Advertisement
ಸಾರ್ವಜನಿಕ ಶಿಕ್ಷಣ ಇಲಾಖೆ ನಿಗದಿಪಡಿಸಿದಂತೆ ಮೇ 29ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಲಿವೆ. ಆದರೆ ಖಾಸಗಿ ಶಾಲೆಗಳು ನಾನಾ ಕಾರಣಗಳಿಂದಾಗಿ ಮುಂದಿನ ವಾರದಿಂದ ಈ ಬಾರಿಯ ಶೈಕ್ಷಣಿಕ ವರ್ಷ ಪ್ರಾರಂಭಿಸಲಿದೆ.
Related Articles
ಶಾಲಾರಂಭಕ್ಕೆ ಎರಡು ದಿನ ಮುಂಚಿತವಾಗಿಯೇ ಕೆಲವು ಶಿಕ್ಷಕರು ಶಾಲೆಗೆ ಆಗಮಿಸಿದ್ದು, ಮಕ್ಕಳನ್ನು ಸ್ವಾಗತಿಸಲು ಅಗತ್ಯ ತಯಾರಿಯಲ್ಲಿ ತೊಡಗಿದ್ದಾರೆ. ಮೇ 29ರಂದು ಮಕ್ಕಳು ಶಾಲೆಗೆ ಆಗಮಿಸುವ ವೇಳೆ ಅವರನ್ನು ವಿಶೇಷವಾಗಿ ಬರ ಮಾಡಿಕೊಳ್ಳಲು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿದೆ.
Advertisement
ಖಾಸಗಿ ಶಾಲೆಗಳಲ್ಲಿ ತಡವಾಗಿ ಆರಂಭಕೆಲವು ಖಾಸಗಿ ಶಾಲೆಗಳಲ್ಲಿ ಸರಕಾರಿ ಶಾಲೆಗಳಂತೆ ಮೇ 29ರಂದೇ ಶೈಕ್ಷಣಿಕ ವರ್ಷಾರಂಭವಾದರೆ, ಹಲವು ಶಾಲೆಗಳಲ್ಲಿ ಅಂದು ತರಗತಿ ಆರಂಭವಾಗುವುದಿಲ್ಲ. ನಗರದಲ್ಲಿರುವ ವಿವಿಧ ಖಾಸಗಿ ರಾಜ್ಯ ಪಠ್ಯಕ್ರಮಾಧಾರಿತ ಮತ್ತು ಕೇಂದ್ರ ಪಠ್ಯಕ್ರಮಾಧಾರಿತ ಶಾಲೆಗಳಲ್ಲಿ ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿವೆ. ಆದರೆ, ಇದಕ್ಕೆ ನೀರಿನ ಸಮಸ್ಯೆ ಕಾರಣ ಅಲ್ಲ. ಮಕ್ಕಳಿಗೆ ಶೈಕ್ಷಣಿಕ ವರ್ಷದ ಪರೀಕ್ಷೆಗಳು ಕಳೆದ ಬಳಿಕ ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಕೋಚಿಂಗ್, ಇತರ ತರಗತಿಗಳು ನಡೆಯುವುದರಿಂದ ತಡವಾಗಿ ರಜೆ ನೀಡಲಾಗುತ್ತದೆ. ಅದಕ್ಕಾಗಿ ಮುಂದಿನ ಶೈಕ್ಷಣಿಕ ತರಗತಿಗಳ ಆರಂಭ ತಡವಾಗುತ್ತದೆ ಎಂದು ಶಾಲಾ ಪ್ರಮುಖರು ತಿಳಿಸಿದ್ದಾರೆ. ನೀರಿನ ಸಮಸ್ಯೆ: ಮುಂದೂಡಿಕೆ ಇಲ್ಲ
ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರವಾಗಿ ತಲೆದೋರಿರುವ ನೀರಿನ ಸಮಸ್ಯೆಯಿಂದಾಗಿ ನಿಗದಿತ ದಿನಾಂಕದಂದೇ ಶಾಲಾರಂಭವಾಗುವುದೇ ಎಂಬ ಗೊಂದಲವಿತ್ತು. ಶಾಲೆ ಆರಂಭ ವಿಳಂಬವಾಗಲಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಈ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದ್ದು, ಮೇ 29ರಂದೇ ಶಾಲೆಗಳು ಆರಂಭವಾಗಲಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನೀರಿನ ಸಮಸ್ಯೆ ತೀವ್ರವಿದ್ದಲ್ಲಿ ಮಧ್ಯಾಹ್ನದವರೆಗೆ ತರಗತಿಗಳನ್ನು ನಡೆಸಿ ಮನೆಗೆ ಬಿಡಬಹುದೇ ಎಂಬ ಕುರಿತು ಶಾಲಾ ಮಟ್ಟದಲ್ಲಿ ನಿರ್ಧಾರ ಕೈಗೊಂಡು ಬಳಿಕ ಶಾಲಾ ಮುಖ್ಯಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ತಿಳಿಸಬೇಕು. ಶಾಲಾರಂಭ ಮುಂದೂಡಿಕೆ ಬಗ್ಗೆ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ಜಿಲ್ಲಾಧಿಕಾರಿ ಅಥವಾ ಸರಕಾರ ಈ ಬಗ್ಗೆ ನಿರ್ಧರಿಸಬೇಕು ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. ಸಮವಸ್ತ್ರ ಬಂದಿಲ್ಲ
ಈ ಶೈಕ್ಷಣಿಕ ವರ್ಷಾರಂಭದ ದಿನದಂದೇ ಮಕ್ಕಳಿಗೆ ಸರಕಾರದಿಂದ ನೀಡಲಾಗುವ ಪುಸ್ತಕಗಳನ್ನು ವಿತರಿಸಲಾಗುತ್ತದೆ. ಆದರೆ ಶಾಲಾ ಸಮವಸ್ತ್ರ ಇನ್ನೂ ಬಿಡುಗಡೆಯಾಗಿಲ್ಲದ ಕಾರಣ, ಮೇ 29ರಂದು ಮಕ್ಕಳಿಗೆ ಸಮವಸ್ತ್ರ ಸಿಗುತ್ತಿಲ್ಲ. ಸಮವಸ್ತ್ರವನ್ನು ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೀಡಿ ಅಲ್ಲಿಂದ ಶಾಲೆಗಳಿಗೆ ಹಸ್ತಾಂತರಿಸಲಾಗುತ್ತದೆ. ಈ ಬಾರಿ ಸಮವಸ್ತ್ರ ಈವರೆಗೆ ಬಂದಿಲ್ಲ. ಯಾವಾಗ ಸಿಗುತ್ತದೆ ಎಂಬುದು ತಿಳಿದಿಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು. ನಿಗದಿತ ದಿನದಂದೇ ಶಾಲಾರಂಭ
ಮೇ 29ರಂದೇ ಸರಕಾರಿ ಶಾಲೆಗಳು ಆರಂಭವಾಗಲಿವೆ. ಕೆಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ ಎಂಬುದಾಗಿ ಶಾಲೆಯವರು ತಿಳಿಸಿದ್ದಾರೆ. ಆದರೆ ಅಂತಹ ಶಾಲೆಗಳನ್ನು ಆರಂಭಿಸದಿರಲು ನಮಗೆ ಯಾವುದೇ ನಿರ್ದೇಶಗಳು ಇಲ್ಲ. ಹಾಗಾಗಿ ನಿಗದಿತ ದಿನಾಂಕಗಳಂದು ಶಾಲೆ ಆರಂಭವಾಗಲಿದೆ.
- ಲೋಕೇಶ್,
ಕ್ಷೇತ್ರ ಶಿಕ್ಷಣಾಧಿಕಾರಿ