ಹುಬ್ಬಳ್ಳಿ: ಅವಳಿನಗರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ಜತೆಗೆ ಮಹಾನಗರ ಪಾಲಿಕೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ನೂತನ ಮಹಾಪೌರ ಈರೇಶ ಅಂಚಟಗೇರಿ ತಿಳಿಸಿದರು.
ನೂತನ ಮಹಾಪೌರರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲವಾಗಿದ್ದು, ಇದೀಗ ಅಸ್ತಿತ್ವಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸುಂದರ ಮಹಾನಗರ ರೂಪಿಸಲು ಒತ್ತು ನೀಡಲಾಗುವುದು. ಮಹಾನಗರ ಜನರ ಆಶೋತ್ತರಗಳನ್ನು ಈಡೇರಿಸುವ ಹಾಗೂ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುವುದು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವೆ. ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದರು.
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಡಿಕೆ ನಿಟ್ಟಿನಲ್ಲಿ ಹೋರಾಟಗಾರರೊಂದಿಗೆ ಚರ್ಚಿಸುತ್ತೇನೆ. ಪ್ರತ್ಯೇಕ ಪಾಲಿಕೆ ವಿಚಾರದಲ್ಲಿ ಪಕ್ಷದ ನಿಲುವು ನನ್ನ ನಿಲುವಾಗಿದೆ. ಧಾರವಾಡಕ್ಕೆ ಅನ್ಯಾಯವಾಗಿದೆ ಎಂಬುದು ಹಲವರ ಅನಿಸಿಕೆಯಾಗಿದ್ದು, ಆದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಉಪ ಮಹಾಪೌರ ಉಮಾ ಮುಕುಂದ ಇದ್ದರು.