ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಕ್ರಾಂತಿ ಹಬ್ಬದ ಸಿದ್ಧತೆ ಜೋರಾಗಿ ನಡೆದಿದೆ. ಜ. 15 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ನಗರದ ಗಾಂಧಿ ವೃತ್ತ, ಸಂತೇಹೊಂಡ ಮಾರುಕಟ್ಟೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಜನರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ಮನೆಗಳಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತದೆ. ಹಾಗಾಗಿ ಎಳ್ಳು, ಬೆಲ್ಲ, ಕಬ್ಬು, ಕೊಬ್ಬರಿ, ಹೂವು, ಹಣ್ಣು ಮತ್ತು ಸಿಹಿ ಖರೀದಿಗೆ ಜನರು ಮುಗಿ ಬಿದ್ದಿದ್ದರು. ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಕಡಲೆಕಾಯಿ (ಶೇಂಗಾ), ಎಳ್ಳು, ಕುಸರೆಳ್ಳು ಸೇರಿದಂತೆ ನಾನಾ ತಿನಿಸು, ವಸ್ತುಗಳನ್ನು ಖರೀದಿಸಿದರು. ವಿಶೇಷ ತಿನಿಸುಗಳ ದರ ತುಸು ಹೆಚ್ಚಾಗಿದ್ದರೂ ಅವುಗಳನ್ನು ಕೊಳ್ಳುವಲ್ಲಿ ಹಿಂದೆ ಬೀಳಲಿಲ್ಲ.
ದೇವಾಲಯಗಳಲ್ಲಿ ವಿಶೇಷ ಪೂಜೆ: ಕೋಟೆ ನಗರಿಯ ವಿವಿಧ ದೇಗುಲಗಳಲ್ಲಿ ಸಂಕ್ರಾಂತಿ ಹಬ್ಬದಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇಗುಲದಲ್ಲಿ ದೇವಿ ಮೂರ್ತಿಗೆ ಅಲಂಕಾರ, ಮಹಾಮಂಗಳಾರತಿ ಹಾಗೂ ಪೂಜೆ ಬೆಳಿಗ್ಗೆ 5:30ರಿಂದ ನಡೆಯಲಿವೆ. ರಾತ್ರಿ 10 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.
ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇವತೆಯ ದೇಗುಲದಲ್ಲಿ ಬೆಳಿಗ್ಗೆ 5:30ಕ್ಕೆ ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 9 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ಪ್ರಕಟಣೆ ತಿಳಿಸಿದೆ.
ಕೋಟೆ ಸಮೀಪದ ಏಕನಾಥೇಶ್ವರಿ ದೇವಿ ದೇಗುಲದಲ್ಲಿ ಬೆಳಿಗ್ಗೆ 5:30ಕ್ಕೆ ಪುಷ್ಪಾಲಂಕಾರ, ಮಹಾಮಂಗಳಾರತಿ ಹಾಗೂ ಪೂಜೆ ನೆರವೇರಿಸಲಾಗುವುದು. ದೊಡ್ಡಪೇಟೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ದೇಗುಲದಲ್ಲಿ ಬೆಳಿಗ್ಗೆ 5 ಗಂಟೆಗೆ ದೇವತೆಗೆ ಪುಷ್ಪಾಲಂಕಾರ ನಡೆಯಲಿದ್ದು, ರಾತ್ರಿ 9ರವರೆಗೆ ಭಕ್ತರು ದೇವರ ದಶೇನ ಪಡೆಯಬಹುದು. ಜೋಗಿಮಟ್ಟಿ ರಸ್ತೆಯ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ದೇಗುಲದಲ್ಲಿ ಬೆಳಗಿನ ಜಾವ 3 ಗಂಟೆಗೆ ಮಹಾ ಅಭಿಷೇಕ, 5 ಗಂಟೆಗೆ ಪುಷ್ಪಾಲಂಕಾರ, 6 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.
ರಾತ್ರಿ 9 ಗಂಟೆವರೆಗೆ ಭಕ್ತರಿಗೆ ದೇವತೆಯ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ತಿಳಿಸಿದೆ. ಬೆಟ್ಟದ ಗಣಪತಿ, ಹಿಡಂಬೇಶ್ವರ ಸ್ವಾಮಿ, ಸಂಪಿಗೆ ಸಿದ್ದೇಶ್ವರ ಸ್ವಾಮಿ, ಅಂತರಘಟ್ಟಮ್ಮ ದೇವಿ ದೇವಾಲಯ ಸೇರಿದಂತೆ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ.