ಉಡುಪಿ/ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಸಹಕಾರ ಸಂಘಗಳು ಗಣನೀಯ ಸಾಧನೆ ಮಾಡಲು ಆಡಳಿತ ಮಂಡಳಿ ಹಾಗೂ ಸಿಬಂದಿ ಶ್ರಮ ಕಾರಣ. ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ರೀತಿ ಅಭಿವೃದ್ಧಿಯತ್ತ ಸಾಗುವುದು ಸಂತೋಷದ ವಿಷಯ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ, ಸಹಕಾರಿ ಮೀನು ಮಾರಾಟ ಮಹಾ ಮಂಡಳ, ದ.ಕ. ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಮೀನುಗಾರರ ಮಹಾಮಂಡಳದ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿ ಸಿಬಂದಿಗೆ, ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಮೀನು ಮಾರಾಟ ಮಹಾಮಂಡಳದ ಕೇಂದ್ರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದ ಮೂಲಕ ಎಲ್ಲ ವರ್ಗಗಳ ಜನರಿಗೆ ಇಲಾಖೆಯ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಕರಾವಳಿಯಲ್ಲಿ ಭದ್ರ ಬುನಾದಿ ಮುಖ್ಯ ಅತಿಥಿಯಾಗಿದ್ದ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಎಲ್. ಭೋಜೇ ಗೌಡ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಎದುರಿಸಿದರೂ ಸಹಕಾರ ಕ್ಷೇತ್ರದಲ್ಲಿ ಕರಾವಳಿ ಭಾಗದ ಸಂಘಗಳು ಭದ್ರ ಬುನಾದಿಯಿಂದ ಇರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ರಾಜ್ಯ ಹಾಗೂ ಕೇಂದ್ರದ ಯೋಜನೆಗಳು ಕಾರ್ಯರೂಪಗೊಂಡು ಅದರ ಪ್ರಯೋಜನ ಜನಸಾಮಾನ್ಯರಿಗೆ ಸಿಗಬೇಕಾದಲ್ಲಿ ಕಾರ್ಯಾಗಾರ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಬಜೆಟ್ ಮುನ್ನ ಎಲ್ಲ ಸಹಕಾರ ಸಂಘಗಳ ಸಭೆ ಕರೆದು ಜನಪರ ಯೋಜನೆಗಳ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಯೋಜನೆಗಳನ್ನು ಬಜೆಟ್‌ನಲ್ಲಿ ಕಾರ್ಯಗತಗೊಳಿಸುವ ಬಗ್ಗೆ ನೇತೃತ್ವ ವಹಿಸುವಂತೆ ತಿಳಿಸಿದರು.
ಮೀನುಗಾರಿಕಾ ಉಪನಿರ್ದೇಶಕ ಮಹೇಶ್ ಕುಮಾರ್, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ರಾಜ್ಯ ಮಹಾಮಂಡಳದ ಕಾರ್ಯದರ್ಶಿ ಪಿ.ಎಂ. ನಾಗಶಯನ, ಸಹಕಾರ ಯೂನಿಯನ್ ಹರೀಶ್ ಆಚಾರ್, ಮಾನವ ಸಂಪನ್ಮೂಲ ಅಧಿಕಾರಿ ಮೀನುಗಾರಿಕಾ ನಿರ್ದೇಶಕ ಎಚ್.ಕೆ. ದಿನೇಶ್, ನ್ಯಾಯವಾದಿ ಮಂಜುನಾಥ್ ಎಸ್.ಕೆ. ಉಡುಪಿ, ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಬಿ.ಎ. ಮಹದೇವಪ್ಪ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೆ. ಸ್ವಾಗತಿಸಿ, ರಾಜ್ಯ ಮಹಾಮಂಡಳದ ಯೋಜನಾಧಿಕಾರಿ ಮಂಜುನಾಥ್ ವಂದಿಸಿದರು.