Advertisement

ಶಾಂತಿ, ಸೌಹಾರ್ದಕ್ಕೆ ಕ್ರೀಡೆಗಳು ಪೂರಕ: ವರ್ಗೀಸ್‌

02:25 AM Nov 23, 2018 | Karthik A |

ಕಡಬ: ಸೋಲು ಮತ್ತು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಕ್ರೀಡಾಸ್ಫೂರ್ತಿ ನಮ್ಮ ಜೀವನಕ್ಕೂ ಅಗತ್ಯ. ಕ್ರೀಡೆಗಳು ಸಾಮಾಜಿಕ ಶಾಂತಿ ಹಾಗೂ ಸೌಹಾರ್ದಕ್ಕೆ ಪೂರಕ ಎಂದು ಕಡಬ ಜಿ.ಪಂ. ಕ್ಷೇತ್ರದ ಸದಸ್ಯ ಪಿ.ಪಿ. ವರ್ಗೀಸ್‌ ಅಭಿಪ್ರಾಯಪಟ್ಟರು. ಅವರು ಗುರುವಾರ ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಸೋಲು ಎನ್ನುವುದನ್ನು ವೈಫಲ್ಯ ಎಂದು ಪರಿಗಣಿಸದೆ ಗೆಲುವಿನ ಮೆಟ್ಟಿಲು ಎಂದು ತಿಳಿದಾಗ ನಾವು ಯಶಸ್ಸನ್ನು ಕಾಣಲು ಸಾಧ್ಯ ಎಂದು ನುಡಿದರು. ಕಾಲೇಜಿನ ಕ್ರೀಡಾಂಗಣದ ವಿಸ್ತರಣೆಗೆ 1 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದರು.

Advertisement

ಶಿಸ್ತು ಇರಲಿ
ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಕೃಷಿಕ ರಾಜರತ್ನ ಆರಿಗ ಕುಳವಳಿಕೆ ಮಾತನಾಡಿ, ನಿರಂತರ ಅಭ್ಯಾಸ, ಕಠಿನ ಪರಿಶ್ರಮ ಹಾಗೂ ಶಿಸ್ತಿನ ಜೀವನ ಶೈಲಿಯಿಂದ ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದು. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಎಂದಿಗೂ ದ್ವೇಷವನ್ನು ಕಟ್ಟಿಕೊಳ್ಳಬಾರದು. ಕ್ರೀಡೆಯೂ ಸಹಿತ ಪಠ್ಯಪೂರಕವಾದಂತಹ ಚಟುವಟಿಕೆಗಳಿಗೆ ಅವಕಾಶಗಳು ಸಿಕ್ಕಿದಾಗ ಮಾತ್ರ ಸರ್ವತೋಮುಖ ಶಿಕ್ಷಣ ಸಿಗಲು ಸಾಧ್ಯ ಎಂದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಹಾಗೂ ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌ ಶುಭ ಹಾರೈಸಿದರು. ಕಡಬದ ಉದ್ಯಮಿ ದಯಾನಂದ ಗೌಡ ಆರಿಗ, ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪೆ ಅತಿಥಿಗಳಾಗಿ ಆಗಮಿಸಿದ್ದರು.

ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಚೇತಕ್‌ ಜೈನ್‌, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಡಬ ಗ್ರಾಮ ಸಮಿತಿ ಉಪಾಧ್ಯಕ್ಷ ಶಿವಪ್ರಸಾದ್‌ ಮೈಲೇರಿ, ಕಾಲೇಜಿನ ಉಪ ಪ್ರಾಂಶುಪಾಲೆ ವೇದಾವತಿ ಬಿ., ನಿವೃತ್ತ ಉಪನ್ಯಾಸಕ ಇ.ಸಿ. ಚೆರಿಯನ್‌ ಬೇಬಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಉಂಡಿಲ, ಕ್ರೀಡಾ ತೀರ್ಪುಗಾರ ಶಿವರಾಮ ಏನೆಕಲ್‌, ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ, ನೂಜಿಬಾಳ್ತಿಲದ ಬೆಥನಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪುನೀತ್‌ ಕೆ., ಕಡಬ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್‌ ತಂಟೆಪ್ಪಾಡಿ, ಕಬಡ್ಡಿ ತರಬೇತುದಾರ ಸುರೇಶ್‌ ಕೋರಿಯಾರ್‌, ಕಾಲೇಜಿನ ಉಪನ್ಯಾಸಕ ಹರಿಶಂಕರ ಕೆ.ಎಂ., ವಿದ್ಯಾರ್ಥಿ ನಾಯಕ ಸನತ್‌ಕುಮಾರ್‌ ಪಿ.ಜೆ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಜನಾರ್ದನ ಕೆ.ಎನ್‌. ಸ್ವಾಗತಿಸಿ, ಉಪನ್ಯಾಸಕ ವಾಸದೇವ ಗೌಡ ಕೋಲ್ಪೆ ವಂದಿಸಿದರು. ಉಪನ್ಯಾಸಕ ಸೆಲಿನ್‌ ಕೆ.ಪಿ. ನಿರೂಪಿಸಿದರು.

ಸಮಾನವಾಗಿ ಸ್ವೀಕರಿಸಿ
ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶೀಯ ಕ್ರೀಡೆ ಕಬಡ್ಡಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿರುವುದು ಸಂತಸದ ಸಂಗತಿ. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿ ಗೆಲುವಿನ ಗುರಿಯತ್ತ ಸಾಗುವುದು ಮುಖ್ಯ. ಇದೇ ತತ್ವವನ್ನು ಜೀವನದಲ್ಲಿಯೂ ಅಳವಡಿಸಿಕೊಂಡಾಗ ನಾವು ಯಶಸ್ಸು ಪಡೆಯಲು ಸಾಧ್ಯ ಎಂದರು.

Advertisement

ಹೆಲಿಪ್ಯಾಡ್‌ ನಿರ್ಮಿಸಲು ಮನವಿ
ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಅವರು, ತಾಲೂಕು ಕೇಂದ್ರವಾಗಿರುವ ಕಡಬಕ್ಕೆ ಹೆಲಿಪ್ಯಾಡ್‌ ಅಗತ್ಯವಿರುವುದರಿಂದ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್‌ ನಿರ್ಮಿಸಲು ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದ್ದನ್ನು ಉಲ್ಲೇಖೀಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ಕ್ರೀಡಾಳುಗಳಿಗೆ ಅನುಕೂಲವಾಗುವಂತೆ ಕಡಬದಲ್ಲಿ ಸುಸಜ್ಜಿತ 400 ಮೀ. ಟ್ರ್ಯಾಕ್‌ ಅಗತ್ಯವಿದ್ದು, ಅದನ್ನು ನಿರ್ಮಿಸಿದಲ್ಲಿ ಹೆಲಿಪ್ಯಾಡ್‌ ಆಗಿಯೂ ಅದನ್ನೇ ಬಳಸುವಂತೆ ವ್ಯವಸ್ಥೆಗೊಳಿಸಬಹುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next