Advertisement

ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶಕ್ಕೆ ಭರದ ಸಿದ್ಧತೆ

02:32 PM Nov 17, 2022 | Team Udayavani |

ಬಳ್ಳಾರಿ: ಮುಂಬರುವ ಚುನಾವಣೆ ಗುರಿಯಾಗಿಸಿಕೊಂಡು ನಗರದಲ್ಲಿ ನ.20ರಂದು ನಡೆಯಲಿರುವ ಬಿಜೆಪಿ ಎಸ್‌ಟಿ ಮೋರ್ಚಾ “ವಿರಾಟ್‌ ಸಮಾವೇಶಕ್ಕೆ’ ದಿನಗಣನೆ ಆರಂಭವಾಗಿದ್ದು, ಭರದ ಸಿದ್ಧತೆ ನಡೆಯುತ್ತಿದೆ.

Advertisement

ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ರಾಜ್ಯಮಟ್ಟದ ಕಾರ್ಯಕಾರಿಣಿ ನಡೆಸುವ ಮೂಲಕ ಈಗಾಗಲೇ ಚುನಾವಣೆ ರಣಕಹಳೆ ಮೊಳಗಿಸಿರುವ ಬಿಜೆಪಿ, ಇದೀಗ ಬಳ್ಳಾರಿ ನಗರದಲ್ಲಿ ಎಸ್‌ಟಿ ಮೋರ್ಚಾ ರಾಜ್ಯಮಟ್ಟದ “ವಿರಾಟ್‌ ಸಮಾವೇಶ’ ಆಯೋಜಿಸುವ ಮೂಲಕ ಮತ್ತೂಮ್ಮೆ ಚುನಾವಣೆಗೆ “ರಣಕಹಳೆ’ ಮೊಳಗಿಸಲು ಸಿದ್ಧತೆ ನಡೆಸಿದೆ.

ಇದಕ್ಕಾಗಿ ನಗರದ ಟಿಬಿ ಸ್ಯಾನಿಟೋರಿಯಂ ಪಕ್ಕದ ವಿಶಾಲವಾದ ಪ್ರದೇಶದಲ್ಲಿ ಕಳೆದ 2-3 ವಾರಗಳಿಂದ ಬೃಹತ್‌ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ನಗರದ ರಸ್ತೆಬದಿ, ರಸ್ತೆ ವಿಭಜಕಗಳಲ್ಲಿ ಬಿಜೆಪಿ ಬಾವುಟಗಳನ್ನು ಅಳವಡಿಸುವ, ಪ್ರಮುಖ ವೃತ್ತಗಳನ್ನು ಸಿಂಗಾರಗೊಳಿಸುವ ಕಾರ್ಯ ನಡೆಯುತ್ತಿದ್ದು, ಗಣಿನಾಡು ಬಳ್ಳಾರಿ ನಗರವನ್ನು “ಕೇಸರಿ ನಾಡಾಗಿ’ ಪರಿವರ್ತಿಸಲಾಗಿದೆ.

ಮೂರು ವೇದಿಕೆ ನಿರ್ಮಾಣ: ನಗರದ ಟಿಬಿ ಸ್ಯಾನಿಟೋರಿಯಂ ಪಕ್ಕದ ವಿಶಾಲವಾದ 136 ಎಕರೆ ಪ್ರದೇಶದಲ್ಲಿ 3.20 ಲಕ್ಷ ಚದರ ಅಡಿಯಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗುತ್ತಿದೆ. 40/120 ಚದರ ಅಡಿಯಲ್ಲಿ ಎರಡು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 40/60 ವೇದಿಕೆಯಲ್ಲಿ ರಾಷ್ಟ್ರೀಯ ನಾಯಕರು ಸೇರಿ 20 ಗಣ್ಯರಿಗೆ ಮಾತ್ರ ಅವಕಾಶವಿದೆ. ಮತ್ತೂಂದು ವೇದಿಕೆಯಲ್ಲಿ ರಾಜ್ಯ ನಾಯಕರು, ಶಾಸಕರು, ಸಂಸದರಿಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಮತ್ತೂಂದು ಚಿಕ್ಕ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಕಾರ್ಯಕರ್ತರು, ಅಭಿಮಾನಿಗಳು ಕೂಡಲು 400/800 ಚದರ ಅಡಿ ಯಷ್ಟು ಪೆಂಡಾಲ್‌ ನಿರ್ಮಿಸಲಾಗಿದೆ. ಮಳೆ ಬಂದರೂ ತೊಂದರೆಯಾಗದಂತೆ ಜಿಂಕ್‌ಶೀಟ್‌ ಬಳಸಲಾಗುತ್ತಿದೆ. ಸುಮಾರು 1.25 ಲಕ್ಷ ಕುರ್ಚಿಗಳನ್ನು ಹಾಕಲಾಗುತ್ತದೆ. ಗದಗ ಮೂಲದ ಬಾಲಾಜಿ ಶಾಮಿಯಾನದ ಸುಮಾರು 150ಕ್ಕೂ ಹೆಚ್ಚು ಕಾರ್ಮಿಕರು ದಿನವಿಡೀ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಧ್ಯಮ ಸಹ ಸಂಚಾಲಕ ರಾಜೀವ್‌ ತೊಗರಿ ವಿವರಿಸಿದ್ದಾರೆ.

