ಗಜೇಂದ್ರಗಡ: ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ಆರಂಭವಾಗುವ ರೈತರ ಮೊದಲ ಹಬ್ಬ ಕಾರಹುಣ್ಣಿಮೆ ಆಚರಣೆಗೆ ಅನ್ನದಾತರು ಅಣಿಯಾಗುತ್ತಿದ್ದರೆ, ಚಿಣ್ಣರು ಬಾನಂಗಳಕ್ಕೆ ಗಾಳಿಪಟ ಹಾರಿ ಬಿಡಲು ಸನ್ನದ್ಧರಾಗಿದ್ದಾರೆ.
ಬಿತ್ತನೆ ಕಾರ್ಯಗಳು ಪೂರ್ಣಗೊಂಡಿಲ್ಲವಾದರೂ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ರೈತ ಸಮೂಹ ಹಬ್ಬದಾಚರಣೆಗೆ ಮುಂದಾಗಿದೆ. ಅನ್ನದಾತನೊಂದಿಗೆ ದುಡಿಯುವ ಎತ್ತುಗಳಿಗೆ ಧನ್ಯವಾದ ಹೇಳುವ ದಿನವಾದ ಕಾರ ಹುಣ್ಣಿಮೆಯಂದು ರಾಸುಗಳಿಗೆ ಸ್ನಾನ ಮಾಡಿಸಿ, ಔಷಧಿ ಗುಣವುಳ್ಳ ಘೊಟ್ಟ ಕುಡಿಸಿ, ಅಲಂಕಾರ ಮಾಡಿ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಳ್ಳುವುದು ಸಂಪ್ರದಾಯ.
ಕಾರ ಹುಣ್ಣಿಮೆ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ರೈತರ ಮನೆಯಲ್ಲಿ ಅಂದು ಹೊಳಿಗೆ ಸೇರಿದಂತೆ ವಿವಿಧ ಖಾದ್ಯ ತಯಾರಿಸಿ ಭಕ್ತಿ ಸಮರ್ಪಣೆ ಮಾಡುವ ಮೂಲಕ ರಾಸುಗಳಿಗೆ ನಮಸ್ಕರಿಸುತ್ತಾರೆ. ಎತ್ತುಗಳ ಅಂದ ಚಂದದ ಶೃಂಗಾರಕ್ಕೆ ಬೇಕಾಗುವ ವಿವಿಧ ಬಣ್ಣಗಳ ಬಾಸಿಂಗ, ಜತ್ತಿಗೆ, ಹಣೆಕಟ್ಟು, ಹಗ್ಗ, ಬಾರಕೋಲ, ಕೊಬ್ಬರಿ, ಗೊಂಡೆ, ಗಾಜಮಕಡಿ, ಮಿಂಚು ಬಣ್ಣಗಳಿಂದ ಎತ್ತುಗಳನ್ನು ಶೃಂಗಾರ ಮಾಡಲಾಗುತ್ತದೆ.
ಕಾರ ಹಣ್ಣಿಮೆ ದಿನ ಅಲಂಕಾರ ಮಾಡಿದ ಜೋಡೆತ್ತುಗಳನ್ನು ಊರಿನ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ಮಾಡಿ ನಂತರ ರಾಸುಗಳನ್ನು ಓಡಿಸುವ (ಕರಿ ಹರಿಯುವ) ಸ್ಪರ್ಧೆ ನಡೆಸಲಾಗುತ್ತದೆ. ವೇಗವಾಗಿ ಓಡಿ ಅಗಸಿ ಬಾಗಿಲಿಗೆ ಬೇವಿನಸೊಪ್ಪು, ನೀರಳೆ ಹಣ್ಣು ಹಾಗೂ ಕೊಬ್ಬರಿಯಿಂದ ಕಟ್ಟಿದ ಸರವನ್ನು ಯಾವ ಎತ್ತು ಹರಿಯುತ್ತದೆಯೋ ಆ ಎತ್ತಿನ ಒಡೆಯನಿಗೆ ಬಹುಮಾನ ನೀಡುವ ಪದ್ಧತಿ ಇಂದಿಗೂ ಪ್ರಚಲಿತದಲ್ಲಿದೆ.
ಬಿಳಿ ಎತ್ತು ಕರಿ ಹರಿದರೆ ಆ ವರ್ಷ ಬಿಳಿ ಧಾನ್ಯಗಳು ಹೆಚ್ಚು ಬೆಳೆಯುತ್ತವೆ. ಅದರಂತೆ ಕಪ್ಪು, ಕಂದು ಬಣ್ಣದ ಎತ್ತುಗಳು ಜಯಶಾಲಿಯಾದರೆ ಆಯಾ ಬಣ್ಣದ ಧಾನ್ಯಗಳು ಹುಲುಸಾಗಿ ಬೆಳೆಯುತ್ತವೆ ಎನ್ನುವ ನಂಬಿಕೆ ರೈತಾಪಿ ವಲಯದಲ್ಲಿ ಕೇಳಿ ಬರುತ್ತದೆ. ಇಂತಹ ಜಾನಪದ ಸೊಗಡಿನ ಹಬ್ಬದಾಚರಣೆಗಳು ಆಧುನಿಕ ಭರಾಟೆಯ ಮಧ್ಯೆಯೂ ಉಳಿದಿರುವುದು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಕಾರ ಹುಣ್ಣಿಮೆ ಬರುವಿಕೆಗೆ ವಾರದ ಮುಂಚೆಯೇ ಮಕ್ಕಳು ಗಾಳಿಪಟ ಹಾರಾಟಕ್ಕೆ ಬೇಕಾಗುವ ದಾರ ತಯಾರಿಸುವಲ್ಲಿ ನಿರತರಾಗಿದ್ದಾರೆ. ಯುವಕರು, ಮಹಿಳೆಯರು ಮನೆಯ ಮಾಳಿಗೆ ಮೇಲೆ ಗಾಳಿಪಟ ಹಾರಿಸುವ ಮೂಲಕ ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮಿಸಲು ತುದಿಗಾಲಲ್ಲಿ ನಿಂತಿದ್ದಾರೆ.