Advertisement

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

02:27 AM May 19, 2024 | Team Udayavani |

ಉಡುಪಿ: ಉಭಯ ಜಿಲ್ಲೆಗಳಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮೇ 29ರಿಂದ 2024-25ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದೆ. ಸರಕಾರಿ ಶಾಲೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲು ಬೇಕಾದ ತಯಾರಿಯೂ ಆಗುತ್ತಿದೆ.

Advertisement

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಪಠ್ಯಪುಸ್ತಕ ಹಾಗೂ ಸಮವಸ್ತ್ರದ ಮಾಹಿತಿಯನ್ನು ಈಗಾಗಲೇ ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಅದರಂತೆ ಉಡುಪಿಗೆ ಶೇ. 47.67ರಷ್ಟು ಹಾಗೂ ದ.ಕ. ಜಿಲ್ಲೆಗೆ ಶೇ. 44.68ರಷ್ಟು ಪುಸ್ತಕ ಬಿಇಒ ಕಚೇರಿಗಳಿಗೆ ಪೂರೈಕೆಯಾಗಿದೆ. ಸಮವಸ್ತ್ರ ಕೆಲವು ಜಿಲ್ಲೆಗಳಿಗೆ ಇನ್ನೂ ಬಂದಿಲ್ಲ. ದ.ಕ. ಜಿಲ್ಲೆಯ ಸರಕಾರಿ ಶಾಲಾ ಮಕ್ಕಳಿಗೆ ವಿತರಿಸಲು ತಲಾ 2 ಜೊತೆ ಸಮವಸ್ತ್ರ ಪೂರೈಕೆಯಾಗಿದೆ. ಉಡುಪಿ ಜಿಲ್ಲೆಗೆ ಇನ್ನಷ್ಟೇ ಪೂರೈಕೆಯಾಗಬೇಕಿದೆ.

ದಾಖಲಾತಿ ಆಂದೋಲನ
ಪ್ರತಿ ವರ್ಷದಂತೆ ಈ ಬಾರಿಯೂ ಉಭಯ ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಂದೋಲನಕ್ಕೆ ಇಲಾಖೆ ರೂಪುರೇಖೆ ಸಿದ್ಧಪಡಿಸಿ ನೀಡಿದೆ. ಆಯಾ ಶೈಕ್ಷಣಿಕ ವಲಯಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಸಿಬಂದಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡುತ್ತಿದ್ದಾರೆ. ಸರಕಾರಿ ಶಾಲಾ ಮಕ್ಕಳಿಗೆ ಸರಕಾರದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಜಾಥಾಗಳನ್ನು ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಅಧಿಕಾರಿಗಳಿಗೆ ನಿರ್ದೇಶನ: ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳ ಅನುಷ್ಠಾನ ಹೇಗಾಗಿದೆ ಎಂಬುದನ್ನು ಶಾಲಾ, ಕ್ಲಸ್ಟರ್‌, ಬ್ಲಾಕ್‌, ಜಿಲ್ಲೆ, ವಿಭಾಗ ಮಟ್ಟದಲ್ಲಿ ಪರಿಶೀಲನೆ ನಡೆಸಬೇಕು. ಜಿಲ್ಲಾಮಟ್ಟದ ನಿರ್ದಿಷ್ಟ ಅಧಿಕಾರಿಗಳ ತಂಡ ಶಾಲೆ, ಕ್ಲಸ್ಟರ್‌ ಹಾಗೂ ಬ್ಲಾಕ್‌ಗಳಿಗೆ ಭೇಟಿ ನೀಡಿ ಅನುದಾನದ ಬಳಕೆ, ವಿತರಣೆ, ನಿರ್ವಹಣೆ ಸಹಿತ ಮಧ್ಯಾಹ್ನದ ಬಿಸಿಯೂಟ ಹೀಗೆ ಎಲ್ಲ ವಿಷಯಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂಬ ನಿರ್ದೇಶನ ನೀಡಲಾಗಿದೆ.

ದುರಸ್ತಿಗೆ ಕ್ರಮ
ಶಾಲಾರಂಭಕ್ಕೆ ಕೆಲವೇ ದಿನ ಇರುವುದರಿಂದ ಶಾಲಾವರಣದ ಸ್ವತ್ಛತೆ, ಸುಣ್ಣಬಣ್ಣ ಹಾಗೂ ಕೊಠಡಿ, ಮೈದಾನ, ಪೀಠೊಪಕರಣ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತ ಯಾವುದೇ ದುರಸ್ತಿ ಕಾರ್ಯಗಳಿದ್ದರೂ ಮೇ 29ರೊಳಗೆ ಪೂರ್ಣಗೊಳಿಸಬೇಕು. ಮಳೆಗಾಲದಲ್ಲಿ ಮಕ್ಕಳಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಎಲ್ಲ ಶಾಲಾ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ ನೀಡಿದ್ದಾರೆ.

Advertisement

ಶಾಲಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಪಠ್ಯಪುಸ್ತಕ ಹಾಗೂ ಸಮವಸ್ತ್ರ ಬರುತ್ತಿವೆ. ಶಾಲಾರಂಭದ ದಿನವನ್ನು ವಿಶೇಷವಾಗಿ ಆಚರಿಸಲು ಮತ್ತು ವಿದ್ಯಾರ್ಥಿಗಳಿಗೆ ಮೊದಲ ದಿನ ಹೆಚ್ಚೆಚ್ಚು ಪ್ರೇರಣಾದಾಯಿ ಮಾಹಿತಿ ನೀಡಲು ಯೋಚನೆ ನಡೆಯುತ್ತಿದೆ. ಎಲ್ಲ ಶಾಲೆಗಳಲ್ಲೂ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಸಭೆ ನಡೆಸಿ, ಮಳೆಗಾಲಕ್ಕೂ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕೆ.ಗಣಪತಿ,
ವೆಂಕಟೇಶ ಸುಬ್ಯಾಯ ಪಾಟಗಾರ,
ಡಿಡಿಪಿಐ, ಉಡುಪಿ, ದ.ಕ.

ಉಡುಪಿ ಮತ್ತು ದ.ಕ. ಜಿಲ್ಲೆಯ ಪಠ್ಯಪುಸ್ತಕದ ಬೇಡಿಕೆ ಮತ್ತು ಪೂರೈಕೆ ವಿವರ
(ಮೇ 18ಕ್ಕೆ ಅನ್ವಯವಾಗುವಂತೆ)

ಉಡುಪಿ ಜಿಲ್ಲೆ
ಸರಕಾರಿ ಶಾಲೆ:
ಬೇಡಿಕೆ- 11,65,178, ಪೂರೈಕೆ-5,55,418
ಖಾಸಗಿ, ಅನುದಾನಿತ ಶಾಲೆ :
ಬೇಡಿಕೆ -6,22,234, ಪೂರೈಕೆ-3,31,843
ದಕ್ಷಿಣ ಕನ್ನಡ ಜಿಲ್ಲೆ
ಸರಕಾರಿ ಶಾಲೆ:
ಬೇಡಿಕೆ- 21,44,825, ಪೂರೈಕೆ-9,58,357
ಖಾಸಗಿ, ಅನುದಾನಿತ ಶಾಲೆ:
ಬೇಡಿಕೆ -15,98,864 , ಪೂರೈಕೆ-7,73,375

Advertisement

Udayavani is now on Telegram. Click here to join our channel and stay updated with the latest news.

Next