ಕೆಂಚನಕೆರೆ: ಹೆಚ್ಚು ಆದಾಯ ಕೊಡುವ ಕೃಷಿಯಲ್ಲಿ ಒಂದಾಗಿರುವ ಗೇರು ಬೀಜಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹೆಚ್ಚಾಗಿ ವ್ಯರ್ಥವಾಗಿ ಹೋಗುವ ಗೇರು ಹಣ್ಣಿನಿಂದ ಜ್ಯೂಸ್ ಮಾಡಿ ಮಾರಾಟ ಮಾಡಿದರೆ ಸಾಕಷ್ಟು ಲಾಭಗಳಿಸಬಹುದು ಎಂಬುದನ್ನು ಕೆಂಚನಕೆರೆಯ ಯುವಕ ಕೆನ್ಯೂಟ್ ಅರಾಹ್ನ ಮಾಡಿ ತೋರಿಸಿದ್ದಾರೆ.
ಸಾವಿರಾರು ಬಾಟಲಿಗಳಲ್ಲಿ ಗೇರು ಹಣ್ಣಿನ ಜ್ಯೂಸ್ ಮಾಡಿ ಕಿನ್ನಿಗೋಳಿ, ಮೂಲ್ಕಿ, ಸುರತ್ಕಲ್, ಹಳೆಯಂಗಡಿ, ಪಡುಬಿದ್ರೆ, ಎರ್ಮಾಳು ಹಾಗೂ ಮಣಿಪಾಲ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಕೃಷಿಯಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಇವರು, ಐದು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಮೂರು ಎಕರೆಯಲ್ಲಿ ಐನೂರರಷ್ಟು ಗೇರು ಗಿಡಗಳನ್ನು ನೆಟ್ಟಿದ್ದಾರೆ. ಉಳ್ಳಾಲ 1, 2, 3, ಸ್ಥಳೀಯ ತಳಿ, ಭಾಸ್ಕರ ಹೀಗೆ 12 ತಳಿಗಳನ್ನು ಕೃಷಿ ಮಾಡು ತ್ತಿದ್ದು, ಕೆಲವು ಜನವರಿಯಲ್ಲಿ ಫಲ ನೀಡಿದರೆ, ಇನ್ನು ಕೆಲವು ಫೆಬ್ರವರಿಯಿಂದ ಮೇ ತಿಂಗಳವರೆಗೆ ಇಳುವರಿ ನೀಡುತ್ತಿವೆ.
ಮಕ್ಕಳು ಮುಂಜಾನೆ ಮರದಿಂದ ಬಿದ್ದ ಗೇರುಹಣ್ಣನ್ನು ಸಂಗ್ರಹಿಸಿ, ಚೆನ್ನಾಗಿರುವ ಹಣ್ಣುಗಳನ್ನು ಪ್ರತ್ಯೇಕಿಸಿ, ಸ್ವಚ್ಛಗೊಳಿಸಿ, ತುಂಡರಿಸಿದ ಬಳಿಕ ಕೆನ್ಯೂಟ್ ಅವರೇ ತಯಾರಿಸಿದ ಪುಟ್ಟ ಯಂತ್ರದಲ್ಲಿ ಹಾಕಿ, ರಸ ಸಂಗ್ರಹಿಸುತ್ತಾರೆ. ಬಳಿಕ ಅದರಿಂದ ಜ್ಯೂಸ್, ಹಲ್ವ ಹಾಗೂ ಜಾಮ್ ತಯಾರಿಸಲಾಗುತ್ತದೆ. ಜ್ಯೂಸ್ ಅನ್ನು ಬಾಟಲಿಗಳಲ್ಲಿ ತುಂಬಿಸಿ ಮಾರಾಟ ಮಾಡುವ ಕೆನ್ಯೂಟ್, ಗೇರುಬೀಜಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯ ಇದರಲ್ಲಿದೆ ಎನ್ನುತ್ತಾರೆ.
