ಹುಬ್ಬಳ್ಳಿ: ಹಳೆಹುಬ್ಬಳ್ಳಿ ಗಲಭೆ ಪ್ರಕರಣ ಇದೊಂದು ಪೂರ್ವ ನಿಯೋಜಿತವಾಗಿದ್ದು, ಇದನ್ನು ತಪ್ಪಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದು, ಅವರಿಗೆ ಅಭಿನಂದಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಇಲ್ಲಿನ ಅಂಜುಮನ್ ಸಂಸ್ಥೆಯ ನೆಹರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಸರಕಾರಕ್ಕೆ ಮುಜುಗರ ತರುವಂತಹದಾಗಿತ್ತು. ಆದರೆ ಪರಿಸ್ಥಿತಿ ಅರಿತ ಪೊಲೀಸರು ಸಕಾಲದಲ್ಲಿ ಗಲಭೆಯನ್ನು ಹತೋಟಿಗೆ ತಂದಿದ್ದಾರೆ. ಈ ಘಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅದನ್ನು ಪ್ರಾಮಾಣಿಕವಾಗಿ ಪತ್ತೆ ಹಚ್ಚುವ ಕೆಲಸ ಪೊಲೀಸರಿಂದ ಆಗಬೇಕು ಎಂದರು.
ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಮಾಯಕರು ನೋಡುತ್ತ ನಿಂತಿದ್ದರು. ಅಂತಹವರನ್ನು ಕೂಡ ಬಂಧಿಸಲಾಗಿದೆ. ಪೋಲೀಸರು ಬಂಧಿತರ ಹಿನ್ನೆಲೆ ನೋಡಬೇಕು. ಅವರ ಮೇಲೆ ಯಾವುದಾದರೂ ಕೇಸುಗಳು ಇದ್ದರೆ ಕ್ರಮ ಕೈಗೊಳ್ಳಲಿ. ಕಲ್ಲು ತೂರಾಟ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೇಸುಗಳು ಇರದಿದ್ದರೆ ಅವರನ್ನು ಬಿಟ್ಟು ಬಿಡಲಿ ಎಂದು ಪೊಲೀಸದ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.
ಹಲಾಲ್ ಹಾಗೂ ಹಿಜಾಬ್ ವಿಚಾರಗಳನ್ನು ಸರಕಾರ ಆರಂಭದಲ್ಲೆ ಚಿವುಟಿ ಹಾಕಬಹುದಿತ್ತು. ಅಂತಹ ಕೆಲಸ ಸರಕಾರದಿಂದ ಆಗಲಿಲ್ಲ. ಸರ್ವಜನಾಂಗದ ತೋಟಕ್ಕೆ ದಕ್ಕೆಯಾಗಬಾರದು. ಎಲ್ಲರೂ ಶಾಂತಿಯಿಂದ ಬದುಕಬೇಕು. ನಮ್ಮ ಪಕ್ಷ ಸಮಾಜಘಾತುಕ ಶಕ್ತಿಗಳಿಗೆ ಹಾಗೂ ಘಟನೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಡಿಜೆ ಹಳ್ಳಿ ,ಕೆಜಿ ಹಳ್ಳಿ ಘಟನೆ ನಡೆಯಲು ಕಾರಣಿಭೂತರಾದವರು ಈಗಲೂ ಆರಾಮವಾಗಿ ಓಡಾಡುತ್ತಿದ್ದಾರೆ. ಅದು ಒಂದು ಪಕ್ಷದ ಮುಖಂಡರ ಜೊತೆಗೆ ಸುತ್ತಾಡುತ್ತಿದ್ದಾರೆ ಎಂದರು.
ಪಿಎಸ್‌ಐ ಹಗರಣದ ರೂವಾರಿ ದಿವ್ಯಾ ಹಾಗರಗಿ ಬಂಧಿಸದ ವಿಚಾರದ ಕುರಿತು ಸರಕಾರವೇ ಉತ್ತರ ನೀಡಬೇಕು. ಅವರಿಗೆ ಸರಕಾರ ಅಥವಾ ರಾಜಕಾರಣದ ಕೃಪಾ ಕಟಾಕ್ಷ ಇದೆಯೋ ಇಲ್ಲವೋ ಗೊತ್ತಿಲ್ಲ. ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಯಾರ ಕಣ್ಣಿಗೆ ಸಿಗದೆ ಇರೋದು ಅವರೆಷ್ಟು ಶಕ್ತಿ ಶಾಲಿ ಎಂಬುವುದು ಗೊತ್ತಾಗುತ್ತದೆ ಎಂದರು.
ಹಿಂದಿ ಹೇರಿಕೆ ಸರಿಯಲ್ಲ
ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಅದರದೆಯಾದ ಸ್ಥಾನ ಮಾನ, ಗೌರವ ಹಾಗೂ ಪ್ರಾತಿನಿಧ್ಯ ಇರುತ್ತದೆ. ಹಿಂದಿ ಹೇರಿಕೆ ಸರಿಯಲ್ಲ ಎಂದರು.
ಸಿನಿಮಾ ನಟರಿಗೆ ಯಾವುದೇ ಭಾಷೆಗಳಿಲ್ಲ. ನಟರು ಈ ವಿಚಾರಕ್ಕೆ ಹೋಗಬಾರದು. ಸಿನಿಮಾ ಅನ್ನೋದು ಅದೊಂದು ಭಾವನಾತ್ಮಕ ಸಂಬಂಧ ಇರುವ ಕ್ಷೇತ್ರ ಎಂದರು.