Advertisement
ಕೆಲಸ ಬಿಡಬೇಡ ಅಂದಿದ್ದು ಅಮ್ಮನನ್ನ ಗಂಡ ಕವಿಯೆಂದು ಗೊತ್ತಿರಲಿಲ್ಲ…
ತೆರೆದ ಮನಸ್ಸಿದ್ದಾಗ ಬದುಕು ಬಂಗಾರ ಆಗುತ್ತೆ!
ನನ್ನ ತಂದೆ ರೆವಿನ್ಯೂ ಇನ್‌ಸ್ಪೆಕ್ಟರ್ ಆಗಿದ್ದರು. ಇವರು ಎಂ.ಎ. ಮುಗಿದಮೇಲೆ ಕೆಲವು ಕಾಗದ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲು ಬಂದವರು ನನ್ನ ತಂದೆಯವರ ಗಮನ ಸೆಳೆದರು. ಇವರ ತಾಯಿ ನಮ್ಮ ಊರಿನವರಂತೆ. ನಮ್ಮಜ್ಜಿಗೂ ಇವರ ಮನೆಕಡೆಯವರು ಗೊತ್ತಿದ್ದರಂತೆ. ಹೀಗಾಗಿ ಇವರ ತಂದೆ ತಾಯಿಗಳನ್ನು ಕರೆಸಿ ಮಾತನಾಡಿದರು. ಮೇ 27, 1975ರಲ್ಲಿ ನಮ್ಮ ತಾಯಿಯ ಮನೆಯ ಮುಂದೆಯೇ ಮದುವೆ ಆಯ್ತು. ಅಲ್ಲಿಂದ ನಮ್ಮ ದಾಂಪತ್ಯ ಬದುಕಿನ ಪ್ರಯಾಣ ಆರಂಭಗೊಂಡಿತು. ಆ ದಿನಗಳು ಹೇಗಿದ್ದವು?
ನಾನಾಗ ಬಿ.ಎಸ್ಸಿ. ಓದುತ್ತಿದ್ದೆ. ಮದುವೆಯಾದಮೇಲೂ ಇವರು, ನಾನು ಓದು ಮುಂದುವರಿಸುವಂತೆ ನೋಡಿಕೊಂಡರು. ಮಾತು ಕಡಿಮೆ. ಆಗಾಗ ಇಬ್ಬರೂ ಸಿನಿಮಾ ನೋಡುತ್ತಿದ್ದೆವು. ಬಿ.ಎಸ್ಸಿ. ಮುಗಿದ ಮೇಲೆ ಮಾವನ ಮನೆಗೆ ಬಂದೆ. ಆಗ ಇವರು ಸಿದ್ಧಗಂಗಾ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಅತ್ತೆಯ ಮನೆಯಲ್ಲೂ ವಿಪರೀತ ಜನ. ಹಾಗೆಯೇ ಕೆಲಸ ಕೂಡ. ನಾವಿಬ್ಬರೇ ಎಲ್ಲಿಗಾದರೂ ಹೋಗಿ ಬರೋದು ಅಂತೇನೂ ಇರಲಿಲ್ಲ ಆಗ. ನಮ್ಮ ನಿಜವಾದ ಸಂಸಾರ ಶುರುವಾದದ್ದು ಮದುವೆಯಾದ ಎರಡು ವರ್ಷಗಳ ನಂತರ. ಆಗ ಇವರು ತುಮಕೂರಿನಲ್ಲಿ ಮನೆ ಮಾಡಿ ನನ್ನನ್ನು ಕರಕೊಂಡು ಬಂದರು.
