎಂದರು.

ಪಕ್ಷದ ಕಾರ್ಯಕರ್ತರು ಮುಖಂಡರು ಮಾತನಾಡಿ, ಹೈಕಮಾಂಡ್‌ನ‌ ದುಡುಕಿನ ನಿರ್ಧಾರ, ಹೊಸ ಪ್ರಯೋಗ ಮಾಡಲು ಮುಂದಾಗಿದ್ದು, ಕೊನೆ ಘಳಿಗೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡಿರುವುದೇ ಈ ಸೋಲಿಗೆ ಕಾರಣ. ಇಲ್ಲಿ ನಾಯಕರೇ ಮತದಾರರನ್ನು ಸೋಲಿಸಿದಂತಾಗಿದೆ.

Advertisement

ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನಾಯಕರು ಕಾರ್ಯಕರ್ತರ ನಡುವಿನ ಸಮನ್ವಯತೆ ಕೊರತೆ. ಪಕ್ಷ ಸಂಘಟನೆ ಬಿಟ್ಟು ವೈಯಕ್ತಿಕ ಹಿಂಬಾಲಕರ ಪಡೆ ಹೆಚ್ಚಿಸಿಕೊಳ್ಳುವ ಪ್ರಯತ್ನ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳನ್ನು ಜನತೆಗೆ ತಿಳಿಸುವಲ್ಲಿ ವಿಫಲವಾಗಿರುವುದು ಪಕ್ಷದ ಸೋಲಿನ ಪ್ರಮುಖ ಅಂಶಗಳಾಗಿವೆ. ಮುಂದಿನ ದಿನಗಳಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಗೆಲುವಿಗೆ ಶ್ರಮಿಸೋಣ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಕ್ರೋಶ ಹೊರಹಾಕಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಮುಖಂಡರಾದ ಶಿದ್ದಲಿಂಗಪ್ಪ ಶಂಕ್ರಿಕೊಪ್ಪ, ಕಲ್ಯಾಣಕುಮಾರ ಶೆಟ್ಟರ, ಪದ್ಮನಾಭ ಕುಂದಾಪೂರ, ಶಿವಲಿಂಗಪ್ಪ ತಲ್ಲೂರ, ಬಸವರಾಜ ಹಾದಿಮನಿ, ರಾಜಣ್ಣ ಪಟ್ಟಣದ, ರಾಜಣ್ಣ ಗೌಳಿ, ಬಿ.ಎಸ್‌.ಅಕ್ಕಿವಳ್ಳಿ, ಕೃಷ್ಣ ಈಳಿಗೇರ, ರವಿಚಂದ್ರ ಪುರೋಹಿತ, ಸಂತೋಷ ಟೀಕೋಜಿ, ಸಂತೋಷ ಭಜಂತ್ರಿ, ಶಿವಕುಮಾರ ಹಳೇಕೋಟಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next