Advertisement

ಜಿಲ್ಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಆದ್ಯತೆ

11:44 AM Jan 24, 2020 | Suhan S |

ದೊಡ್ಡಬಳ್ಳಾಪುರ: ಬೆಂಗಳೂರಿನಿಂದ ವಿದೇಶಿ ಮಹಿಳೆಯನ್ನು ಕ್ಯಾಬ್‌ನಲ್ಲಿ ಕರೆತಂದು ಬೆತ್ತಲೆಗೊಳಿಸಿದ್ದ ಪ್ರಕರಣ ಹಾಗೂ ನಂದಿಬೆಟ್ಟದ ತಪ್ಪಲಿನ ಚನ್ನಾಪುರ ಸಮೀಪ ಯುವಕನನ್ನು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಹಾಕಿ ಹೋಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸ್‌ ಸಿಬ್ಬಂದಿಯ ಕೆಲಸ ಶ್ಲಾಘನೀಯವಾಗಿದೆ.  ಜತೆಗೆ ಇಂತಹ ಕೃತ್ಯಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಭರವಸೆ ನೀಡಿದರು.

Advertisement

ಮಹಿಳೆ ಬೆತ್ತಲೆಗೊಳಿಸಿದ ಆರೋಪಿಗಳ ಬಂಧನ: ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿ, ಬೆಂಗಳೂರಿನ ಕಮ್ಮನ ಹಳ್ಳಿ ಮುಖ್ಯರಸ್ತೆಯಿಂದ ಓಲಾ ಕಾರಿನಲ್ಲಿ ವಿದೇಶಿ ಮಹಿಳೆಯನ್ನು ಕರೆತಂದಿದ್ದ ಬೆಂಗ ಳೂರಿನ ಮಾರತ್ತಹಳ್ಳಿ ನಿವಾಸಿ ಅಭಿಷೇಕ್‌(21) ಎಂಬಾತನನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ 3 ಜನ ಅಪ್ರಾಪ್ತರನ್ನು ಬಂಧಿಸಲಾಗಿದೆ. ಬೆಂಗಳೂರು ನಗರದ ಸುತ್ತ ಇರುವ ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗುವುದು. ಆಯಕಟ್ಟಿನ ಕೆಲವು ಸ್ಥಳಗಳಲ್ಲಿ ಶಾಶ್ವತ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚು ಹೆಸರು ಮಾಡಿರುವ ಖಾಸಗಿ ಕ್ಯಾಬ್‌ಗಳ ಮುಖ್ಯಸ್ಥರ ಸಭೆ ನಡೆಸಿ ಕ್ಯಾಬ್‌ ಚಾಲಕರ ಬಗ್ಗೆ ಸೂಕ್ತ ಮಾಹಿತಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಿದ ನಂತರವೇ ಕ್ಯಾಬ್‌ ಚಾಲಕರನ್ನು ನೇಮಕಾತಿ ಮಾಡಿಕೊಳ್ಳುವಂತೆ ಹಾಗೂ ಪ್ರಯಾಣಿಕರ ಸುರಕ್ಷತೆ ಕುರಿತಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗುವುದು ಎಂದರು.

ಕೊಲೆ ಆರು ಜನ ಬಂಧನ: ನಂದಿಬೆಟ್ಟದ ತಪ್ಪಲಿನ ಚನ್ನಾಪುರ ಸಮೀಪ ನಡೆದಿದ್ದ ಯುವಕನ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೂ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಿಂದಾಗಿಯೇ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ವಿನುಪ್ರಸಾದ್‌ ಹೆಗಡೆ (29) ಎಂಬಾತನನ್ನು ಆರೋಪಿಗಳು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ ಎಂದರು.

ಬೆಂಗಳೂರಿನ ಬಾಣಸವಾಡಿ ನಿವಾಸಿ ಮೆಲ್ವೀನ್‌, ಬೆಂಗಳೂರಿನ ಆರ್‌.ಟಿ.ನಗರದ ರವಿ, ದೊಡ್ಡಬಳ್ಳಾಪುರ ತಾಲೂಕಿನ ಗಂಡರಾಜ ಪುರದ ನಿಖೀಲ್‌ ಕುಮಾರ್‌, ಬೆಂಗಳೂರಿನ ವಿಘ್ನೇಶ್, ಕುಶಾಲ್, ಮೋಹನ್‌ ಈಗ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ.

Advertisement

ರೌಡಿ ಶೀಟರ್‌ ಕೊಲೆ: ರಾಜಾನುಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ರೌಡಿಶೀಟರ್‌ ಸಂತೋಷ್‌ ಅಲಿಯಾಸ್‌ ಪುಂಗ್ಲಿ (30) ಎಂಬಾತನನ್ನು ದೊಡ್ಡಬಳ್ಳಾಪು ರದ ರೌಡಿ ಶೀಟರ್‌ ವೇಣು ಅಲಿಯಾಸ್‌ ವೇಣುಗೋಪಾಲ್‌ ಕೊಲೆ ಮಾಡಿದ್ದಾನೆ. ಇವರಿಬ್ಬರ ತಂಡಗಳ ನಡುವೆ ನಡೆದ ಜಗಳವೇ ಕೊಲೆಗೆ ಕಾರಣ ಎನ್ನವುದು ಮೇಲ್ನೋ ಟಕ್ಕೆ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌, ಆರೋಪಿಗಳ ಬಂಧನಕ್ಕಾಗಿ ಎರಡು ತಂಡ ರಚಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ಶ್ರಮಿಸಿದ ಡಿವೈಎಸ್‌ಪಿ ಟಿ.ರಂಗಪ್ಪ, ಸಿಪಿಐ ರಾಘವ ಎಸ್‌. ಗೌಡ, ಎಸ್‌ಐ ವಿ.ಗಜೇಂದ್ರ, ಕೆ.ವೆಂಕಟೇಶ್‌, ಮಂಜೇಗೌಡ, ಎಎಸ್‌ಐ ವರಲಕ್ಷ್ಮೀ, ಪೊಲೀಸ್‌ ಸಿಬ್ಬಂದಿಯಾದ ಎಚ್‌.ಸಿ. ರಾಧಾಕೃಷ್ಣ, ಬೋರೇಗೌಡ, ಕರಾಹುಸೇನ್‌, ಸಿ.ಪುಟ್ಟನರಸಿಂಹಯ್ಯ, ನಟರಾಜು, ಪಿ.ಸಿ. ಮಧುಕುಮಾರ್‌, ಪಾಂಡು, ಕುಮಾರ್‌, ಹುಸೇನ್‌, ಜಗದೀಶ್‌, ಮಂಜುನಾಥ್‌ ಇವರಿಗೆ ಅಭಿನಂದನ ಪತ್ರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next