Advertisement

ಹುಬ್ಬಳ್ಳಿ: ಪ್ರಥಮ ಪ್ರಜೆ ಪೌರಸನ್ಮಾನಕ್ಕೆ ಭರದ ಸಿದ್ಧತೆ

03:07 PM Sep 20, 2022 | Team Udayavani |

ಹುಬ್ಬಳ್ಳಿ: ಸರಿಸುಮಾರು ಮೂರುವರೆ ದಶಕಗಳ ಬಳಿಕ ರಾಷ್ಟ್ರಪತಿಯವರಿಗೆ ಪೌರಸನ್ಮಾನಕ್ಕೆ ವಾಣಿಜ್ಯನಗರಿ ಸಜ್ಜಾಗುತ್ತಿದೆ. ಎರಡನೇ ಬಾರಿಗೆ ರಾಷ್ಟ್ರದ ಪ್ರಥಮ ಪ್ರಜೆಗೆ ಪೌರಸನ್ಮಾನ ಮಾಡುವ ಭಾಗ್ಯವನ್ನು ಹು-ಧಾ ಮಹಾನಗರ ಪಾಲಿಕೆ ಪಡೆದುಕೊಂಡಿದೆ.

Advertisement

ಸೆ.26ರಂದು ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಲು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಕ್ಲಬ್‌ ಶೃಂಗಾರಗೊಳ್ಳುತ್ತಿದೆ. ರಾಜ್ಯ-ದೇಶ, ವಿದೇಶಗಳ ಅತ್ಯುನ್ನತ ಸ್ಥಾನದಲ್ಲಿದ್ದವರು, ಮೇರು ಕಲಾವಿದರು, ಯೋಧರು, ಸಾಧಕರಿಗೆ ಮಹಾನಗರ ಪಾಲಿಕೆ ಪೌರಸನ್ಮಾನ ಕೈಗೊಳ್ಳುತ್ತದೆ. ಮಹಾನಗರದ ಜನತೆಯ ಪರವಾಗಿ ಈ ಸನ್ಮಾನ ಸಲ್ಲಿಕೆಯಾಗುತ್ತದೆ. ಪಾಲಿಕೆ ಅಸ್ತಿತ್ವಕ್ಕೆ ಬಂದು 60 ವರ್ಷಗಳಾಗಿದ್ದು, ಹಲವು ಗಣ್ಯರು, ಕಲಾವಿದರು, ಸಾಧಕರಿಗೆ ಪೌರಸನ್ಮಾನ ಸಲ್ಲಿಸುತ್ತ ಬಂದಿದೆ. ಇದೀಗ ದೇಶದ ಎರಡನೇ ಮಹಿಳಾ ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗುತ್ತಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿಶೇಷ ಮುತುವರ್ಜಿಯೊಂದಿಗೆ ರಾಷ್ಟ್ರಪತಿಯವರಿಗೆ ಪೌರಸನ್ಮಾನದ ಅವಕಾಶ ಹು-ಧಾ ಮಹಾನಗರ ಪಾಲಿಕೆಗೆ ಲಭ್ಯವಾಗಿದೆ. ಐಐಐಟಿ ಉದ್ಘಾಟನೆಗೆಂದು ರಾಷ್ಟ್ರಪತಿಯವರು ಸೆ.26ರಂದು ಅವಳಿನಗರಕ್ಕೆ ಆಗಮಿಸುತ್ತಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಪೌರಸನ್ಮಾನ ನಡೆಯಲಿದೆ. 1986-87ರಲ್ಲಿ ಗ್ಯಾನಿ ಜೈಲ್‌ಸಿಂಗ್‌ ಅವರು ಹುಬ್ಬಳ್ಳಿಗೆ ಆಗಮಿಸಿದ್ದಾಗ ಪಾಲಿಕೆಯಿಂದ ಪೌರಸನ್ಮಾನ ನೀಡಲಾಗಿತ್ತು. ಇದೀಗ ಸುಮಾರು 35 ವರ್ಷಗಳ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗುತ್ತಿದೆ.

ಸ್ವಚ್ಛತೆ-ದುರಸ್ತಿ ಕಾರ್ಯ

ಪಾಲಿಕೆಯಿಂದ ರಸ್ತೆ ಸ್ವಚ್ಛತೆ ಸೇರಿದಂತೆ ಹಲವು ತಯಾರಿ ಕಾರ್ಯಗಳು ಹಗಲು-ರಾತ್ರಿ ಎನ್ನದೆ ನಡೆಯುತ್ತಿವೆ. ಗೋಕುಲ ರಸ್ತೆ ಸ್ವಚ್ಛಗೊಳಿಸುವ, ಪೇಂಟಿಂಗ್‌ ಮೂಲಕ ಅಂದಗೊಳಿಸುವ ಕಾರ್ಯ ಒಂದೆಡೆಯಾದರೆ, ಪೌರಸನ್ಮಾನ ನಡೆಯುವ ದೇಶ ಪಾಂಡೆ ನಗರದ ಮೈದಾನ ಬಳಿಯ ರಾಜಕಾಲುವೆ ಸ್ವಚ್ಛತೆ, ಇನ್ನಿತರ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ.

Advertisement

ಐದನೇ ರಾಷ್ಟ್ರಪತಿ

ದ್ರೌಪದಿ ಮುರ್ಮು ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಐದನೇ ರಾಷ್ಟ್ರಪತಿ ಯಾಗಿದ್ದಾರೆ. ಈ ಮೊದಲು ದೇಶದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌, ಗ್ಯಾನಿ ಜೈಲ್‌ ಸಿಂಗ್‌, ಡಾ| ಅಬ್ದುಲ್‌ ಕಲಾಂ, ಪ್ರಣವ್‌ ಮುಖರ್ಜಿ ಅವರು ಆಗಮಿಸಿದ್ದರು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆ.

ರಜತ ಸಂಭ್ರಮದಲ್ಲಿ

1986-87ರಲ್ಲಿ ಗ್ಯಾನಿ ಜೈಲ್‌ಸಿಂಗ್‌ ಅವರು ಧಾರವಾಡದ ಕೃಷಿ ವಿವಿಗೆ ಆಗಮಿಸಿದ್ದಾಗ ಅವರಿಗೆ ಇಲ್ಲಿನ ರೈಲ್ವೆ ಮೈದಾನದಲ್ಲಿ ಪೌರ ಸನ್ಮಾನ ಕೈಗೊಳ್ಳಲಾಗಿತ್ತು. ಪಿ.ಎಚ್‌. ಪವಾರ ಮಹಾಪೌರರಾಗಿದ್ದರು. ಎಸ್‌.ಆರ್‌.ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆರಂಭಗೊಂಡು ರಜತಮಹೋತ್ಸವ ಸಂಭ್ರಮದಲ್ಲಿತ್ತು.

ದೇವೇಗೌಡರಿಗೂ-ರಾಜ್‌ಕುಮಾರ್‌ಗೂ

ಎಚ್‌.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಅವರಿಗೂ ಸಹ ಪಾಲಿಕೆಯಿಂದ ಪೌರಸನ್ಮಾನ ಕೈಗೊಳ್ಳಲಾಗಿತ್ತು. ಅವರಿಗೆ ಗೋಲ್ಡನ್‌ ಕೀ ನೀಡುವ ಮೂಲಕ ಉತ್ತರ ಕರ್ನಾಟಕದ ಹೆಬ್ಟಾಗಿಲು ಹುಬ್ಬಳ್ಳಿಗೆ ಸ್ವಾಗತ ಎಂದು ಕೋರಲಾಗಿತ್ತು. 1997ರಲ್ಲಿ ಡಾ| ರಾಜಕುಮಾರ ಅವರಿಗೂ ಪೌರಸನ್ಮಾನ ಕೈಗೊಳ್ಳಲಾಗಿತ್ತು. ಇಲ್ಲಿನ ನೆಹರು ಮೈದಾನದಲ್ಲಿ ನಡೆದ ಪೌರಸನ್ಮಾನಕ್ಕೆ ಜನಸ್ತೋಮವೇ ನೆರೆದಿತ್ತು. ಆಗ ಡಾ| ಪಾಂಡುರಂಗ ಪಾಟೀಲರು ಮಹಾಪೌರರಾಗಿದ್ದರು. ಅದೇ ರೀತಿ ಹಿಂದೂಸ್ತಾನಿ ಗಾಯಕಿ ಡಾ| ಗಂಗೂಬಾಯಿ ಹಾನಗಲ್ಲ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದ ಸಂದರ್ಭದಲ್ಲೂ ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗಿತ್ತು.

65 ನಿಮಿಷ ಕಾರ್ಯಕ್ರಮ

ರಾಷ್ಟ್ರಪತಿ ಪೌರಸನ್ಮಾನಕ್ಕಾಗಿ ದೇಶಪಾಂಡೆ ನಗರದ ಮೈದಾನ ಸಜ್ಜುಗೊ ಳ್ಳುತ್ತಿದೆ. ಪಾಲಿಕೆ ಸುಮಾರು 5,000 ಆಹ್ವಾನ ಪತ್ರಿಕೆ ಮುದ್ರಣ ಮಾಡುತ್ತಿದ್ದು, 3,500ರಿಂದ 4,000 ಆಸನ ವ್ಯವಸ್ಥೆ ಮಾಡುತ್ತಿದೆ. ಕಾರ್ಯಕ್ರಮ 65 ನಿಮಿಷ ದವರೆಗೆ ನಡೆಯಲಿದೆ. ರಾಷ್ಟ್ರಪತಿವರಿಗೆ ಸದ್ಗುರು ಸಿದ್ಧಾರೂಢಸ್ವಾಮಿ ಯವರ 800-900 ಗ್ರಾಂ ತೂಕದ ಬೆಳ್ಳಿ ಮೂರ್ತಿ, ಪೌರಸನ್ಮಾನ ಪತ್ರ ನೀಡಲಾಗುತ್ತದೆ.