90 ಎಲ್‌ಇಡಿ ಪರದೆ: ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಬರುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ ಶಾಸಕರು, ಸಚಿವರು, ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರು ಆಗಮಿಸಲಿದ್ದಾರೆ. ಪೆಂಡಾಲ್‌ ಒಳಗೆ 60, ಹೊರಗೆ 30 ಸೇರಿ ಒಟ್ಟು 90 ಎಲ್‌ಇಡಿ ಪರದೆಗಳನ್ನು ವಿವಿಧೆಡೆ ಅಳವಡಿಸಲಾಗುತ್ತಿದೆ.

Advertisement

ಊಟಕ್ಕೆ ಪ್ರತ್ಯೇಕ ವ್ಯವಸ್ಥೆ: ವಿರಾಟ್‌ ಸಮಾವೇಶಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು ಹತ್ತು ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ. ಇವರಿಗೆಲ್ಲ ಊಟ, ಉಪಾಹಾರಕ್ಕೆ ತೊಂದರೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಒಂದು ಲಕ್ಷ ಚದರ ಅಡಿಯಲ್ಲಿ ಪೆಂಡಾಲ್‌ ನಿರ್ಮಿಸಲಾಗಿದೆ. ಇದರಲ್ಲಿ 200 ಆಹಾರ ವಿತರಣಾ ಕೌಂಟರ್‌, ಕೈ ತೊಳೆಯಲು 400 ನಳ, 200 ಶೌಚಗೃಹಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಉಪಹಾರದ ಜೊತೆಗೆ ಮಧ್ಯಾಹ್ನ ಪಾಯಸ (ಹುಗ್ಗಿ), ವೆಜಿಟೇಬಲ್‌ ಪಲಾವ್‌, ಮೊಸರು ಬಜ್ಜಿ, ಮೊಸರನ್ನ, ಅರ್ಧ ಲೀಟರ್‌ ನೀರಿನ ಬಾಟಲ್‌ನ್ನು ನೀಡಲಾಗುತ್ತದೆ. ಇದರೊಂದಿಗೆ ಎಲ್ಲರಿಗೂ ಮಜ್ಜಿಗೆ ಸಹ ಸರಬರಾಜು ಮಾಡಲಾಗುತ್ತಿದೆ. ಆಗಮಿಸಿದವರಿಗೆ ನೀಡಲು ಒಟ್ಟು ಆರು ಲಕ್ಷ ನೀರಿನ ಬಾಟಲ್‌ಗ‌ಳ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ತಿಳಿಸಿದ್ದಾರೆ.

41 ತಂಡಗಳ ರಚನೆ: ವಿರಾಟ್‌ ಸಮಾವೇಶ ಯಶಸ್ವಿ ಗೊಳಿಸುವ ಸಲುವಾಗಿ ಮೈದಾನ, ಊಟದ ವ್ಯವಸ್ಥೆ, ಪೆಂಡಾಲ್‌ನಲ್ಲಿ ಜನರನ್ನು ಕೂಡಿಸುವುದು, ನಗರ ಸೌಂದರ್ಯ, ಬೇರೆ ಊರುಗಳಿಂದ ಬಂದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸಚಿವ ಬಿ. ಶ್ರೀರಾಮುಲು, ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಸೇರಿದಂತೆ ಮುಖಂಡರು, ಕಾರ್ಯಕರ್ತರುಳ್ಳ 41 ತಂಡಗಳನ್ನು ರಚನೆ ಮಾಡಲಾಗಿದೆ. ಸಮಾವೇಶದ ಮುನ್ನಾದಿನ ಬಂದವರಿಗೆ ರಾತ್ರಿ ಉಳಿದುಕೊಳ್ಳಲು ನಗರದ 21 ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ●ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next