Advertisement

ಶರನ್ನವರಾತ್ರಿ ಆಚರಣೆಗೆ ಭರದ ಸಿದ್ಧತೆ

12:44 PM Sep 25, 2022 | Team Udayavani |

ಹಾವೇರಿ: ನವರಾತ್ರಿ ಹಿನ್ನೆಲೆಯಲ್ಲಿ ಶಕ್ತಿದೇವತೆಗಳ ಆರಾಧನೆಗಾಗಿ ನಗರದ ಪ್ರಮುಖ ದೇಗುಲಗಳಲ್ಲಿ ಪೂರ್ವಸಿದ್ಧತೆಗಳು ಭರದಿಂದ ಸಾಗಿದ್ದು, ಕೆಲ ದೇವಸ್ಥಾನಗಳು ವಿದ್ಯುತ್‌ ದೀಪಾಲಂಕಾರದೊಂದಿಗೆ ಕಂಗೊಳಿಸುತ್ತಿವೆ.

Advertisement

ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ದಸರಾ ಸೇರಿದಂತೆ ಬಹುತೇಕ ಎಲ್ಲ ಹಬ್ಬಗಳನ್ನು ಸರಳ ಹಾಗೂ ಸಂಕ್ಷಿಪ್ತವಾಗಿ ಆಚರಿಸುವಂತಾಗಿತ್ತು. ಪುರಾಣ ಪ್ರವಚನ, ಪಾರಾಯಣ, ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಗಳಿಗೂ ಅವಕಾಶವಿಲ್ಲದಂತಾಗಿತ್ತು. ಪ್ರಸಕ್ತ ವರ್ಷ ಕೋವಿಡ್‌ ಸೋಂಕು ಮರೆಯಾಗಿದ್ದು, ಈ ಬಾರಿ ಸಂಭ್ರಮದಿಂದ ದಸರಾ ಹಬ್ಬ ಆಚರಣೆಗೆ ಜನರು ಉತ್ಸುಕರಾಗಿದ್ದಾರೆ.

ನಗರದ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ನವದುರ್ಗೆಯರ ದೇವಸ್ಥಾನ, ಬಸವೇಶ್ವರ ನಗರದ ಸಿ ಬ್ಲಾಕ್‌ನ ಅನ್ನಪೂರ್ಣೇಶ್ವರಿ ದೇವಸ್ಥಾನ, ಹಳೆಯ ಪಿ.ಬಿ.ರಸ್ತೆಯಲ್ಲಿರುವ ವಡ್ಡಮ್ಮದೇವಿ ದೇವಸ್ಥಾನ, ಮುನ್ಸಿಫಲ್‌ ಹೈಸ್ಕೂಲ್‌ ರಸ್ತೆಯಲ್ಲಿರುವ ದಾನಮ್ಮದೇವಿ ದೇವಸ್ಥಾನ, ಉದಯ ನಗರದಲ್ಲಿರುವ ಚೌಡೇಶ್ವರಿ ದೇವಸ್ಥಾನ, ದ್ಯಾಮವ್ವನ ಗುಡಿ ಓಣಿಯ ಶ್ರೀ ಕಾಳಿಕಾಂಬ ದೇವಸ್ಥಾನ, ಗ್ರಾಮದೇವತೆ ದೇವಸ್ಥಾನ, ಯಾಲಕ್ಕಿ ಓಣಿಯ ಜೈನ ಮಂದಿರ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಸುಣ್ಣ-ಬಣ್ಣ ಹಾಗೂ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿವೆ.

ನವದುರ್ಗಾ ದೇಗುಲದ ಕಾರ್ಯಕ್ರಮಗಳು: ನಗರದ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ನವದುರ್ಗಾ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ತ ಸೆ.26ರಿಂದ ಅಕ್ಟೋಬರ್‌ 5ರವರೆಗೆ ಶರನ್ನವರಾತ್ರಿ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.26ರಂದು ಶ್ರೀ ಶೈಲಪುತ್ರಿ ದೇವಿಗೆ ಅಭಿಷೇಕ ಹಾಗೂ ಪೂಜೆ, ಸೆ.27ರಂದು ಶ್ರೀ ಬ್ರಹ್ಮಚಾರಿಣೀ ದೇವಿಗೆ ಅಭಿಷೇಕ ಹಾಗೂ ಪೂಜೆ, ಸೆ.28ರಂದು ಶ್ರೀ ಚಂದ್ರಘಂಟಾ ದೇವಿಗೆ ಅಭಿಷೇಕ, ಸೆ.29ರಂದು ಶ್ರೀ ಕೂಷ್ಮಾಂಡಾ ದೇವಿಗೆ ಪೂಜೆ, ಸೆ.30ರಂದು ಶ್ರೀ ಸ್ಕಂದಮಾತಾ ದೇವಿಗೆ ಅಭಿಷೇಕ, ಅ.1ರಂದು ಶ್ರೀ ಕಾತ್ಯಾಯಿನೀ ದೇವಿಗೆ ವಿಶೇಷ ಪೂಜೆ, ಅ.2ರಂದು ಶ್ರೀ ಕಾಲರಾತ್ರಿ ದೇವಿಗೆ ಅಭಿಷೇಕ, ಅ.3ರಂದು ಶ್ರೀ ಮಹಾಗೌರಿ ದೇವಿಗೆ ಅಭಿಷೇಕ, ಬೆಳಗ್ಗೆ 10ಗಂಟೆಗೆ ದುರ್ಗಾ ಹೋಮ, ಅ.4ರಂದು ಶ್ರೀ ಸಿದ್ಧಿದಾತ್ರಿ ದೇವಿಗೆ ಅಭಿಷೇಕ ಹಾಗೂ ಪೂಜೆ, ಅ.5ರಂದು ವಿಜಯದಶಮಿ ಆಚರಣೆ ನಡೆಯಲಿದೆ.

ಶ್ರೀ ಕಾಳಿಕಾಂಬ ದೇವಸ್ಥಾನ: ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಸೆ.26ರಂದು ಬೆಳಗ್ಗೆ 8ಗಂಟೆಗೆ ಶ್ರೀ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಘಟಸ್ಥಾಪನೆ, ದೀಪಾರಾಧನೆ ಜರುಗುವುದು. ಪ್ರತಿದಿನ ಸಂಜೆ 7ಗಂಟೆಗೆ ಗೋಪಾಲಕೃಷ್ಣ ಆಚಾರ್ಯ ಮನ್ವಾಚಾರ್ಯ ಅವರಿಂದ ಶ್ರೀದೇವಿ ಪುರಾಣ ಪ್ರವಚನ ನಡೆಯಲಿದೆ. ಪ್ರತಿದಿನ ಶ್ರೀ ಗಾಯತ್ರಿ ಭಜನಾ ಮಂಡಳಿ ಮಹಿಳೆಯಿಂದ ಶ್ರೀದೇವಿಗೆ ಕುಂಕುಮಾರ್ಚನೆ, ಶ್ರೀಶಕ್ತಿ ಮಹಿಳಾ ಮಂಡಳದ ವತಿಯಿಂದ 3ರಿಂದ 6ವರ್ಷದ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಮಹಿಳೆಯರಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

Advertisement

ನವರಾತ್ರಿ-ವಿಶೇಷ ಪೂಜೆ

ನಗರದ ಬಹುತೇಕ ಶಕ್ತಿದೇವತೆಗಳ ದೇವಸ್ಥಾನಗಳಲ್ಲಿ ಸೆ.26ರಂದು ಸಂಜೆ ದೇವಿಗೆ ಅಲಂಕಾರ ಸೇವೆ ಹಾಗೂ ಘಟಸ್ಥಾಪನೆ, ಸೆ.30ರಂದು ಲಲಿತ ಪಂಚಮಿ ಆಚರಣೆ, ಅ.3ರಂದು ದುರ್ಗಾಷ್ಟಮಿ, ಅ.4ರಂದು ಮಹಾನವಮಿ ನಿಮಿತ್ತ ಆಯುಧ ಪೂಜೆ ನೆರವೇರಿಸಲಾಗುತ್ತದೆ. ಅ.5ರಂದು ವಿಜಯದಶಮಿ ಪ್ರಯುಕ್ತ ತಾಯಿ ಜಗನ್ಮಾತೆಗೆ ವಿಶೇಷ ಪೂಜೆ ಹಾಗೂ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ನಗರದ ನವದುರ್ಗೆ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ತ ಶರನ್ನವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಸೆ.26ರಿಂದ ಅ.5ರವರೆಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಕೊರೊನಾ ಸೋಂಕು ಮರೆಯಾಗಿದ್ದರಿಂದ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.  –ಗೌರೀಶ ಭಟ್‌, ನವದುರ್ಗೆ ದೇವಸ್ಥಾನದ ಪ್ರಧಾನ ಅರ್ಚಕರು

-ವೀರೇಶ ಮಡ್ಲೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next