Advertisement

ಕುಡಿವ ನೀರು ಸರಬರಾಜಿಗೆ ಆದ್ಯತೆ ನೀಡಿ

01:26 PM May 07, 2019 | Team Udayavani |

ಕುಮಟಾ/ಅಂಕೋಲಾ/ಕಾರವಾರ: ಕುಡಿಯುವ ನೀರು ಸರಬರಾಜು ಮಾಡಲು ತಾಲೂಕು ಆಡಳಿತಗಳು ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ಸೂಚಿಸಿದ್ದಾರೆ.

Advertisement

ಕುಮಟಾ ಹಾಗೂ ಅಂಕೋಲದಲ್ಲಿ ಸೋಮವಾರ ಪ್ರತ್ಯೇಕವಾಗಿ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರಸ್ತುತ ಕುಡಿಯುವ ನೀರು ಪ್ರಮುಖ ವಿಷಯ. ಪ್ರಸಕ್ತ ಮಾಸದಲ್ಲಿ ಕುಡಿಯುವ ನೀರಿನ ಕುರಿತು ಸಾರ್ವಜನಿಕರಿಂದ ಅಹವಾಲುಗಳು ಕೇಳಿ ಬರುತ್ತಿದ್ದು, ತಾಲೂಕು ಆಡಳಿತ ಆದ್ಯತೆ ಮೇರೆಗೆ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಮೊದಲು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಹಾಗೂ ಸಮೀಪದ ನೀರಿನ ಮೂಲ ಯಾವುದೆಂದು ಗುರುತಿಸಿ ಅದಕ್ಕೆ ಬೇಕಿರುವ ಕಾಮಗಾರಿ ಕೈಗೆತ್ತಿಕೊಂಡು ತಕ್ಷಣದ ಕ್ರಮಕ್ಕೆ ಮುಂದಾಗಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಲಭ್ಯವಿರುವ ನೀರಿನ ಮೂಲದಿಂದ ಈ ತಿಂಗಳು ಟ್ಯಾಂಕರ್‌ಗಳ ಮೂಲಕ ನೀರಿನ ಸರಬರಾಜು ಮಾಡಲು ತಾಪಂ ಇಒಗಳು ಆಯಾ ಪಿಡಿಒಗಳೊಂದಿಗೆ ಕ್ರಮ ಕೈಗೊಳ್ಳಬೇಕು ಹಾಗೂ ನೀರಿನ ಮೂಲ ಇರುವುದನ್ನು ಗುರುತಿಸಿ ಪೈಪ್‌ಲೈನ್‌ ಅವಶ್ಯಕತೆ ಇದ್ದಲ್ಲಿ ಅದರ ಕಾಮಗಾರಿ ಕೈಗೊಳ್ಳುವ ಹಾಗೂ ಪ್ರಸ್ತುತ ನೀರಿನ ಸೆಲೆ ಕಡಿಮೆ ಆಗಿರುವ ಬೋರ್‌ವೆಲ್ಗಳನ್ನು ಪುನರ್ಜೀವಗೊಳಿಸಬೇಕು ಎಂದು ಅವರು ಹೇಳಿದರು.

ಕೆಲವು ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ಗಳಲ್ಲಿ ನೀರಿನ ಲಭ್ಯತೆ ಇದ್ದು, ಗ್ರಾಮಸ್ಥರಿಗೆ ಅನುಕೂಲವಾಗುವಂತಿದ್ದರೆ ಆ ಬೋರ್‌ವೆಲ್ ಮಾಲೀಕರೊಂದಿಗೆ ಚರ್ಚಿಸಿ ಬಾಡಿಗೆ ಆಧಾರದಲ್ಲಿ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಮುಂದಿನ ಮುಂಗಾರು ಆರಂಭವಾಗುವವರೆಗೆ ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ಸೂಚಿಸಿದರು.

Advertisement

ಅಲ್ಲದೆ, ಮುಂದಿನ ಮುಂಗಾರಿನಲ್ಲಿ ಮುಳುಗಡೆ ಪ್ರದೇಶ ಹಾಗೂ ಗುಡ್ಡಕುಸಿತ ಸೇರಿದಂತೆ ವಿವಿಧ ಅವಘಡಗಳು ಈ ಹಿಂದಿನ ಘಟನೆಗಳನ್ನಾಧರಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಈ ಸಂಬಂಧ ಅಗತ್ಯ ಕಾಮಗಾರಿ ಕೈಗೊಳ್ಳುವುದಿದ್ದರೆ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದಕೊಳ್ಳಬೇಕು ಎಂದು ಅವರು ಹೇಳಿದರು.

ಅಲ್ಲದೆ ಬೇಸಿಗೆ ಹಾಗೂ ಮುಂಗಾರು ಸಂದರ್ಭದಲ್ಲಿ ಸಹಜವಾಗಿ ಕಂಡು ಬರುವ ರೋಗ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರಿಕೆ ವಹಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳು ಗಮನ ಹರಿಸಬೇಕು ಎಂದೂ ತಿಳಿಸಿದರು.

ಕುಮಟಾ ಸಹಾಯಕ ಕಮಿಷನರ್‌ ಪ್ರೀತಿ ಗೆಹ್ಲೂಟ್, ತಹಶೀಲ್ದಾರ್‌ ಪರಿಮಳ ಕೆ., ತಾಪಂ ಇಒ ಸಿ.ಟಿ. ನಾಯ್ಕ ಹಾಗೂ ಅಂಕೋಲಾದ ಸಭೆಯಲ್ಲಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next