ಲಂಡನ್: ಕೋವಿಡ್-19 ವಿರುದ್ಧ ಸೈನಿಕನ ರೀತಿ ಹೋರಾಡುತ್ತಿದ್ದ ಗರ್ಭಿಣಿ ದಾದಿಯೊಬ್ಬರು ಮೃತಪಟ್ಟಿದ್ದಾರೆ. ಬೇರೆಯವರ ಜೀವವನ್ನು ಉಳಿಸಲು ಹೊರಟ ದಾದಿ ಕೋವಿಡ್ ಗೆ ಮಣಿದಿದ್ದಾರೆ.
ಆದರೆ ಗರ್ಭಿಣಿಯಾಗಿದ್ದ ಅವರ ಮಗುವನ್ನು ತುರ್ತು ಸಿಸೇರಿಯನ್ ಮೂಲಕ ಹೊರ ತೆಗೆದಿದ್ದು, ಮಗು ಆರೋಗ್ಯಯುತವಾಗಿದೆ. ಕಂದಮ್ಮ ಕಣ್ಣು ತೆರೆಯುವ ಮುಂಚೆ ತಾಯಿ ಕಣ್ಣು ಮುಚ್ಚಿದ ದಾರುಣ ಘಟನೆ ಇದು.
ಲಂಡನ್‌ನ ವಾಯವ್ಯದಲ್ಲಿರುವ ಲುಟಾನ್ ಮತ್ತು ಡಸ್ಟನೆಬಲ್ ವಿಶ್ವವಿದ್ಯಾ ನಿಲಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮೇರಿ ಅಗೈವಾ ಅಗ್ಯಾಪಾಂಗ್ ಕೋವಿಡ್ ಸೋಂಕಿತರ ಯೋಗಕ್ಷೇಮ ನೋಡಿಕೊಳ್ಳುತ್ತಿ ದ್ದರು. ಆದರೆ ವಾರಗಳ ಹಿಂದೆ ಅವರು ಸುರಕ್ಷಾ ಸಾಧನಗಳನ್ನು ಧರಿಸಿದ್ದರ ಹೊರತಾಗಿಯೂ ಪಾಸಿಟಿವ್ ಪರೀಕ್ಷೆಗೆ ಒಳಗಾಗಿದ್ದರು. ಬಳಿಕ ಅವರನ್ನು ಎಪ್ರಿಲ್ 7ರಂದು ಆಸ್ಪತ್ರೆಗೆ ದಾಖಲಿಸಲಾಯಿತು.
ಕೊರೊನಾ ವಿರುದ್ಧ ಗೆಲ್ಲಲಾಗದೇ ಗರ್ಭಿಣಿಯಾಗಿದ್ದ ನರ್ಸ್ (28) ರವಿವಾರ ನಿಧನರಾದರು. ಅವರು ಐದು ವರ್ಷಗಳ ಕಾಲ ಆಸ್ಪತ್ರೆ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದರು. ಈ ಮೂಲಕ ಎನ್‌ಎಚ್‌ಎಸ್ (ಇಂಗ್ಲೆಂಡಿನ ಆರೋಗ್ಯ ಸೇವೆ) ನ 27 ಸಿಬಂದಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದಂತಾಗಿದೆ.