ಬೆಂಗಳೂರು: ವೈದ್ಯಕೀಯ ವೃತ್ತಿಯಲ್ಲಿ ರೋಗಿಯ ಆರೈಕೆಯೇ ಮುಖ್ಯವಾಗಬೇಕು. ಹಣದ ಹಿಂದೆ ಓಡಬಾರದು ಎಂದು ಮಣಿಪಾಲ ವಿವಿ ವಿಶ್ರಾಂತ ಉಪಕುಲಪತಿ ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆಯವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಗುರುವಾರ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯಲ್ಲಿ ರೋಗಿಗಳಿಗೆ ಮೊದಲ ಆದ್ಯತೆ ನೀಡಿ.
ರೋಗಿಗಳಿಂದ ಗೌರವ, ಪ್ರೀತಿ ಹಾಗೂ ವಿಶ್ವಾಸ ಸಂಪಾದಿಸಿ. ಚಿಕಿತ್ಸೆಗೆ ಬರುವ ಬಡರೋಗಿಗಳು ಹಣದ ವಿಷಯದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಹೀಗಾಗಿ, ನೀವು ಹಣಗಳಿಕೆಯನ್ನೇ ಪ್ರಮುಖ ಉದ್ದೇಶವಾಗಿರಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಆರೋಗ್ಯವಂತ ಬುದ್ಧಿ, ಮನಸ್ಸು ಹೊಂದಿದ್ದರೆ ವೈದ್ಯಕೀಯ ವೃತ್ತಿಯಲ್ಲಿ ಉತ್ಸಾಹದಿಂದ ಸೇವೆ ಸಲ್ಲಿಸಿ, ಯಶಸ್ಸು ಸಾಧಿಸಬಹುದು. ಬಡವರು ಹಾಗೂ ಸಮಾಜಕ್ಕಾಗಿ ಸೇವೆ ಸಲ್ಲಿಸುವ ಮನೋಭಾವ ನಮ್ಮಲ್ಲಿ ಇರಬೇಕು. ರೋಗಿಯ ಮೇಲೆ ಅಡ್ಡ ಪರಿಣಾಮ ಬೀರುವ ಔಷಧಗಳನ್ನು ಜಾಸ್ತಿಯಾಗಿ ಬರೆದುಕೊಡಬೇಡಿ ಎಂದರು.
ಇದೇ ಸಂದರ್ಭದಲ್ಲಿ 157 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಇವರಲ್ಲಿ 144 ವೈದ್ಯಕೀಯ, ಇಬ್ಬರು ಸ್ನಾತಕೋತ್ತರ ಹಾಗೂ 11 ವಿದ್ಯಾರ್ಥಿಗಳು ಅನ್ವಯಿಕ ವಿಜ್ಞಾನದಲ್ಲಿ ಪದವಿ ಪಡೆದರು. ಸಪ್ತಗಿರಿ ಮಹಾವಿದ್ಯಾಲಯದ ಅಧ್ಯಕ್ಷ ಜಿ. ದಯಾನಂದ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಶುಗೊತ ಚಕ್ರಭರ್ತಿ, ನಿರ್ದೇಶಕ ಜಿ.ಡಿ. ಮನೋಜ್, ಪ್ರಾಂಶುಪಾಲೆ ಡಾ. ವಿ. ಜಯಂತಿ ಉಪಸ್ಥಿತರಿದ್ದರು.