Advertisement

ಪಠ್ಯಪುಸ್ತಕ ದೋಷಗಳ ಬಗ್ಗೆ ಪೂರ್ವಗ್ರಹ ಪೀಡಿತ ಟೀಕೆ

03:45 AM Jul 02, 2017 | |

ಬೆಂಗಳೂರು: ಒಂದರಿಂದ ಹತ್ತನೇ ತರಗತಿಯವರೆಗಿನ ಪರಿಷ್ಕೃತ ಪಠ್ಯಪುಸ್ತಕಗಳ ಬಗ್ಗೆ ಕೆಲವರಿಂದ ಟೀಕೆಗಳು ಬರುತ್ತಿವೆ. ಕೆಲವೇ ಕೆಲವು ಕಾಗುಣಿತ ದೋಷಗಳು ಮತ್ತು ಮೂರ್‍ನಾಲ್ಕು ಮಾಹಿತಿ ದೋಷಗಳನ್ನು ಮಾತ್ರ ಮುಂದು ಮಾಡಿ, ಇಡೀ ಪರಿಷ್ಕರಣ ಪ್ರಕ್ರಿಯೆಯನ್ನೇ ಪೂರ್ವಾಗ್ರಹದಂದ ಟೀಕಿಸಲಾಗುತ್ತಿದೆ ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರಬಹುದಾದ ತಪ್ಪುಗಳಿಗೆ ನಾನು ರಿಯಾಯತಿ  ಕೇಳುವುದಿಲ್ಲ. ಆದರೆ ಕೆಲವು ತಪ್ಪುಗಳನ್ನು ಮುಂದುಮಾಡಿ ಮಕ್ಕಳು ಮತ್ತು ಪೋಷಕರಲ್ಲಿ ಅನಗತ್ಯ ಆತಂಕ ಮೂಡಿಸುತ್ತಿರುವುದರ ಹಿಂದೆ ಶೈಕ್ಷಣಿಕ ಒಳಿತಿನ ಉದ್ದೇಶದ ಬದಲು ಆರೋಪದ ಆವೇಶ ಕಾಣಿಸುತ್ತಿದೆ. ಆರೋಪಿಸುತ್ತಿರುವವರೆಲ್ಲ ಅದೇ ಉದಾಹರಣೆಗಳನ್ನು ನೀಡುತ್ತಿರುವುದರಿಂದ ಅಂಥವರು ಎಲ್ಲ ಪರಿಷ್ಕೃತ ಪಠ್ಯಪುಸ್ತಕಗಳನ್ನು ಗಮನಿಸಿಲ್ಲ ಎಂಬುದು ಸ್ವಷ್ಟ ಎಂದು ಹೇಳಿದ್ದಾರೆ.

ಪರಿಷ್ಕರಣೆಗಾಗಿ ಸರ್ಕಾರದಿಂದ ರಚಿತವಾದ 27 ಸಮಿತಿಗಳ 235 ಕಾರ್ಯಾಗಾರಗಳನ್ನು ನಡೆಸಲಾಗಿದೆ. ಹಿಂದಿನ ಪಠ್ಯಗಳ ಬಗ್ಗೆ ಬಂದ ಸುಮಾರು ಸಾವಿರ ಪುಟದಷ್ಟು ಆಕ್ಷೇಪಗಳನ್ನು ಪರಿಶೀಲಿಸಲಾಗಿದೆ. ಜೊತೆಗೆ ಹಿಂದೆಂದೂ ಮಾಡಿಲ್ಲದ ಪ್ರಜಾಸತಾತ್ಮಕ ಪ್ರಕಿಯೆಗೆ ಚಾಲನೆ ನೀಡಿ ಹೊರಗಿನ 55 ಸಂಸ್ಥೆಗಳ ಜೊತೆ ವಿಚಾರ ವಿನಿಮಯ ಮಾಡಲಾಗಿದೆ. ಅಧ್ಯಾಪಕರ ಸಂಘಗಳ ಜೊತೆ ಚರ್ಚಿಸಲಾಗಿದೆ, ಪ್ರಶ್ನಾವಳಿಯ ಮೂಲಕ ಅಧ್ಯಾಪಕರ ಆಭಿಪ್ರಾಯ ಸಂಗ್ರಹಿಸಲಾಗಿದೆ. ಎಲ್ಲ ಅಂಶಗಳನ್ನು ಆಧರಿಸಿ ಪರಿಷ್ಕರಣೆ ಮಾಡಲಾಗಿದೆ. ಇಷ್ಟಾಗಿಯೂ ಕೆಲವು ಮುದ್ರಣ ದೋಷಗಳು ಉಳಿದಿದ್ದಕ್ಕೆ ವಿಷಾದಿಸುತ್ತೇನೆ. ಕಾಗುಣಿತ ಮತ್ತು ಮಾಹಿತಿ ದೋಷವಿದ್ದರೇ ಪತ್ತೆ ಹಚ್ಚಲು ತಕ್ಷಣವೇ ಸಮಿತಿಗಳನ್ನು ರಚಿಸಿ, ಪ್ರತಿ ಪಾಠವನ್ನು ಓದಿಸಿ ಮಾಹಿತಿ ಪಡೆದು ತಿಧ್ದೋಲೆಯನ್ನು ಈ ವರ್ಷವೇ ಅಲ್ಲ ಪ್ರತಿವರ್ಷ ಕಳಿಸಲಾಗುತ್ತಿದೆ. ಈ ಸಮಿತಿಗಳು ಪುನರ್‌ ಪರಿಷ್ಕರಣೆ  ಮಾಡುವ ತಂಡಗಳಲ್ಲ. ಅವುಗಳ ಕೆಲಸ ಮತ್ತು ಒಂದು ವಾರದ ಅವಧಿ ಮುಗಿದಿದೆ ಎಂದು ತಿಳಿಸಿದ್ದಾರೆ.