Related Articles
ಇಲ್ಲ. ಗೊತ್ತಿರಲಿಲ್ಲ. ತುಮಕೂರಿಗೆ ಬಂದಮೇಲೆಯೇ ಗೊತ್ತಾದದ್ದು. ನಮ್ಮ ಮನೆಯಲ್ಲಿ ಎರಡು ರೂಮ್ ಇದ್ದವು. ಒಂದರಲ್ಲಿ ಸಾಕಷ್ಟು ಪುಸ್ತಕಗಳನ್ನು ಇಟ್ಟುಕೊಂಡಿದ್ದರು. ಅಲ್ಲೇ ತಡರಾತ್ರಿಯವರೆಗೂ ಓದುತ್ತಿರುತ್ತಿದ್ದರು. ಕೆಲವೊಮ್ಮೆ ಬೆಳಗ್ಗೆ ಬೇಗ ಎದ್ದು ಸಮಯದ ಪರಿವೆ ಇಲ್ಲದಂತೆ ಬರೆಯುತ್ತಲೋ, ಓದುತ್ತಲೋ ಕುಳಿತಿರುತ್ತಿದ್ದರು. ಚಿಕ್ಕಂದಿನಿಂದಲೂ ಇವರಿಗೆ ಓದುವುದರಲ್ಲಿ ಆಸಕ್ತಿ ಇತ್ತಂತೆ. ಎಸ್‌ಎಸ್‌ಎಲ್‌ಸಿ ಆದಮೇಲೆ “ಇನ್ನು ಓದಿದ್ದು ಸಾಕು ಮನೆ, ಹೊಲದ ಕೆಲಸ ಮಾಡಿಕೊಂಡಿರು’ ಎನ್ನುತ್ತಿದ್ದರಂತೆ. ಆದರೆ, ಇವರೇ ಸ್ವಂತ ಆಸಕ್ತಿಯಿಂದ ಹಠ ಮಾಡಿ, ಓದಿ ಮುಂದೆ ಬಂದರು.
Advertisement
ನಿಮಗೆ ಓದುವ, ಬರೆಯುವ ಹವ್ಯಾಸ ಇತ್ತೇ?ನಮ್ಮ ಮನೆಯಲ್ಲಿ ಎಲ್ಲರಿಗಿಂತ ನನಗೆ ಪುಸ್ತಕ ಓದುವ ಹುಚ್ಚು ಹೆಚ್ಚು. ಏಳನೆಯ ಕ್ಲಾಸಿನಲ್ಲಿ ಇರುವಾಗಲೇ ತ್ರಿವೇಣಿ, ಕುವೆಂಪು, ತರಾಸು, ಮಾಸ್ತಿ, ಕಾರಂತ, ಭೈರಪ್ಪ ಮುಂತಾದವರ ಪುಸ್ತಕಗಳನ್ನು ಓದುತ್ತಿದ್ದೆ. ಮದುವೆಯಾದ ಮೇಲೆ ಇವರು ಕೆಲವು ಪುಸ್ತಕಗಳನ್ನು ಕೊಟ್ಟು ಓದಿಸುತ್ತಿದ್ದರು. ಆದರೆ ಯಾವತ್ತೂ ಬಲವಂತ ಮಾಡುತ್ತಿರಲಿಲ್ಲ. ಆ ದಿನಗಳನ್ನು ನೆನಪಿಸಿಕೊಂಡರೆ…
ಒಮ್ಮೆ ತುಂಬಾ ತೊಂದರೆ ಆಯ್ತು. ನನಗೆ ಬೆಂಗಳೂರಿಗೆ ವರ್ಗವಾಯ್ತು. ಮಗ ಇನ್ನೂ ಚಿಕ್ಕವನಿದ್ದ. ಇವರಿಗೆ ಚಿಕ್ಕನಾಯಕನಹಳ್ಳಿಗೆ ವರ್ಗವಾಗಿತ್ತು. 