Advertisement

ವರ ಮಹಾಲಕ್ಷ್ಮೀ ಪೂಜೆಗೆ ಸಿದ್ಧತೆ ಜೋರು

07:08 AM Jul 31, 2020 | mahesh |

ಕಲಬುರಗಿ: ವರ ಮಹಾಲಕ್ಷ್ಮೀ ಹಬ್ಬಕ್ಕಾಗಿ ಖರೀದಿಗೆಂದು ಗುರುವಾರ ಮಾರ್ಕೆಟ್‌ನಲ್ಲಿ ಜನ ಜಂಗುಳಿ ತುಂಬಿತ್ತು. ಮಹಾಮಾರಿ ಕೋವಿಡ್ ಸೋಂಕಿನ ಅಟ್ಟಹಾಸದ ನಡುವೆಯೂ
ನಾಗರಿಕರು ಗುಂಪು-ಗುಂಪಾಗಿ ಹಬ್ಬದ ಖರೀದಿಯಲ್ಲಿ ತೊಡಗಿದ್ದರು. ಶ್ರಾವಣ ಮಾಸದ ಎರಡನೇ ಶುಕ್ರವಾರ (ಇಂದು) ವರ ಮಹಾಲಕ್ಷ್ಮೀ ಪೂಜೆಯನ್ನು ಹಬ್ಬದಂತೆ ಆಚರಿಸುವ
ಸಂಪ್ರದಾಯವಿದೆ.

Advertisement

ಪ್ರತಿ ವರ್ಷವೂ ಲಕ್ಷ್ಮೀ ಪೂಜೆಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗಿದೆ. ಈ ವರ್ಷ ಕೊರೊನಾ ಸೋಂಕು ರಣಕೇಕೆ ಹಾಕುತ್ತಿದೆ. ಆದರೂ, ಇದನ್ನು ಲೆಕ್ಕಿಸದೆ ನಾಗರಿಕರು ಇಲ್ಲಿನ ಸೂಪರ್‌ ಮಾರ್ಕೆಟ್‌, ರಾಮ ಮಂದಿರ ವೃತ್ತ ಸೇರಿ ಅನೇಕ ಕಡೆಗಳಲ್ಲಿ ಪೂಜೆಗೆ ಬೇಕಾದ ವಸ್ತುಗಳ  ಖರೀದಿಯಲ್ಲಿ ಮುಗಿಬಿದ್ದಿದ್ದರು. ಅದರಲ್ಲೂ ಸೂಪರ್‌ ಮಾರ್ಕೆಟ್‌ ನಲ್ಲಿ ಜನ ಜಂಗಳಿ ಸೇರಿತ್ತು. ರಸ್ತೆಯ ತುಂಬೆಲ್ಲಾ ಬಂಡಿಗಳನ್ನು ಇಟ್ಟುಕೊಂಡು ಹೂವು-ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಆದ್ದರಿಂದ ಈ ರಸ್ತೆಯಲ್ಲಿ ಹಾದು ಹೋಗುವುದೇ ಸಾಹಸ ಎಂಬಂತೆ ಆಗಿತ್ತು. ಇತ್ತ, ರಾಮ ಮಂದಿರ ವೃತ್ತ, ಸೇಡಂ ರಸ್ತೆ, ಶಹಾಬಜಾರ ನಾಕಾ ಸಮೀಪವೂ ಬಿರುಸಿನಿಂದ ವ್ಯಾಪಾರ ನಡೆಯಿತು.

ಪೂಜೆಗಾಗಿ ಹೂವು, ಹಣ್ಣು, ಬಾಳೆದಿಂಡು, ಕಬ್ಬು ಮೊದಲಾದವನ್ನು ಖರೀದಿಸಲು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಸಂಜೆ  ಹೊತ್ತು ಮಳೆ ಸುರಿಯುತ್ತಿದ್ದಾಗಲೂ ಜನರು ಖರೀದಿಯಲ್ಲಿ ತೊಡಗಿದ್ದರು. ತರಕಾರಿ ಖರೀದಿಯಲ್ಲೂ ಜನರು ತೊಡಗಿದ್ದರು. ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌  ಜಾರಿಗೊಳಿಸಿದ್ದ ಹಬ್ಬಗಳು ಸೊರಗಿ ಹೋಗಿದ್ದವು. ಈಗ ಅನ್‌
ಲಾಕ್‌ ಮಾಡಿದ್ದರಿಂದ ಸೋಂಕಿನ ಭಯವಿಲ್ಲದೇ ಹಬ್ಬದ ಖರೀದಿಯಲ್ಲಿ  ತೊಡಗಿಸಿಕೊಂಡಿದ್ದರು.

ಕಲಬುರಗಿ ನಗರದಲ್ಲಿ ಬಿರುಸಿನ ಮಳೆ
ಕಲಬುರಗಿ ನಗರದ ವ್ಯಾಪ್ತಿಯಲ್ಲಿ ಗುರವಾರ ಸಾಯಂಕಾಲ ಬಿರುಸಿನ ಮಳೆ ಆಯಿತು. ಒಂದು ಗಂಟೆಗೂ ಹೆಚ್ಚು ಹೊತ್ತು ನಗರದ ಹಲವಡೆ ಧಾರಾಕಾರ ಮಳೆ ಸುರಿಯಿತು. ಇದರಿಂದಾಗಿ ಲಾಲಗೇರಿ ಕ್ರಾಸ್‌, ಖಾಜಾ ಬಂದಾ ನವಾಜ… ಆಸ್ಪತ್ರೆ, ಬ್ರಹ್ಮಪುರ, ಮುಸ್ಲಿಂ ಚೌಕ್‌ ಸೇರಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿತ್ತು. ಕಲಬುರಗಿಯ ವೆಂಕಟೇಶ್ವರ ನಗರ, ರಾಜಾಪುರ ಬಡಾವಣೆ ಹಾಗೂ ಆಳಂದ ರಸ್ತೆಗಳಲ್ಲಿ ಮಳೆಯ ಕಾಲಕ್ಕೆ ಗಾಳಿಯೂ ಬೀಸಿದ್ದರಿಂದ ಮರದ ಕೊಂಬೆಗಳು ಮುರಿದು ರಸ್ತೆಯಲ್ಲಿ ಬಿದ್ದವು. ರಾಜಾಪುರ ಬಡಾವಣೆ ಹಾಗೂ
ಆಳಂದ ರಸ್ತೆಗಳಲ್ಲಿ ಎರಡು ಮರಗಳು ಬಿದ್ದಿದ್ದವು. ಪಾಲಿಕೆ ಮತ್ತು ಜೆಸ್ಕಾಂ ಸಿಬ್ಬಂದಿ ದೌಡಾಯಿಸಿ ಬಿದ್ದಿರುವ ಟೊಂಗೆಗಳನ್ನು ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next