ಕೆರೂರ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಬಿಳಿಜೋಳ, ಕಡಲೆ ಬೆಳೆಗಳು ನೆಲಕಚ್ಚಿದ್ದರೆ, ರಾಶಿಯಾಗಿ ಗೂಡುಗಟ್ಟಿದ್ದ ಸಜ್ಜೆ, ಗೋವಿನಜೋಳ ತೆನೆಗಳು ಮಳೆ ನೀರಲ್ಲಿ ತೊಯ್ದು ಹೋಗಿವೆ.
ಏಕಾಏಕಿ ಬಿರುಸಿನಿಂದ ಬಿದ್ದ ಮಳೆಗೆ ಸ್ಥಳೀಯ ನಾಗರಿಕರು ಸೇರಿದಂತೆ ಅನೇಕ ಕೃಷಿಕರು ಕಂಗಾಲಾಗಿ ಹೋದರು. ಮುಂಗಾರಿನ ಅಧಿಕ ಮಳೆಯಿಂದ ಹೆಚ್ಚಿನ ತೇವಾಂಶ ಇದ್ದ ಕಾರಣ ಹುಲುಸಾಗಿ ಬೆಳೆಯುತ್ತಿದ್ದ ಬಿಳಿಜೋಳ ತೆನೆಗಟ್ಟುತ್ತಿದ್ದರೆ, ಕಡಲೆ ಕಾಯಿ ಬಿಡುವ ಹಂತದಲ್ಲಿ ಈ ಮಳೆ ಫಸಲಿಗೆ ಹಾನಿಯುಂಟು ಮಾಡಿತು. ಬಿಳಿಜೋಳದ ಸುಂಕು ಬಿರುಸಿನ ಮಳೆಗೆ ತೆರವಾದ ಕಾರಣ ತೆನೆಗಳಲ್ಲಿ ಸರಿಯಾಗಿ ಕಾಳುಗಟ್ಟುವುದಿಲ್ಲ.ಬೆಳೆಗಳು ಸಹ ನೆಲಕಚ್ಚಿವೆ.
ಸಾವಿರಾರು ಖರ್ಚು ವ್ಯಯಿಸಿ ಉತ್ತಿ, ಬಿತ್ತಿದ ಬೆಳೆಗಳಲ್ಲಿ ಫಸಲು ಚೆನ್ನಾಗಿ ಬರುವುದಿಲ್ಲ ಎಂದು ಕೃಷಿಕ ಶಂಕ್ರಪ್ಪ ಆತಂಕ ತೋಡಿಕೊಂಡರು. ಮುಂಗಾರು ಹಂಗಾಮಿನಲ್ಲಿ ಬೆಳೆದ ಗೋವಿನಜೋಳ ಮತ್ತು ಹೆಚ್ಚಿನ ಪ್ರಮಾಣದ ಸಜ್ಜೆ ಬೆಳೆಗಳ ನ್ನು ರೈತರು ರಾಶಿ ಮಾಡಿ ಗೂಡು ಹಾಕಿದ್ದರು. ಆದರೆ, ಅಕಾಲಿಕವಾಗಿ ಸುರಿದ ಮಳೆಯಲ್ಲಿ ರಕ್ಷಣೆ ಇಲ್ಲದೇ ಹಲವಾರು ರೈತರ ಗೂಡು ಹಾಗೂ ಗೋವಿನಜೋಳ ತೆನೆಗಳು ಮಳೆಯಲ್ಲಿ ನೆನೆದು ಹೋಗಿದ್ದು ಹಾನಿಗೊಳ್ಳುವ ಹಂತದಲ್ಲಿವೆ.
ಇದನ್ನೂ ಓದಿ:ಸಂಕ್ರಾಂತಿಗೆ ಕಬ್ಜ ಸರ್‌ಪ್ರೈಸ್ ಗಿಫ್ಟ್
ಕೆಲವರು ಪಾಲಿಥಿನ್ ತಾಡಪಾಲುಗಳಿಂದ ರಾಶಿಯಾದ ತೆನೆಗಳನ್ನು ರಕ್ಷಿಸಿಕೊಂಡಿದ್ದರೆ, ಬಹುತೇಕರು ಮಳೆಯಲ್ಲಿ ಅನ್ಯ ಮಾರ್ಗವಿಲ್ಲದೇ ಹೊಲಗಳಲ್ಲಿನ ಸಜ್ಜೆ ಗೂಡುಗಳು ತೊಯ್ದು ಹೋಗಿವೆ ಎನ್ನುತ್ತಾರೆ ರೈತ ಮಂಜುನಾಥ.
ಶುಕ್ರವಾರದ ಅಕಾಲಿಕ ಮಳೆ ಪಟ್ಟಣದಲ್ಲಿ ಸುಮಾರು 26.04 ಪ್ರಮಾಣ ಸುರಿದಿದೆ ಎಂದು ಮಳೆ ಮಾಪನ ಕೇಂದ್ರ ದೃಢಪಡಿಸಿದ್ದು ಏಕಾಏಕಿ ರಾತ್ರಿ ಸುರಿದ ಮಳೆಯಲ್ಲಿ ಸ್ಥಳೀಯರ ಜನಜೀವನ ಅಸ್ತವ್ಯಸ್ತಗೊಂಡಿತ್ತು.ವಿದ್ಯುತ್ ಇಲ್ಲದೇ ನಾಗರಿಕರು ಕತ್ತಲೆಯಲ್ಲಿ ಪರದಾಡಿದರು.