20 ವರ್ಷ ಕೆಲಸ ಮಾಡಿದ್ದ ನನಗೆ, ಯಾವ ಕಾರಣಕ್ಕೂ ಕೆಲಸ ಬಿಡುವ ಮನಸ್ಸಿರಲಿಲ್ಲ. ನಮ್ಮ ಅಮ್ಮ ಕೂಡ “ಎಷ್ಟೇ ಕಷ್ಟ ಬಂದರೂ ಕೆಲಸ ಬಿಡಬೇಡ’ ಎಂದಿದ್ದರು. ಇವರ ಅಕ್ಕನ ಮಗನೊಬ್ಬ ಟಿಸಿಎಚ್ ಮಾಡುತ್ತಿದ್ದವನು ಏನೋ ತೊಂದರೆಯಾಗಿ ಫೇಲ್ ಆಗಿದ್ದ. ಅವನನ್ನೇ ಮನೆಗೆ ಕರೆದುಕೊಂಡು ಬಂದೆ. ಬೆಳಗ್ಗೆ 4ಕ್ಕೆ ಎದ್ದು ಅಡುಗೆ, ತಿಂಡಿ ಎಲ್ಲ ರೆಡಿ ಮಾಡಿ, 7.30ಕ್ಕೆ ಟ್ರೆ„ನ್‌ಗೆ ಹೋಗುತ್ತಿದ್ದೆ. ಆಗ ಇವರು ಒಂದು ವಾರ ಮಾತು ಬಿಟ್ಟಿದ್ದರು. ಆದರೂ ಅವರೇ ಸ್ಕೂಟರ್‌ನಲ್ಲಿ ರೈಲ್ವೇ ಸ್ಟೇಷನ್‌ವರೆಗೂ ಕರೆದುಕೊಂಡು ಹೋಗುತ್ತಿದ್ದರು. ಮಗನನ್ನೂ ಸ್ಕೂಲಿಗೆ ಬಿಡುತ್ತಿದ್ದರು. ಸಂಜೆ ಕೂಡ ಸ್ಟೇಷನ್‌ಗೆ ಬಂದು ಕರೆದುಕೊಂಡು ಹೋಗುತ್ತಿದ್ದರು. ಇಷ್ಟಾಗಿಯೂ ಅವರು ಮಾತಾಡುತ್ತಿರಲಿಲ್ಲ. ಹೇಗಿದ್ದರೂ ಇವಳು ಕೆಲಸ ಬಿಡುವುದಿಲ್ಲ ಅಂತ ಗೊತ್ತಾಗಿ ಅವರೇ ಮಾತಾಡಿಸಿಕೊಂಡು ಬಂದರು. ಹೀಗೆ ಒಂದು ವರ್ಷ ಕಷ್ಟವಾಯ್ತು. ಆಮೇಲೆ ನಮ್ಮ ಅತ್ತೆ ಕೆಲವು ದಿನ, ಇವರ ಅಕ್ಕ ಕೆಲವು ದಿನ ನಮ್ಮ ಮನೆಗೆ ಬಂದು ನೋಡಿಕೊಂಡರು. ಮತ್ತೆ ತುಮಕೂರಿಗೆ ವರ್ಗವಾದಾಗ ಸಮಾಧಾನವಾಯಿತು. 2004ರಲ್ಲಿ ಇವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದಾಗ ಬೆಂಗಳೂರಿಗೆ ಬಂದೆವು. ಆಗಲೂ ನಾನು ಕೆಲಸ ಬಿಡಲಿಲ್ಲ. ಇವರ ಚಟುವಟಿಕೆಗಳು ಹೆಚ್ಚಾಯಿತು. ಓಡಾಟ, ಓದು, ಬರಹ ಎಲ್ಲವೂ ಹೆಚ್ಚಾದವು. ಸಾಹಿತಿಗಳನ್ನು ಮದುವೆಯಾದರೆ ಇಂಥವನ್ನೆಲ್ಲ ಸ್ವಲ್ಪ ಸಹಿಸಿಕೊಳ್ಳಬೇಕು (ನಗು) ನಿಮ್ಮ ಬದುಕಿನ ತುಂಬಾ ಮುಖ್ಯವಾದ ಘಟನೆ..?
