Advertisement
ಮಹಿಳೆಯರಿಗೆ ಬೇಸಿಗೆಯ ಬಿಸಿಲೆಂದರೆ ತಟ್ಟನೆ ನೆನಪಾಗೋದು ಸಂಡಿಗೆ, ಹಪ್ಪಳ, ಶ್ಯಾವಿಗೆ, ಉಪ್ಪಿನಕಾಯಿ ಹೀಗೆ ಇಡೀ ವರ್ಷಕ್ಕಾಗುವಷ್ಟು ಈ ಪದಾರ್ಥಗಳ ತಯಾರಿಗೆ ನಾರಿಯರ ಪ್ರಥಮ ಆದ್ಯತೆ. ಆದರೆ ಪಟ್ಟಣ ಪ್ರದೇಶಗಳಲ್ಲಿ ಇವುಗಳ ತಯಾರಿಕೆ ಕ್ಷೀಣಿಸುತ್ತಿದ್ದು, ಇಂದಿನ ರೇಡಿಮೇಡ್ ಫುಡ್ ಐಟಮ್ಸ್‌ಗಳ ಜಮಾನಾದಲ್ಲಿ ದೇಸಿ ಸೊಗಡು ಕಣ್ಮರೆಯಾಗುತ್ತಿದೆ.
Related Articles
Advertisement
ಅಕ್ಕಿ ಹಿಟ್ಟಿನ ಸಂಡಿಗೆ, ಸಾಬುದಾನಿ ಸಂಡಿಗೆ, ಬೂದ ಕುಂಬಳಕಾಯಿ ಸಂಡಿಗೆ ಸೇರಿದಂತೆ ಇತರ ಸಾಮಗ್ರಿಗಳನ್ನು ಬಳಸಿ ರಂಗು ರಂಗಿನ ಸಂಡಿಗೆ ಮಾಡುವಲ್ಲಿ ಮಹಿಳೆಯರು ತಲ್ಲೀನರಾಗಿದ್ದಾರೆ. ಸಂಡಿಗೆ ಮಾಡುವುದರಲ್ಲಿಯೂ ವೈಶಿಷ್ಟ್ಯತೆ ಇದೆ.
ಮುಖ್ಯವಾಗಿ ಅಕ್ಕಿ ಹಿಟ್ಟಿನ ಸಂಡಿಗೆ ಮಾಡುವಾಗ ಅದನ್ನು ಬಿಡಿ ಇರುವಾಗಲೇ ತಮಗೆ ಬೇಕಾದ ಬಣ್ಣ ಬೆರೆಸಿ ನಾನಾ ನಮೂನೆ ಆಕಾರದಲ್ಲಿ ಮಾಳಿಗೆ ಮೇಲೆ ಪ್ಲಾಸ್ಟಿಕ್ ಮೇಲೆ ಬಿಸಿಲಿಗೆ ಹಾಕುತ್ತಾರೆ.
ಆಗ ಬಿರುಬಿಸಿಲಿನಲ್ಲಿಯೂ ಮಕ್ಕಳು ಮಹಿಳೆಯರಿಗೆ ಸಹಾಯ ಮಾಡುವುದರ ಜತೆ ತಾವೂ ಸಂತಸ ಪಡುತ್ತಾರೆ. ಸಂಜೆ ಹೊತ್ತಿಗೆ ಒಣಗಿದ ಬಳಿಕ ಡಬ್ಬದಲ್ಲಿ ಹಾಕಿ ವರ್ಷ ಪೂರ್ತಿ ಸಂಡಿಗೆ ಬಳಕೆ ಮಾಡುತ್ತಾರೆ. ಇದನ್ನು ಈಗ ಕೆಲ ಮನೆಯ ಮಹಿಳೆಯರು ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನೂ ಹಲವಾರು ಮಹಿಳೆಯರು ಇಷ್ಟೆಲ್ಲಾ ಜಂಜಾಟವೇ ಬೇಡವೆಂದು ಆಧುನಿಕ ಪ್ರಾಪಂಚಿಕ ಜ್ಞಾನದಲ್ಲಿ ಮಗ್ನರಾಗಿದ್ದಾರೆ. ಹೀಗಾದರೆ ಮುಂದಿನ ಪೀಳಿಗೆ ಶಾವಿಗೆ, ಹಪ್ಪಳ, ಸಂಡಿಗೆ ಎಂದರೆ ಏನು? ಎಂದು ಕೇಳಿದರೆ ಆಶ್ಚರ್ಯವಾಗದು.
ಹಪ್ಪಳ, ಸಂಡಿಗೆ ಇನ್ನೂ ಜೀವಂತ: ಹಿಂದೆ ಮಹಿಳೆಯರು, ಅಜ್ಜಿಯಂದಿರು, ಓಣಿಯಲ್ಲಿ ನಾಲ್ಕಾರು ಕುಟುಂಬದ ಮಹಿಳೆಯರೊಂದಿಗೆ ಬೆರೆತು ಮನೆಯ ಮಾಳಿಗೆಯ ಮೇಲೆ ಸಂಡಿಗೆಯ ಅಚ್ಚುಗಳನ್ನು ಹಿಡಿದು ವಿವಿಧ ಆಕಾರಗಳ ರುಚಿಕರವಾದ ಸಂಡಿಗೆ ಹಾಕಿದರೆ, ಆನಂತರ ಮಧ್ಯಾಹ್ನ ಹಾಗೂ ಸಂಜೆಯ ವೇಳೆಯಲ್ಲಿ ಧಾನ್ಯಗಳ ಹಪ್ಪಳಗಳ ಲಟ್ಟಿಸುವಿಕೆಯಲ್ಲಿ ಮಗ್ನರಾಗಿರುತ್ತಿದ್ದರು. ಆದರೀಗ ಆ ಲಟ್ಟಿಸುವಿಕೆಯ ಶಬ್ದ, ಮನೆಗಳ ಮಾಳಿಗೆಯ ಮೇಲೆ ಸಂಡಿಗೆ ಹಾಕುವಿಕೆ ಕಣ್ಮರೆಯಾಗುತ್ತಿದೆ. ಆದಾಗ್ಯೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿದೆ.
ಸಂಡಿಗೆ, ಹಪ್ಪಳ ರೊಕ್ಕಾಕೊಟ್ಟ ಅಂಗಡ್ಯಾಗ ಕೊಂಡು ತಿಂದ್ರ, ಮನ್ಯಾಗ ಮಾಡದಷ್ಟ ರುಚಿ ಬರುದಿಲ್ರೀ. ನಮಗ ಬೇಕಾದಂಗ ನಾನಾ ಆಕಾರದ ಸಂಡಿಗೆಗಳು ಸಿಗುದಿಲ್ಲ. ಹೀಗಾಗಿ ವರ್ಷಕ್ಕೆ ಬೇಕಾಗುವಷ್ಟು ಸಂಡಿಗೆ ಹಪ್ಪಳಗಳು ಮನೆಯ ಅಕ್ಕ ಪಕ್ಕದ ಮಹಿಳೆಯರನ್ನು ಕರಕೊಂಡು ಸಂಡಿಗೆ ಹಾಕ್ತೀವ್ರೀ. . ರೇಣವ್ವ ಹಡಪದ, ಸಂಡಿಗೆ
ತಯಾರಿಸುವವರು. ಡಿ.ಜಿ ಮೋಮಿನ್