Advertisement

ಅಕಾಲಿಕ ಮಳೆ: ಸುಗ್ಗಿ ಬೆಳೆ ಕಟಾವಿಗೂ ಅಡ್ಡಿ

10:38 AM Mar 25, 2022 | Team Udayavani |

ಕುಂದಾಪುರ: ವಾಯುಭಾರ ಕುಸಿತದಿಂದಾಗಿ ಕೆಲವು ದಿನಗಳಿಂದ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಆದರೆ ಈ ಅಕಾಲಿಕ ಮಳೆ ಭತ್ತದ ಕೃಷಿಕರನ್ನು ಕಂಗೆಡಿಸಿದೆ. ಕಳೆದ ಮುಂಗಾರಿನಲ್ಲಿ ಕಟಾವಿಗೆ ಅಡ್ಡಿಯಾಗಿದ್ದ ಮಳೆ, ಈಗ ಸುಗ್ಗಿ ಬೆಳೆಯ ಕಟಾವಿಗೂ ತೊಡಕಾಗಿ ಪರಿಣಮಿಸಿದೆ.

Advertisement

ಗುರುವಾರ ಬೆಳಗ್ಗಿನ ಜಾವ ಸುರಿದ ಭಾರೀ ಮಳೆಯು ಕುಂದಾಪುರದ ಹಲವೆಡೆಗಳಲ್ಲಿ ಕಟಾವಿಗೆ ಬಾಕಿ ಇರುವ ಭತ್ತದ ಕೃಷಿಕರ ನಿದ್ದೆಗೆಡಿಸಿದೆ. ಕುಂದಾಪುರದ ಕಾವ್ರಾಡಿಯ ಮುಂಬಾರು, ಕಂಬಳಗದ್ದೆ, ಸಿದ್ದಾಪುರ, ಹಾಲಾಡಿ, ಹೊಸಂಗಡಿ, ಅಮಾಸೆಬೈಲು, ಮಡಾಮಕ್ಕಿ ಸೇರಿದಂತೆ ಹಲವೆಡೆಗಳಲ್ಲಿ ಕಟಾವು ಕಾರ್ಯ ಬಾಕಿಯಿದೆ.

ಕೆಲವೆಡೆಗಳಲ್ಲಿ ಒಂದೆರಡು ವಾರಗಳ ಮೊದಲೇ ಕಟಾವು ಕಾರ್ಯ ಮುಗಿದಿರುವುದರಿಂದ ಕೆಲವು ರೈತರು ನಿರಾತಂಕವಾಗಿದ್ದಾರೆ. ಇನ್ನು ಕೆಲವೆಡೆಗಳಲ್ಲಿ ಒಂದೆರಡು ದಿನಗಳ ಹಿಂದೆ ಕಟಾವು ಮಾಡಿ, ಬಿಸಿಲಿಗೆ ಪೈರು ಒಣಗಲೆಂದು ಬಿಟ್ಟಿದ್ದು, ಅದು ಮಳೆಗೆ ಸಂಪೂರ್ಣ ಒದ್ದೆಯಾಗಿದೆ. ಮತ್ತೆ ಕೆಲವೆಡೆಗಳಲ್ಲಿ ಕಟಾವಿಗೆ ಬಾಕಿ ಇರುವ ಪೈರು ಗಾಳಿ – ಮಳೆಗೆ ಬಾಗಿ ನಿಂತು ನೀರಲ್ಲಿ ಒದ್ದೆಯಾಗಿದೆ. ಮಳೆ ಕಡಿಮೆಯಾದರೂ ಗದ್ದೆಯಲ್ಲಿ ನೀರು ಇರುವುದರಿಂದ ತತ್‌ಕ್ಷಣಕ್ಕೆ ಕಟಾವು ಯಂತ್ರವನ್ನು ಗದ್ದೆಗೆ ಇಳಿಸುವುದು ಕಷ್ಟ ಅನ್ನುವ ಆತಂಕ ಕೃಷಿಕರದ್ದಾಗಿದೆ.

ನೆಲಗಡಲೆ ಕೃಷಿಕರಿಗೆ ಸಮಸ್ಯೆ

ಕಿರಿಮಂಜೇಶ್ವರ, ಉಪ್ಪುಂದ, ಹೇರಂಜಾಲು, ಕಂಬದಕೋಣೆ, ನಾಗೂರು, ಬೈಂದೂರು ಮತ್ತಿತರ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುವ ನೆಲಗಡಲೆ ಕೃಷಿಕರಿಗೆ ಈ ಅಕಾಲಿಕ ಮಳೆ ಅಡ್ಡಿಪಡಿಸಿದೆ. ನೆಲಗಡಲೆ ಕೊಯ್ಲಿಗೆ ಮಳೆಯಿಂದಾಗಿ ಅಡ್ಡಿಯಾಗಿದ್ದು, ಕೆಲವೆಡೆಗಳಲ್ಲಿ ನೆಲಗಡಲೆ ಕೀಳುವ ಪ್ರಕ್ರಿಯೆ ನಡೆಯುತ್ತಿದ್ದು, ಅದನ್ನು ಗದ್ದೆಯಲ್ಲಿ ಒಣಗಲು ಬಿಡುತ್ತಾರೆ. ಆದರೆ ಮಳೆಯಿಂದಾಗಿ ಒದ್ದೆಯಾಗಿದ್ದು, ಅದನ್ನು ಒಣಗಿಸಲು ಸಹ ಕಷ್ಟವಾಗಿದೆ.

Advertisement

ಕಾತಿ, ಸುಗ್ಗಿಯಲ್ಲೂ ಮಳೆ ಸಮಸ್ಯೆ

ಭತ್ತದ ಪೈರು ಬೆಳೆದು, ಕಟಾವಿಗೆ ಸಮಯವಾಗಿರುವುದರಿಂದ ನಾಳೆ ಕಟಾವು ಮಾಡಬೇಕು ಅಂತ ಅಂದುಕೊಂಡಿದ್ದೇವು. ಕಟಾವು ಯಂತ್ರದವರಿಗೂ ಹೇಳಿದ್ದೆವು. ಆದರೆ ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಜೋರು ಮಳೆಯಾಗಿದ್ದರಿಂದ ಕಟಾವು ಮಾಡಲು ಸಮಸ್ಯೆಯಾಗಿದೆ. ಮುಂಗಾರಿನಲ್ಲಂತೂ ಬೆಳೆದ ಕೃಷಿ ಕೈಗೆ ಸಿಕ್ಕಿರಲಿಲ್ಲ. ಈಗ ಸುಗ್ಗಿ ಬೆಳೆಯೂ ಹೀಗೆ ಆದರೆ ಹೇಗೆ ? – ರಾಜೇಂದ್ರ ಬೆಚ್ಚಳ್ಳಿ, ರೈತ 

Advertisement

Udayavani is now on Telegram. Click here to join our channel and stay updated with the latest news.

Next