ಇವರಿಗೆ ಅನೇಕ ಪ್ರಶಸ್ತಿಗಳು ಗೌರವಗಳು ಬಂದಿವೆ. ಆದರೆ 2002ರಲ್ಲಿ ಪುತಿನ ಪ್ರಶಸ್ತಿ ಬಂದಾಗ ತುಂಬಾ ಸಂತೋಷವಾಯ್ತು. ನಾವೆಲ್ಲರೂ ಒಂದು ವೆಹಿಕಲ್ ಮಾಡಿಕೊಂಡು ಬೆಂಗಳೂರಿಗೆ ಬಂದು ಹೋದ ದಿನವನ್ನು ನಾನು ಜೀವನದಲ್ಲಿಯೇ ಮರೆಯುವುದಿಲ್ಲ. ಎಸ್.ಜಿ. ಸಿದ್ಧರಾಮಯ್ಯ ಅವರ ಬಗ್ಗೆ ಹೇಳಿ…
ಅವರ ಸಾಧನೆ ಎಲ್ಲವೂ ಅವರದೇ. ಮನೆಯ ಜವಾಬ್ದಾರಿ ನಾನೇ ನಿರ್ವಹಿಸುತ್ತಿದ್ದರೂ ಅವರು ಎಲ್ಲಿಗೆ ಹೋದರೂ ಫೋನ್ ಮಾಡಿ ಮಾತನಾಡಿಸುತ್ತಾರೆ. ಅವರ ಓದು, ಕೆಲಸಗಳು ಸಮಾಜದಲ್ಲಿ ಅವರಿಗೆ ಗೌರವ ತಂದುಕೊಟ್ಟಿವೆ. ನನಗೆ ಹುಷಾರಿಲ್ಲದಾಗ ಅವರು ಚಡಪಡಿಸಿದ್ದಿದೆ. ಆರೈಕೆ ಮಾಡಿದ್ದಿದೆ. ಕೆಲಸದಿಂದ ಬರುವಾಗ ತಡಾವಾದರೆ ಅವರೇ ಬಿಸಿಬಿಸಿ ಮುದ್ದೆ ಮಾಡಿಡುತ್ತಿದ್ದರು. ಕೆಲವೊಮ್ಮೆ ಅವರೇ ಟೀ ಮಾಡಿಕೊಡುವುದೂ ಉಂಟು. ಯಾವತ್ತೂ ಇದೇ ಬೇಕು ಅದೇ ಬೇಕು ಎಂಬ ಡಿಮ್ಯಾಂಡ್ ಮಾಡುವುದಿಲ್ಲ. ಬಸ್ಸಾರು-ಮುದ್ದೆ ಇದ್ರೆ ಸಾಕು. ಎಣ್ಣೆ ಪದಾರ್ಥ ಕಡಿಮೆ. ಬೇರೆಯವರು ತಿಂದರೆ ರಿಸ್ಟ್ರಿಕ್ಷನ್ ಮಾಡುವುದಿಲ್ಲ. ಅವತ್ತೂ ಅಷ್ಟೆ ಇವತ್ತೂ ಅಷ್ಟೇ. “ನಿನ್ನೊಲುಮೆಯಿಂದಲೇ’ ಪ್ರಶಸ್ತಿ ಬಂದಿದೆ ಎಂದು ಗೊತ್ತಾದಾಗ ಏನನ್ನಿಸಿತು?
ನಾನಾಯಿತು ನನ್ನ ಕೆಲಸವಾಯಿತು ಎಂದುಕೊಂಡಿದ್ದವಳು. ಆಫೀಸಿನಲ್ಲೂ ಅಷ್ಟೇ. ಯಾರೇ ಕಷ್ಟದಲ್ಲಿರಲಿ ಸಮಾಧಾನ ಹೇಳಿ, ನನ್ನ ಕೈಲಾದ ಸಹಾಯ ಮಾಡುತ್ತಿದ್ದೆ. ಯಾರಿಂದಲೂ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ. ಇವರ ಜೊತೆ ನನ್ನನ್ನೂ ಕೆಲವೊಮ್ಮೆ ವೇದಿಕೆಗೆ ಕರೆದು ಸನ್ಮಾನಿಸುತ್ತಿದ್ದರು. ಆದರೆ, ಮೊನ್ನೆ ಅಭಿನವ ರವಿಕುಮಾರ್ ಫೋನ್ ಮಾಡಿ “ನರಹಳ್ಳಿ ಸರ್ ಮಾತನಾಡುತ್ತಾರೆ’ ಎಂದರು. ನನಗೆ ಅಚ್ಚರಿ. ಇವರ ಜೊತೆಗೆ ಮಾತನಾಡಬೇಕಿತ್ತೇನೋ (ಕೆಲವೊಮ್ಮೆ ಇವರು ಮೀಟಿಂಗ್‌ನಲ್ಲಿದ್ದಾಗ ಫೋನ್ ಎತ್ತುವುದಿಲ್ಲ) ತುಂಬಾ ತುರ್ತಿತ್ತೇನೋ ಎಂದುಕೊಂಡು, ನರಹಳ್ಳಿಯವರು ಫೋನ್ ಮಾಡಿದಾಗ “ಸರ್, ನಾನು ಊರಲ್ಲಿದ್ದೀನಿ’ ಎಂದೆ. “ನಿಮ್ಮ ಹತ್ತಿರವೇ ಮಾತನಾಡಬೇಕು. ಕೆ. ಎಸ್. ನರಸಿಂಹಸ್ವಾಮಿ ಅವರ ಪತ್ನಿ ಶ್ರೀಮತಿ ವೆಂಕಮ್ಮ ಅವರ ಹೆಸರಿನಲ್ಲಿ ಕೊಡುವ “ನಿನ್ನೊಲುಮೆಯಿಂದಲೇ’ ಗೌರವವನ್ನು ನಿಮಗೆ ಕೊಡಬೇಕು ಎಂದು ನಮ್ಮ ಟ್ರಸ್ಟ್ ನಿರ್ಧರಿಸಿದೆ. ನೀವು ಒಪ್ಪಿಕೊಳ್ಳಬೇಕು’ ಎಂದರು. ಹೀಗೊಂದು ಪ್ರಶಸ್ತಿ ಇದೆ, ಅದು ನನಗೆ ಸಿಗುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಏನು ಹೇಳಲೂ ಗೊತ್ತಾಗದೆ “ಆಯ್ತು ಸರ್’ ಎಂದೆ. ಹೀಗೆ ನನಗೆ ಮೊದಲ ಗೌರವ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗಿದೆ. ನಮ್ಮ ಮನೆಯವರೂ “ನನಗೆ ಬಂದಿರುವ ಎಲ್ಲ ಪ್ರಶಸ್ತಿಗಳಿಗಿಂತ ಹೀಗೆ ಗೌರವಿಸಿರುವುದು ದೊಡ್ಡ ಗೌರವವಾಗಿ ಕಾಣುತ್ತದೆ’ ಎಂದರು. ಏನೇ ಆಗಲಿ, ಅವರ ಪತ್ನಿಯಾಗಿ ನನಗೆ ದೊರೆತ ಈ ಗೌರವ ಎಲ್ಲಕ್ಕಿಂತ ದೊಡ್ಡದು.
ಅವರೇ ಮಾತಾಡಿಸಿಕೊಂಡು ಬರ್ತಿದ್ರು…
ಒಮ್ಮೊಮ್ಮೆ ಕಷ್ಟವಾಗುತ್ತಿತ್ತು. ದಿನಗಟ್ಟಲೆ ಇವರು ಕಾರ್ಯಕ್ರಮಗಳಿಗೆ ಹೋಗಿಬಿಡುತ್ತಿದ್ದರು. ಆದರೆ, ಅವರ ಕೆಲಸ ಮತ್ತು ಜವಾಬ್ದಾರಿಯ ಬಗ್ಗೆ ಗೊತ್ತಿದ್ದ ನಾನು, ಅದಕ್ಕೆ ಅಡ್ಡಿಪಡಿಸುತ್ತಿರಲಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಜಗಳಗಳೂ ಆಗುತ್ತಿದ್ದವು. ಆಗೆಲ್ಲ ನಾನು ಮೌನವಾಗಿ ಇದ್ದುಬಿಡುತ್ತಿದ್ದೆ. ಅವರಿಗೆ ಮಾತು ಬೇಕಿರುತ್ತಿತ್ತು. ಅವರೇ ಮಾತನಾಡಿಸಿಕೊಂಡು ಬರುತ್ತಿದ್ದರು (ನಗು). ಅಷ್ಟರಲ್ಲೇ ಸರಿಹೋಗಿಬಿಡುತ್ತಿತ್ತು. ಯಾವುದೇ ಕಾರಣಕ್ಕೂ ನನ್ನ ವಿಚಾರಗಳನ್ನು ಅವರ ಮೇಲೆ ಹೇರುತ್ತಿರಲಿಲ್ಲ. ಅವರೂ ಕೂಡ. ನಮ್ಮ ನಮ್ಮ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರುತ್ತಿದ್ದರೂ ಅದನ್ನು ಒಪ್ಪಿಕೊಳ್ಳುತ್ತಿದ್ದೆವು. ಯಾವ ಕಾರಣಕ್ಕೂ ಬಲವಂತ ನಮ್ಮಿಬ್ಬರಲ್ಲೂ ಇಲ್ಲ. ನಾಲ್ಕು ಜನಕ್ಕೆ ನೆರವಾದ ಖುಷಿಯಿದೆ…
ಸರ್ಕಾರಿ ಸೇವೆಯಲ್ಲಿದ್ದಾಗ ಅಪಾರ ಜನ ಸಂಪರ್ಕ ಸಿಕ್ಕಿದ್ದು ನನ್ನ ಭಾಗ್ಯ. ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ನಾನು ಕಚೇರಿ ಅಧೀಕ್ಷಕಿಯಾಗಿದ್ದೆ. ಇಡೀ ಜಿಲ್ಲೆಯ ಕೆಲಸಗಳ ವ್ಯಾಪ್ತಿ ಇರುತ್ತಿತ್ತು. ಪರಿಶಿಷ್ಟ ಜಾತಿ/ಪಂಗಡದ ಜನಗಳಿಗೆ ಮನೆ ಕಟ್ಟಿಕೊಳ್ಳಲು, ಬೋರ್‌ವೆಲ್ ಹಾಕಿಸಿಕೊಳ್ಳಲು ಸಾಲ ಕೊಡಿಸುತ್ತಿದ್ದೆ. ಆಗಾಗ ಅವರ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಅವರೆಲ್ಲರಿಗೂ ಸಹಾಯವಾಗಿ ಮನೆ, ಬದುಕು ಕಟ್ಟಿಕೊಳ್ಳುವಾಗ ನನಗೆ ಸಮಾಧಾನವಾಗುತ್ತಿತ್ತು. ಸುಖ ಸಂಸಾರದ ಗುಟ್ಟೇನು ಗೊತ್ತಾ?
ದಾಂಪತ್ಯದಲ್ಲಿ ಇಬ್ಬರೂ ಹೊಂದಿಕೊಂಡು ಹೋಗಬೇಕು. ನಾನು ಮೇಲು ಇನ್ನೊಬ್ಬರು ಕೀಳು ಎಂಬ ಭಾವನೆ ಬರಲೇಬಾರದು. ಎಲ್ಲವನ್ನೂ ಅನುಸರಿಸಿಕೊಂಡು ಹೋಗಬೇಕು. ತಾಳ್ಮೆ ಸಂಯಮ ವಿವೇಕ ತುಂಬಾ ಮುಖ್ಯ. ಸುಖವಾಗಿರಲು ತಾನೇ ಮದುವೆಯಾಗೋದು? ಹಲವು ಸಲ ಭಿನ್ನಾಭಿಪ್ರಾಯ ಬರುತ್ತದೆ. ಅದನ್ನೇ ಎತ್ತಾಡಬಾರದು. ಜಗಳವಾದರೂ ಅಲ್ಲಿಗಲ್ಲಿಗೆ ಬಿಟ್ಟುಬಿಡಬೇಕು, ಮುಂದುವರಿಸಬಾರದು. ಕೆಲವೊಮ್ಮೆ ಬೇಗ ಸರಿಹೋಗಬಹುದು ಇನ್ನೂ ಕೆಲವೊಮ್ಮೆ ಹೆಚ್ಚು ಸಮಯವಾಗಬಹುದು. ತೆರೆದ ಮನಸ್ಸು ಇದ್ದರೆ ಎಲ್ಲವೂ ಸರಿಹೋಗುತ್ತದೆ. ಡಿ.ಸಿ. ಗೀತಾ