ಕೃಷಿ ಇಲಾಖೆಯವರೊಂದಿಗೆ ಕೃಷಿ ಪ್ರವಾಸಕ್ಕೆ ಹೋಗಿದ್ದಾಗ ಗೇರುಹಣ್ಣಿನ ಜ್ಯೂಸ್ ಬಗ್ಗೆ ಮಾಹಿತಿ ಸಿಕ್ಕಿತು. ಆಮೇಲೆ ಮಂಗಳೂರು ಹಾಗೂ ಬ್ರಹ್ಮಾವರ ಕೃಷಿ ಅಧ್ಯಯನ ಕೇಂದ್ರದವರ ಮಾರ್ಗದರ್ಶನದಲ್ಲಿ ಜ್ಯೂಸ್ ತಯಾರಿಸಲು ಆರಂಭಿಸಿದೆ. ಕಳೆದ ಮೂರು ವರ್ಷ ದಿಂದ ಯಶಸ್ಸು ಕೂಡ ಸಿಕ್ಕಿದೆ. ಕಾಲು ಲೀಟರ್ ಗೇರುಹಣ್ಣಿನ ಜ್ಯೂಸ್‌ಗೆ ಪ್ರಸ್ತುತ ಮಾರುಕಟ್ಟೆಯಲ್ಲಿ 15 ರೂ. ಇದೆ ಎನ್ನುತ್ತಾರೆ. ಕೆನ್ಯೂಟ್ ಅರಾಹ್ನ.
ಗೇರು ಕೃಷಿಯಷ್ಟೇ ಅಲ್ಲದೆ ತೆಂಗು, ಅಡಿಕೆ, ಅನಾನಸು, ಹಲಸು, ವಿವಿಧ ತಳಿಯ ಮಾವು ಕೃಷಿಯನ್ನೂ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಾವಿನ ಜ್ಯೂಸ್, ಪಲ್ಪ್ ತಯಾರಿಸುವ ಯೋಜನೆಯಿದೆ ಎನ್ನುತ್ತಾರೆ. ಮಳೆಗಾಲದಲ್ಲಿ ಗಾರ್ಡನಿಂಗ್ ಕೆಲಸ ಮಾಡುವ ಇವರ ನರ್ಸರಿಯಲ್ಲಿ ಅಂಥೋರಿಯಮ್ ಜತೆಗೆ ಬೇರೆ ಬೇರೆ ಗಿಡಗಳನ್ನೂ ಬೆಳೆಸುತ್ತಿದ್ದಾರೆ. ಕೃಷಿಗೆ ಪೂರಕವಾಗಿ ಎಂಟು ದನಗಳನ್ನು ಸಾಕಿದ್ದು, ಇದರಿಂದಲೂ ಆದಾಯಗಳಿಸುತ್ತಿದ್ದಾರೆ.
ಇಳುವರಿ ಕಡಿಮೆ
ಕಳೆದ ವರ್ಷಕ್ಕಿಂತ ಈ ಬಾರಿ ಇಳುವರಿ ತುಂಬ ಕಡಿಮೆ. ಹಾಗಾಗಿ ಬೇಡಿಕೆ ಇದ್ದಷ್ಟು ಜ್ಯೂಸ್ ಪೂರೈಕೆ ಮಾಡಲಾಗುತ್ತಿಲ್ಲ. ಈ ಜ್ಯೂಸ್ ಆರೋಗ್ಯದಾಯಕವೂ ಹೌದು. ಅಸ್ತಮಾ ಹಾಗೂ ಗರ್ಭಿಣಿಯರಿಗೆ ಇದು ಅತ್ಯುತ್ತಮ ಎನ್ನುತ್ತಾರೆ ಅವರು.
ಮಕ್ಕಳಿಗೆ ರಜೆಯಲ್ಲಿ ಕೈತುಂಬಾ ಕೆಲಸ
ಮಕ್ಕಳಿಗೆ ಬೇಸಗೆ ರಜೆ ಕಳೆಯಲು ಸ್ಥಳೀಯರು ಹೆಚ್ಚಾಗಿ ಇವರ ಮನೆಗೆ ಗೇರು ಹಣ್ಣಿನ ಜ್ಯೂಸ್ ಮಾಡಲು ಕಳುಹಿಸುತ್ತಾರೆ. ಎರಡು ತಿಂಗಳ ಕಾಲ ಇಲ್ಲಿ ನೆರವಾಗುವ ಮಕ್ಕಳ ಶಿಕ್ಷಣದ ಖರ್ಚಿಗೆ ಕೆನ್ಯೂಟ್ ಕೂಡ ಸಹಕರಿಸುತ್ತಾರೆ.