Advertisement

ಗಣೇಶೋತ್ಸವ ಹೆಸರಲ್ಲಿ ಚುನಾವಣೆಗೆ ಸಿದ್ಧತೆ

01:10 PM Sep 06, 2022 | Team Udayavani |

ಚನ್ನಪಟ್ಟಣ: ವಿಧಾನಸಭೆ ಚುನಾವಣೆಗೆ 7-8 ತಿಂಗಳು ಬಾಕಿ ಇರುವಾಗಲೇ ಮತ ಬೇಟೆ ಚುರುಕು ಗೊಳಿಸಿರುವ ಆಕಾಂಕ್ಷಿಗಳು, ಗಣಪನ ಹಬ್ಬದಲ್ಲಿ ಯುವ ಸಮೂಹವನ್ನು ಸೆಳೆದುಕೊಳ್ಳಲು ವಿವಿಧ ರೀತಿಯ ಕಸರತ್ತುಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿದೆ. ಕೋವಿಡ್‌ ಮುಗಿದ ಬಳಿಕ ಸಡಿಲಗೊಂಡಿದ್ದ ಗಣೇಶ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಿ ದರೆ, ತಾಲೂಕಿನ ರಾಜಕಾರಣಿಗಳು ಮಾತ್ರ ಭವಿಷ್ಯದ ವಿಧಾನಸಭೆ ಚುನಾವಣೆಯನ್ನು ದೃಷ್ಟಿಕೋನದಲ್ಲಿಟ್ಟು ಕೊಂಡು ಗಣೇಶೋತ್ಸವಕ್ಕೆ ರಂಗು ನೀಡುತ್ತಿದ್ದಾರೆ.

Advertisement

ಯುವಕರ ತಂಡಗಳ ಓಲೈಕೆ: ಗಣೇಶೋತ್ಸವವು ತಾಲೂಕಿನಲ್ಲಿ ರಾಜಕೀಯ ಕಾವು ಮತ್ತಷ್ಟು ಹರಡಲಿದೆ ಎನ್ನುವುದನ್ನು ಮನಗಂಡ ರಾಜಕೀಯ ಪಕ್ಷಗಳಾದ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಯುವಕರ ತಂಡಗಳ ಓಲೈಕೆಗೆ ಮುಂದಾಗಿದ್ದು, ಮತ ಬ್ಯಾಂಕ್‌ ಹಾಗೂ ತಮ್ಮ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುವ ಸಲುವಾಗಿಯೇ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಯುವಕರನ್ನು ಸೆಳೆಯಲು ಈಗಿನಿಂದಲೇ ತಮ್ಮ ಕೆಲಸ ಶುರು ಮಾಡಿದ್ದಾರೆ. ಜನಸಂಖ್ಯೆಯಲ್ಲಿ ಬಹು ಪಾಲು ಮತ್ತು ಮತದಾನದ ಹಕ್ಕು ಪಡೆದಿರುವ ದೊಡ್ಡ ಮಟ್ಟದ ಸಮೂಹವೆನಿಸಿಕೊಂಡ ಯುವ ಜನರನ್ನು ಚುನಾವಣೆಯಲ್ಲಿ ಬಳಸಿಕೊಳ್ಳಲು, ತಮ್ಮ ಪರವಾಗಿ ಮತ ಚಲಾಯಿಸುವಂತೆ ಮಾಡಿಕೊಳ್ಳಲು ಮುಖಂ ಡರು ಹಬ್ಬದ ಆಚರಣೆಗೆ ಬೇಕಾದ ಸಿದ್ಧತೆಗಳು ಮತ್ತು ಯಾವುದೇ ತೊಂದರೆಯಾಗದಂತೆ ಅವರಿಗೆ ಸಹಕಾರ ನೀಡುತ್ತಿರುವುದು ಗೋಚರಿಸಿದೆ.

ಉಚಿತ ಗಣೇಶೋತ್ಸವ: ಗಣೇಶನ ಹಬ್ಬವೆಂದರೆ ಜನರ ಬಳಿ ಹಣ ಸಂಗ್ರಹಿಸಿ, ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ವಾಡಿಕೆಯಾಗಿತ್ತು. ಆದರೆ, ಕಳೆದ ಹಲವು ವರ್ಷಗಳಿಂದ ಜೆಡಿಎಸ್‌ ಮುಖಂಡ ಎಚ್‌.ಸಿ.ಜಯಮುತ್ತು ಪ್ರತಿ ವರ್ಷ ಉಚಿತ ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದರು. ಆದರೀಗ ಗಣೇಶ ಹಬ್ಬದ ಲಾಭ ಪಡೆದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕೂಡ ಗಣೇಶ ಮೂರ್ತಿಗಳನ್ನು ವಿತರಣೆ ಮಾಡುವ ಮೂಲಕ ಜೆಡಿಎಸ್‌ ಮುಖಂಡ ಜಯಮುತ್ತು ಅವರಿಗೆ ಸೆಡ್ಡು ಹೊಡೆದರು. ತಮ್ಮ ಹುಟ್ಟುಹಬ್ಬದ ಸಮೀಪವೇ ಎದುರಾದ ಗಣೇಶೋ ತ್ಸವ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸು ವಂತಹ ವಾತಾವರಣ ನಿರ್ಮಿಸಿ, ಉಚಿತ ಗಣೇಶ ಮುರ್ತಿಯೊಂದಿಗೆ ಪೂಜಾ ಸಾಮಗ್ರಿ ಕಿಟ್‌, ಕೇಸರಿ ಶಾಲು-ಬಾವುಟ ನೀಡುವ ಮೂಲಕ ತಾಲೂಕಿನ ಹಲವು ಭಾಗಗಳನ್ನು ಕೇಸರಿಮಯಗೊಳಿಸುತ್ತಿದ್ದಾರೆ.

