Advertisement

ನಕಲಿ ದಾಖಲೆ ಪತ್ರ ತಯಾರಿ: ಆರೋಪಿಗೆ ಮತ್ತೆರಡು ದಿನ ಪೊಲೀಸ್‌ ಕಸ್ಟಡಿ ವಿಸ್ತರಣೆ

12:20 AM Jul 16, 2023 | Team Udayavani |

ಪುತ್ತೂರು: ಗ್ರಾ.ಪಂ. ಮತ್ತು ನಗರಸಭೆಯ ನಕಲಿ ಸೀಲುಗಳು, ರಬ್ಬರ್‌ಸ್ಟಾಂಪ್‌, ದಾಖಲೆ ಪತ್ರಗಳನ್ನು ತಯಾರಿಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿ ಆರೋಪಿ ವಿಶ್ವನಾಥ್‌ ಬಿ.ವಿ.ಗೆ ಮತ್ತೆರಡು ದಿನ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಗಿದೆ.

Advertisement

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ ಎಚ್‌. ಅವರು ನೀಡಿದ ದೂರಿನಂತೆ, ಅವರ ನೇತೃತ್ವದಲ್ಲಿ ಜು. 11ರಂದು ಪುತ್ತೂರು ನಗರ ಠಾಣಾ ಪೊಲೀಸರು ಪಡೀಲ್‌ನ ಎಂ.ಎಸ್‌. ಕಾಂಪ್ಲೆಕ್ಸ್‌ನಲ್ಲಿರುವ ಬಿ.ಬಿ.ಎಲೆಕ್ಟ್ರಿಕಲ್ಸ ಆ್ಯಂಡ್‌ ಪ್ಲಂಬರ್ ಕಚೇರಿಗೆ ದಾಳಿ ನಡೆಸಿದ್ದರು. ಆ ವೇಳೆ ಅಲ್ಲಿ, ವಿವಿಧ ಗ್ರಾ.ಪಂ.ಗಳು ಮತ್ತು ನಗರಸಭೆಗೆ ಸಂಬಂಧಿಸಿದ ನಕಲಿ ಸೀಲುಗಳು, ರಬ್ಬರ್‌ಸ್ಟಾಂಪ್‌ ಹಾಗೂ ನಕಲಿ ದಾಖಲೆ ಪತ್ರಗಳು ಇರುವುದು ಬೆಳಕಿಗೆ ಬಂದಿತ್ತು.

ಆರೋಪಿ ವಿಶ್ವನಾಥ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಪದಲ್ಲಿ ಪೊಲೀಸರು ಬಂಧಿಸಿ, ಕಚೇರಿಯಲ್ಲಿದ್ದ ನಕಲಿ ಸೀಲು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು, ಕಚೇರಿಗೆ ಬೀಗ ಜಡಿದಿದ್ದರು. ಜು.12ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗೆ ಮೂರು ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದರು. ಪೊಲೀಸ್‌ ಕಸ್ಟಡಿ ಅವಧಿ ಪೂರ್ಣಗೊಂಡ ಬಳಿಕ ಜು. 15ರಂದು ಆರೋಪಿಯನ್ನು ನ್ಯಾಯಾ
ಲಯಕ್ಕೆ ಹಾಜರುಪಡಿಸಿದ ಪೊಲೀಸರು ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಆರೋಪಿಯನ್ನು ಇನ್ನೂ ಎರಡು ದಿನಗಳ ಮಟ್ಟಿಗೆ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿ ವಿಶ್ವನಾಥ್‌ ಬಿ.ಬಿ.ಯನ್ನು ಮತ್ತೆರಡು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next