ಐವರಿಗೆ ಮಾತನಾಡಲು ಅವಕಾಶ?

ವೇದಿಕೆ ಮೇಲೆ ರಾಷ್ಟ್ರಪತಿಯವರು ಸೇರಿದಂತೆ ಐವರು ಮಾತ್ರ ಮಾತನಾಡುವುದಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಮಾತನಾಡಲು, ಮಹಾಪೌರ ಈರೇಶ ಅಂಚಟಗೇರಿ ಅವರು ಪ್ರಾಸ್ತಾವಿಕ ಮಾತನಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ವೇದಿಕೆ ಮೇಲೆ ಎಷ್ಟು ಜನರಿರಬೇಕು, ಯಾರು ಮಾತನಾಡಬೇಕು, ಎಷ್ಟು ನಿಮಿಷ ಮಾತನಾಡಬೇಕು ಎಂಬುದರ ಬಗ್ಗೆ ರಾಷ್ಟ್ರಪತಿ ಭವನ ನಿರ್ಧರಿಸಲಿದೆ.

ಆಹ್ವಾನ ಪತ್ರಿಕೆ ಸಿದ್ಧಪಡಿಸಿದ್ದರೂ ರಾಷ್ಟ್ರಪತಿ ಭವನದಿಂದ ಒಪ್ಪಿಗೆ ಬಂದ ನಂತರ ಆಹ್ವಾನ ಪತ್ರಿಕೆಯಲ್ಲಿ ಯಾರು ಇರುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಮಂಗಳವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಷ್ಟ್ರಪತಿ ಅವರನ್ನು ಭೇಟಿ ಆಗಲಿದ್ದಾರೆ. ಸೆ.22ರಂದು ಆಹ್ವಾನ ಪತ್ರಿಕೆ ಅಂತಿಮಗೊಳ್ಳುವ ವಿಶ್ವಾಸವಿದೆ. ಮಹಾನಗರ ಪಾಲಿಕೆ ಶಿಷ್ಟಾಚಾರದಂತೆ 28-32 ಜನರಿಗೆ ಅವಕಾಶ ಇದೆ. ರಾಷ್ಟ್ರಪತಿ ಅವರ ಹಿಂಬದಿ ಸಾಲಿನಲ್ಲಿ ಆಸನಗಳಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ. ಎಷ್ಟು ಜನ ಎಂಬ ಸೂಚನೆ ಬಂದ ನಂತರ ವೇದಿಕೆಯಲ್ಲಿ ಹೇಗೆ ಆಸನ ವ್ಯವಸ್ಥೆ ಎಂಬುದನ್ನು ನಿರ್ಧರಿಸಲಾಗುವುದು. –ಈರೇಶ ಅಂಚಟಗೇರಿ, ಮಹಾಪೌರ

1986-87ರಲ್ಲಿ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೈಲ್‌ಸಿಂಗ್‌ ಅವರಿಗೆ ಪೌರಸನ್ಮಾನ ನಡೆದಾಗ ನಾನು ಪಾಲ್ಗೊಂಡಿದ್ದೆ. 1997ರಲ್ಲಿ ನಾನು ಮಹಾಪೌರನಾಗಿದ್ದಾಗ ಎರಡು ಪೌರಸನ್ಮಾನಗಳು ನಡೆದಿದ್ದವು. ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಹುಬ್ಬಳ್ಳಿಗೆ ಆಗಮಿಸಿದ್ದ ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗಿತ್ತು. ಎಸ್‌.ಆರ್‌ .ಬೊಮ್ಮಾಯಿ ಅವರು ಕೇಂದ್ರ ಸಚಿವರಾಗಿದ್ದರು. ಅದೇ ವರ್ಷದಲ್ಲಿ ವರನಟ ಡಾ| ರಾಜಕುಮಾರ ಅವರಿಗೆ ಪೌರಸನ್ಮಾನವನ್ನು ನೆಹರು ಮೈದಾನದಲ್ಲಿ ಕೈಗೊಳ್ಳಲಾಗಿತ್ತು. –ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ

-ಅಮರೇಗೌಡ ಗೋನವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next