Advertisement

ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಇಲಾಖೆಯಿಂದ ಸಿದ್ಧತೆ

12:57 PM May 23, 2023 | Team Udayavani |

ಉಡುಪಿ/ಮಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಂಡು, ಬೇಸಗೆ ರಜೆಯು ಮುಗಿಯುತ್ತಿದೆ. ಮೇ 29ರಿಂದ 2023-24ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದ್ದು, ಇದಕ್ಕೆ ಬೇಕಾದ ಸಿದ್ಧತೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಶಿಕ್ಷಣ ಇಲಾಖೆಯಿಂದ ಮಾಡಿಕೊಳ್ಳಲಾಗುತ್ತಿದೆ.

Advertisement

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಗತಿಗಳು ಆರಂಭದ ದಿನದಿಂದಲೇ ಪಠ್ಯಪುಸಕ್ತ ಹಾಗೂ ಸಮವಸ್ತ್ರ ವಿತರಣೆಗೂ ಬೇಕಾದ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಹಾಗೂ ಸಮವಸ್ತ್ರದ ಬಟ್ಟೆಗಳನ್ನು ಬಿಇಒಗಳ ಮೂಲಕ ತಲುಪಿಸುವ ಕಾರ್ಯವೂ ಆಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ದಿನ ಸಂಭ್ರಮ
ಮೇ 29ರಂದು ಶೈಕ್ಷಣಿಕ ತರಗತಿ ಆರಂಭವಾಗುವುದರಿಂದ ಅಂದು ಪಠ್ಯದ ಚಟುವಟಿಕೆಗಿಂತ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉಡುಪಿ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲೂ ಅಂದು ಮಕ್ಕಳಿಗೆ ಬಿಸಿಯೂಟದ ಜತೆಗೆ ಸಿಹಿ ಹಂಚಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಾಯಸ ಅಥವಾ ಸ್ಥಳೀಯವಾಗಿ ಲಭ್ಯವಾಗುವ ಯಾವುದಾದರು ಒಂದು ಸ್ವೀಟ್‌ ಮಕ್ಕಳಿಗೆ ನೀಡಲಾಗುತ್ತದೆ. ಇದರ ಜತೆಗೆ ಮಕ್ಕಳನ್ನು ವಿನೂತನ ರೀತಿಯಲ್ಲಿ ಶಾಲೆಗೆ ಸ್ವಾಗತಿಸಲು, ಶಾಲೆಯ ಪ್ರವೇಶದ್ವಾರಕ್ಕೆ ತಳಿರು ತೋರಣ ಕಟ್ಟುವ, ರಂಗೋಲಿ ಹಾಕಲು ಬೇಕಾದ ಕ್ರಮ ತೆಗೆದುಕೊಳ್ಳಲು ಇಲಾಖೆ ಯಿಂದ ನಿರ್ದೇಶನ ನೀಡ ಲಾಗಿದೆ.

ಮನೆ ಮನೆ ಭೇಟಿ
ಹರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಎಲ್ಲ ಶಾಲೆಗಳಲ್ಲೂ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಕೆಲವು ಖಾಸಗಿ ಶಾಲೆಗಳು ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಸರಕಾರಿ ಶಾಲೆಯ ಮುಖ್ಯಶಿಕ್ಷಕರು ಸಹಿತವಾಗಿ ಶಿಕ್ಷಕರು ಮೇ 29ರ ಅನಂತರ ತಮ್ಮ ಶಾಲಾ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ, ಎಲ್ಲ ಮಕ್ಕಳು ದಾಖಲಾತಿ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ. ಹಾಗೆಯೇ ಸರಕಾರಿ ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಲಿದ್ದಾರೆ.

ಮಿಂಚಿನ ಸಂಚಾರ
ಶೈಕ್ಷಣಿಕ ತರಗತಿಗಳು ಆರಂಭವಾಗು ತ್ತಿದ್ದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಎಲ್ಲ ಶಾಲೆಗಳಿಗೂ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯ ತಲುಪಿದೆಯೇ ಎಂಬುದನ್ನು ಪರಿಶೀಲಿಸಿ, ವರದಿಯನ್ನು ಇಲಾಖೆಗೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಬೋಧನ ಕೊಠಡಿ, ಶೌಚಾಲಯ, ದಾಸೋಹ ಕೊಠಡಿಗಳ ದುರಸ್ತಿ ಪ್ರಕ್ರಿಯೆ ನಡೆಯುತ್ತಿದೆ.

Advertisement

ಅಧಿಕಾರಿಗಳಿಗೆ ಸೂಚನೆ
ಜಿಲ್ಲೆಯ ಎಷ್ಟು ಶಾಲೆಗಳ ಮಕ್ಕಳು ಕಾಲುಸಂಕದ ಮೂಲಕ ಶಾಲೆಗೆ ಹೋಗುವ ಸ್ಥಿತಿಯಿದೆ ಮತ್ತು ಆ ಕಾಲುಸಂಕಗಳ ಸ್ಥಿತಿಗತಿ ಹೇಗಿದೆ ಎಂಬುದರ ವರದಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೂಲಕ ಜಿ.ಪಂ. ಪಡೆದುಕೊಂಡಿದೆ. ಕಳೆದ ವರ್ಷ ಮಳೆಗಾಲದಲ್ಲಿ ಬೈಂದೂರಿನಲ್ಲಿ ಕಾಲುಸಂಕ ದುರಸ್ತಿಯಾಗದ ಹಿನ್ನೆಲೆಯಲ್ಲಿ ಮಗುವೊಂದು ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿತ್ತು. ಈ ಬಾರಿ ಆ ರೀತಿಯ ಯಾವುದೇ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕ ಕ್ರಮ ವಹಿಸಲು ಜಿಲ್ಲಾಡಳಿತ ಹಾಗೂ ಜಿ.ಪಂ.ನಿಂದಲೂ ಸೂಚನೆ ನೀಡಲಾಗಿದೆ. ಹಾಗೆಯೇ ಬಹುಪಾಲು ಕಾಲುಸಂಕಗಳ ದುರಸ್ತಿಯೂ ಆಗಿದೆ ಎಂದು ಉಡುಪಿ ಜಿ.ಪಂ. ಸಿಇಒ ಪ್ರಸನ್ನ ಎಚ್‌. ತಿಳಿಸಿದ್ದಾರೆ. ವಿದ್ಯಾರ್ಥಿಗಳು ಕ್ಷೇಮವಾಗಿ ಶಾಲೆಗೆ ಹೋಗಿ ಬರಲು ಪೂರಕವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ದ.ಕ. ಜಿ.ಪಂ. ಸಿಇಒ ಡಾ| ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2023-24ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಬಿಇಒಗಳ ಸಭೆಯನ್ನು ಕರೆಯಲಾಗಿದೆ. ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ.
– ಗಣಪತಿ, ಡಿಡಿಪಿಐ, ಉಡುಪಿ
ದಯಾನಂದ ನಾಯಕ್‌, ಡಿಡಿಪಿಐ, ದ.ಕ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next