ಆರ್ಕೆಸ್ಟ್ರಾ ಮತ್ತು ದೇಣಿಗೆ: ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಯೋಗೇಶ್ವರ್‌ ಅವರು ಕೆಲವು ಪ್ರಮುಖ ಗ್ರಾಮಗಳಲ್ಲಿ ಆರ್ಕೆಸ್ಟ್ರಾ ಆಯೋಜನೆ ಮೂಲಕ ಯುವಕರ ತಂಡಗಳನ್ನು ಆಕರ್ಷಿ ಸುತ್ತಿದ್ದಾರೆ. ಕೆಲವು ಗ್ರಾಮಗಳನ್ನು ಕೇಂದ್ರಿಕರಿಸು ತ್ತಿರುವ ಯೋಗೇ ಶ್ವರ್‌, ತಮ್ಮ ಪರವಾಗಿರುವ ಮುಖಂಡರು ಕರೆತರುವ ಯುವಕರ ತಂಡಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಕ್ಕಿಂತ ನಾನೇನು ಕಡಿಮೆ ಇಲ್ಲ ಎನ್ನುವುದನ್ನು ಅರಿ ತಿರುವ ಕಾಂಗ್ರೆಸ್‌ ಅಭ್ಯರ್ಥಿ ಎಂದೇ ಬಿಂಬಿತವಾಗು ತ್ತಿರುವ ಪಂಚಮಿ ಪ್ರಸನ್ನಗೌಡ ಅವರು ತಮ್ಮ ಬಳಿ ಬರುವ ಯುವಕರ ತಂಡಗಳಿಗೆ ಸಹಾಯಧನ ವಿತರಣೆ ಮಾಡುತ್ತಿದ್ದಾರೆ. ಯುವಕರನ್ನು ತಮ್ಮ ಸೆಳೆಯುವ ತಂತ್ರದ ಭಾಗವಾಗಿ ಗಣೇಶ ವಿಸರ್ಜನೆ ವೇಳೆ ಯುವಕರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.

ಗ್ರಾಮಗಳಲ್ಲಿ ಒಗ್ಗಟ್ಟು ಪ್ರದರ್ಶನ : ಚನ್ನಪಟ್ಟಣ ನಗರದಲ್ಲಿಯೇ ನೂರಾರು ಕಡೆಗಳಲ್ಲಿ ಬೀದಿ, ಕೇರಿಗಳು ಮತ್ತಿತರ ಕಡೆಗಳಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ವಿಘ್ನ ನಿವಾರಕನ ಆರಾಧನೆ ಮಾಡಲಾಗಿದೆ. ಕೆಲವರಂತೂ ಅದ್ದೂರಿಯಾಗಿ ಗಣೇಶ ವಿಸರ್ಜನೆ ಮಾಡಿದ್ದಾರೆ. ಕೆಲ ಗಣೇಶೋತ್ಸವ ಸಮಿತಿಗಳಂತೂ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸುತ್ತಾ, ತಮ್ಮ ಭಾಗದಲ್ಲಿ ತಾವು ಪ್ರಭಾವಿಗಳು ಎನ್ನುವುದನ್ನು ನಿರೂಪಿಸುವಲ್ಲಿ ಬೆವರು ಸುರಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಜೋಶ್‌ ನೊಂದಿಗೆ ಜೋರಾಗಿ ಗಣೇಶನ ಪ್ರತಿಷ್ಠಾಪಿಸಿ ವಿಸರ್ಜಿಸಿ, ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಿ, ಗ್ರಾಮದಲ್ಲಿ ತಮ್ಮ ಪರವಾದ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಯುವಕರ ತಂಡಗಳಿಗೆ ಉಚಿತ ಗಣೇಶ ಮೂರ್ತಿಗಳು, ಹಣ ದೇಣಿಗೆ ನೀಡಿದ್ದರ ಜತೆಗೆ, ಆರ್ಕೆಸ್ಟ್ರಾದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಇದರ ಸಂಭ್ರಮವನ್ನು ತಮ್ಮ ಪರವಾಗಿ ಮಾಡಿಕೊಳ್ಳುವ ಚಿಂತನೆಯಲ್ಲಿದ್ದಾರೆ.

Advertisement

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next