ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಂಬಂಧಿತ ಮಾಹಿತಿ ನೀಡಲಾಯಿತು.
ಸರಕಾರಿ ಆಯುರ್ವೇದ ಆಸ್ಪತ್ರೆಯ ಡಾ| ಶುಭಾ ರಾಜೇಶ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಂರಕ್ಷಣೆಯ ಕುರಿತು ಹಲವು ಸಲಹೆಗಳನ್ನು ನೀಡಿದರು.
ವಿದ್ಯಾರ್ಥಿನಿಯರು, ಕಿಶೋರಿಯರಲ್ಲಿ ಹದಿಹರೆಯದ ಸಹಜ ಸಮಸ್ಯೆಗಳು ಕಾಣಿಸಿಕೊಂಡಾಗ ಕೈಗೊಳ್ಳಬೇಕಾದ ಪರಿಹಾರಗಳ ಬಗ್ಗೆ ವಿವರಿಸಿದರು. ಲೋಳೆ ಸರ, ಗರಿಕೆ, ಮುಟ್ಟಿದರೆ ಮುನಿಗಿಡ, ಇಂಗು, ಅಡಿಗೆ ಮನೆಯಲ್ಲಿ ಬಳಸುವ ಸಾಮಗ್ರಿಗಳಿಂದ ಅನೇಕ ಸಮಸ್ಯೆಗಳಿಗೆ ಮನೆಯಲ್ಲಿಯೇ ಔಷಧಿ ತಯಾರಿಕೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಿತವಾಗಿ, ಹಿತವಾಗಿ, ಋತುವಿಗೆ ಅನುಗುಣವಾಗಿ ಆಹಾರಸೇವನೆ ಮಾಡಿದರೆ ಆರೋಗ್ಯಕ್ಕೆ ಯಾವುದೇ ಸಮಸ್ಯೆಯುಂಟಾಗದು. ಆಯುರ್ವೇದದಲ್ಲಿ ತಿಳಿಸಿರುವಂತೆ ಸ್ಥಳೀಯವಾಗಿ ದೊರಕುವ ಹಣ್ಣುಹಂಪಲು, ತರಕಾರಿ ಸೇವನೆಯಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದೂ ಡಾ| ಶುಭಾ ತಿಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ., ಕಾರ್ಯದರ್ಶಿ ಪಿ.ಎಂ. ಸಂದೀಪ್, ಮಿಸ್ಟಿಹಿಲ್ಸ್ ನಿರ್ದೇಶಕರಾದ ಬಿ.ಜಿ. ಅನಂತಶಯನ, ದೇವಣೀರ ತಿಲಕ್, ಪಿ.ಆರ್.ರಾಜೇಶ್, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಎಂ. ಪೆಮ್ಮಯ್ಯ, ಪ್ರಾಂಶುಪಾಲೆ ದೇವಕಿ, ಶಿಕ್ಷಕಿಯರು, ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿಲ ಪಾಲ್ಗೊಂಡಿದ್ದರು. ವೈಯಕ್ತಿಕ ಆರೋಗ್ಯ ಮತ್ತು ದೈಹಿಕ ಶುಚಿತ್ವದ ಕುರಿತಂತೆ ವೈದ್ಯೆಯಿಂದ ಅನೇಕ ವಿದ್ಯಾರ್ಥಿನಿಯರು ಸಲಹೆ ಪಡೆದರು.