ಬಜಪೆ: ಬಜಪೆ ಗ್ರಾ.ಪಂ. ವ್ಯಾಪ್ತಿಯ ಬಜಪೆ ಗ್ರಾಮದ 2019- 20ನೇ ಸಾಲಿನ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಯು ಬುಧವಾರ ಬಜಪೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪಿಡಿಒ ಸಾಯೀಶ್ ಚೌಟ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಬಜಪೆ ಗ್ರಾ.ಪಂ. ವ್ಯಾಪ್ತಿಯ 15 ಕೊಳವೆಬಾವಿಯ ಜಲಮರುಪೂರಣಕ್ಕೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದ್ದು ಈ ಬಾರಿ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಈಗಾಗಲೇ ಸಾರ್ವಜನಿಕರಿಂದ ಮಳೆಕೊಯ್ಲುಗೆ 10 ಬೇಡಿಕೆಗಳು ಬಂದಿವೆ. ಈ ಬಗ್ಗೆ ಯೋಜನೆಯ ಎಂಜಿನಿಯರ್ ಅವರಿಂದ ಅಂದಾಜು ವೆಚ್ಚ ತಯಾರಿಸಿ, ತಾಲೂಕು ಮುಖ್ಯ ಕಾರ್ಯನಿರ್ವಾಹಕ ಅವರಿಗೆ ನೀಡಿ, ಅವರ ಮೂಲಕ ಸರಕಾರಕ್ಕೆ ಸಲ್ಲಿಸಿ, ಅನುಮತಿ ಪಡೆಯಲಾಗುತ್ತದೆ ಎಂದರು.
ಸಭೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಮನೆಯ ಬಾವಿಗೆ ಮಳೆಕೊಯ್ಲುಗೆ ಮತ್ತು ಮನೆಮನೆ ಕಾಂಪೋಸ್ಟ್ ಫಿಟ್ ನಿರ್ಮಾಣಕ್ಕೆ ಅನುದಾನ ನೀಡಲು ಅವಕಾಶ ಕಲ್ಪಿಸಬೇಕು. ವೈಯಕ್ತಿಕ ಕೊಳವೆ ಬಾವಿ ಜಲಮರುಪೂರಣಕ್ಕಾಗಿ ನೀಡುವ ಅನುದಾನವನ್ನು ಹೆಚ್ಚಿಸಬೇಕು. ವಿಧವಾ ಪಿಂಚಣಿ ಏರಿಸ ಬೇಕು. ನರೇಗಾ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆ ಸ್ಪಂದಿಸ ಬೇಕು ಎಂಬ ಬೇಡಿಕೆಗಳು ಸಭೆಯಲ್ಲಿ ಕೇಳಿಬಂದವು.
ಯೋಜನೆಯ ತಾಲೂಕು ಸಂಯೋಜಕಿ ಧನಲಕ್ಷ್ಮೀ ಅವರು ಯೋಜನೆಯ ಮಾಹಿತಿ ನೀಡಿ, ಈ ಬಾರಿ ನರೇಗಾ ಯೋಜನೆ ಜತೆ ಪಿಂಚಣಿದಾರರ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡಲಾಗುತ್ತದೆ. ವ್ಯಾಪ್ತಿಯಲ್ಲಿ ನಾಲ್ಕು ದಿನಗಳಲ್ಲಿ 260 ಪಿಂಚಣಿದಾರರು ಲೆಕ್ಕ ಪರಿಶೋಧನೆಗೆ ಒಳಪಟ್ಟಿದ್ದಾರೆ. ಪಿಂಚಣಿ ಹಣ ಸಾಕಾಗುವುದಿಲ್ಲ ಎಂದು ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಲಾಗುವುದು. 2018ರ ಅ. 1ರಿಂದ 2019ರ ಮಾ. 31ರ 6ತಿಂಗಳ ಅವಧಿಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಯೋಜನೆಯಡಿ 12,85,097 ರೂ. ಮೊತ್ತದ 35 ಕಾಮಗಾರಿಗಳು ನಡೆದಿವೆ ಎಂದರು.
ಗ್ರಾಮ ಸಭೆಯಲ್ಲಿ ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖೆಯ ಬಿಆರ್‌ಪಿ ತುಳಸೀ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧಕ್ಷೆ ರೋಝಿ ಮಥಾಯಸ್, ಉಪಾಧ್ಯಕ್ಷ ಮಹಮದ್ ಶರೀಫ್, ಕೃಷಿ ಅಧಿಕಾರಿ ಬಶೀರ್, ಯೋಜನೆಯ ಎಂಜಿನಿಯರ್ ಮಮತಾ, ಗ್ರೀಷ್ಮಾ ಉಪಸ್ಥಿತರಿದ್ದರು. ಯೋಜನೆಯ ಸಂಪನ್ಮೂಲ ವ್ಯಕ್ತಿ ರೇಖಾಮಣಿ ನಿರ್ವಹಿಸಿದರು.