ಹೀಗೆ ಅತ್ಯಂತ ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕವಾಗಿ ಪರಿಷ್ಕರಣೆ ಮಾಡಿದ್ದರೂ ಕೆಲವೇ ಕೆಲವು ದೋಷಗಳನ್ನು ಅಗತ್ಯಕ್ಕಿಂತ ದೊಡ್ಡದು ಮಾಡಲಾಗುತ್ತಿದೆ. ನಾವು ಒಟ್ಟು 397 ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದೇವೆ. ಆದರೆ ತಪ್ಪು ತೋರಿಸುತ್ತಿರುವವರು 2-3 ಪುಸ್ತಕಗಳನ್ನು ಮಾತ್ರ ಓದಿದ್ದಾರೆ. ಪರಿಷ್ಕೃತ ಪಠ್ಯಗಳಿಂದ ಮಕ್ಕಳ ಮೇಲೆ ದುಷ್ಪಾರಿಣಾಮ ಆಗುತ್ತದೆ ಎಂಬುದು ಮಿಥ್ಯಾರೋಪ. ಹಿಂದಿನ ಪಠ್ಯದಲ್ಲಿ ಇಲ್ಲದಿದ್ದ ಮಾಸ್ತಿ, ಅಡಿಗ, ಸಿದ್ಧಯ್ಯ ಪುರಾಣಿಕ, ಶಾಂತರಸ, ಕಡಕೋಳ ಮಡಿವಾಳಪ್ಪ ಮುಂತಾದವರ ರಚನೆಗಳನ್ನು ನಾವು ಸೇರಿಸಿದ್ದು ಇದು ದುಷ್ಪಾರಿಣಾಮವುಂಟು ಮಾಡುತ್ತದೆಯೇ? ಬಸವಣ್ಣ, ಸಂಗೊಳ್ಳಿ ರಾಯಣ್ಣ, ಸಾವಿತ್ರಿ ಬಾ ಪುಲೆ ಮುಂತಾದವರ ಜೀವನ ಪರಿಚಯದಿಂದ ದುಷ್ಪಾರಿಣಾಮ ಆಗುತ್ತದೆಯೇ? ಸಮಾಜವಿಜ್ಞಾನದಲ್ಲಿ ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗರರು ಹಾಗೂ ದೇಶದ ಸಮಾಜ ಸುಧಾರಕರ ಬಗ್ಗೆ ಪ್ರತ್ಯೇಕ ಅಧ್ಯಾಯ ಸೇರಿಸಿದ್ದು ತಪ್ಪೇ? ನಾಡಪ್ರಭುಗಳಾದ ಕೆಂಪೇಗೌಡ, ಪಾಳೇಯಗಾರರ ಬಗ್ಗೆ ವಿಶೇಷ ವಿವರ ಕೊಟ್ಟಾರೆ ತಪ್ಪಾಗುವುದೇ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯವಾಗಿ ನಾವು ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ಆಧರಿಸಿ, ಸಂವಿಧಾನದ ಆಶಯಗಳನ್ನು ಅನುಸರಿಸಿ ಪರಿಷ್ಕರಿಸಿದ್ದೇವೆ, ಇಷ್ಟಾಗಿಯೂ ಮುದ್ರಣ ಮತ್ತು ಕಾಗುಣಿತ ದೋಷದ ಉದಾಹರಣೆಗಳಿಗಾಗಿ ವಿಷಾದಿಸುತ್ತಾ, ಸಣ್ಣ ಪುಟ್ಟ ದೋಷಗಳನ್ನು ಭೂತಕಾರದಲ್ಲಿ ತೋರಿಸಿ ಮಕ್ಕಳ ಮೇಲೆ ದುಷ್ಪಾರಿಣಾಮ ಬೀರುವ ಕೆಲಸ ಮಾಡಬೇಡಿ ಎಂದು ಒತ್ತಾಯಿಸುತ್ತೇನೆ. ಇನ್ನು ಸಹಜ ತಾತ್ವಿಕ ಭಿನ್ನಾಭಿಪ್ರಾಯಗಳ ಬಗ್ಗೆ ಆರೋಪ-ಪ್ರತ್ಯಾರೋಪ ಪರಿಭಾಷೆ ಬಿಟ್ಟು ಆಕಾಡೆಮಿಕ್‌ ವಿಚಾರ ಮಂಡನೆಯಾದರೆ ಸ್ವಾಗತಿಸುತ್ತೇನೆ. ಆಯ್ದ ಕೆಲವೇ ಪುಸ್ತಕಗಳ ಆಯ್ದ ತಪ್ಪುಗಳ ಮೂಲಕ ಅಂತಿಮ ತೀರ್ಮಾನಕ್ಕೆ ಬರುವುದು ಪೂರ್ವಾಗ್ರಹವಾದೀತೆಂಬ ವಿವೇಕ ನಮ್ಮೆಲ್ಲರಿಗೂ ಇರಲಿ ಎಂದು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next