Advertisement

ನಗರದ ಪ್ರಗತಿಗೆ ಹಿನ್ನಡೆಯಾಗಿದ್ದು ನಿಜ: ಮಧುರಾ ಶಿವಾನಂದ್

04:49 PM Feb 22, 2022 | Suhan S |

ಸಾಗರ: ಕಳೆದ 2 ವರ್ಷಗಳ ಅವಧಿ ಕೊರೊನಾದಂತಹ ಮಾರಕ ರೋಗದ ಹಾವಳಿಯಿಂದ ನಗರದ ಪ್ರಗತಿಗೆ ಹಿನ್ನಡೆಯಾಗಿದೆ. ಬಜೆಟ್ ಯೋಜನೆಯ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಆದರೆ ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು ಹಾಗೂ ಅನುದಾನಗಳನ್ನು ಬಳಸಿ ಸಾಗರ ನಗರದ ಸಮಗ್ರ ಅಭಿವೃದ್ಧಿಗೆ ಬದ್ಧರಿದ್ದೇವೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ತಿಳಿಸಿದರು.

Advertisement

ಇಲ್ಲಿನ ನಗರಸಭೆ ಆವರಣದಲ್ಲಿ ಬಜೆಟ್ ಪೂರ್ವಭಾವಿಯಾಗಿ ಸಾರ್ವಜನಿಕರು ಮತ್ತು ಸಂಘಸಂಸ್ಥೆ ಪ್ರಮುಖರ ಜೊತೆ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬಂದ ಅನೇಕ ಸಲಹೆಗಳನ್ನು ಬಜೆಟ್‌ನಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಈ ಬಾರಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಬಜೆಟ್‌ನಲ್ಲಿ ಸೇರಿಸಲಾಗುತ್ತದೆ. ಪ್ರಮುಖವಾಗಿ ಇಂದಿರಾಗಾಂಧಿ ಕಾಲೇಜಿನಿಂದ ಒಕ್ಕಲಿಗರ ಸಮುದಾಯ ಭವನದವರೆಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ವಾಕಿಂಗ್ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ. ನಗರವ್ಯಾಪ್ತಿಯಲ್ಲಿರುವ ಎಲ್ಲ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿ ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ಜಾನಪದ, ಭರತನಾಟ್ಯ, ಯಕ್ಷಗಾನ ಕಲೆ ಮೂರ್ತಿಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದರು.

ನಗರೋತ್ಥಾನ ಯೋಜನೆಯಡಿ ಶಾಸಕರ ಮಾರ್ಗದರ್ಶನದಲ್ಲಿ ಸರ್ಕಾರದಿಂದ ೩೦ ಕೋಟಿ ರೂ. ಅನುದಾನ ಬರಲಿದ್ದು, ಇದಕ್ಕಾಗಿ ವಿಶೇಷ ಕ್ರಿಯಾಯೋಜನೆ ರೂಪಿಸಲಾಗಿದೆ. ಪೌರ ಕಾರ್ಮಿಕರ ಮನೆ ದುರಸ್ತಿ, ವಿಶೇಷ ಚೇತನ ಮಕ್ಕಳು ಮತ್ತು ಪೋಷಕರ ಹೆಸರಿನಲ್ಲಿ ಭದ್ರತಾ ಠೇವಣಿ ಇರಿಸುವ ಉದ್ದೇಶವಿದೆ. ಜೊತೆಗೆ ಸಭೆಯಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಇದರಲ್ಲಿ ಪ್ರಮುಖವಾಗಿರುವುದನ್ನು ಅನುಷ್ಟಾನಕ್ಕೆ ತರಲು ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಉಪಾಧ್ಯಕ್ಷ ವಿ.ಮಹೇಶ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಫುಡ್‌ಕೋರ್ಟ್ ನಿರ್ಮಿಸಲು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹಳೆ ತರಕಾರಿ ಮಾರ್ಕೆಟ್‌ನಲ್ಲಿ ಫುಡ್‌ಕೋರ್ಟ್ ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತದೆ. ಇದರ ಜೊತೆಗೆ ನಗರವ್ಯಾಪ್ತಿಯಲ್ಲಿರುವ ಐಡಿಎಸ್‌ಎಂಟಿ ಮಳಿಗೆಗಳನ್ನು ಅಭಿವೃದ್ಧಿಪಡಿಸಿ ಅದನ್ನು ಹರಾಜು ಹಾಕುವ ಮೂಲಕ ನಗರಸಭೆ ಆದಾಯ ಹೆಚ್ಚಿಸಿಕೊಳ್ಳಲಾಗುತ್ತದೆ. ನಗರವ್ಯಾಪ್ತಿಯಲ್ಲಿರುವ ಮನೆಕಂದಾಯ, ನಳ ಕಂದಾಯ ಮತ್ತು ಉದ್ದಿಮೆ ಶುಲ್ಕವನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡುವ ಮೂಲಕ ನಗರಸಭೆ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

ಪೌರಾಯುಕ್ತ ರಾಜು ಡಿ. ಬಣಕಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನ ಮುಂದುವರೆದ ಕಾಮಗಾರಿಗೆ ಅನುದಾನ ನೀಡುವಂತೆ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಮನವಿ ಸಲ್ಲಿಸಿದರು.

Advertisement

ಜನರ ಹಲವು ಬೇಡಿಕೆಗಳು….

  • ಕುಡಿಯುವ ನೀರಿನ ಸೋರಿಕೆ ತಡೆಗಟ್ಟಬೇಕು. ಮೀಟರ್ ಅಳವಡಿಸಬೇಕು.- ಶಶಿಧರ, ನಿವೃತ್ತ ಪ್ರಾಚಾರ್ಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ
  • ಸಾಗರ ಪಟ್ಟಣದ ೩೧ ವಾರ್ಡಿಗೂ 31 ಪೌರ ಕಾರ್ಮಿಕರನ್ನು ನೇಮಿಸುವ ಮೂಲಕ ಸ್ವಚ್ಚತೆಯ ಉಸ್ತುವಾರಿ ಹಾಗೂ ಸ್ವಚ್ಚತೆಗೆ ಅವಕಾಶ ಕಲ್ಪಿಸಬೇಕು. ರೈಲ್ವೆ ಇಲಾಖೆ ಪ್ರತಿ ೭ ಕಿಮೀಗೆ ಒಬ್ಬರನ್ನು ನೇಮಿಸಿದೆ. ಪ್ರತಿ ೩ ಉದ್ಯಾನವನಕ್ಕೆ ಒಬ್ಬರು ಪೌರಕಾರ್ಮಿಕರನ್ನು ನಿರ್ವಹಣೆಗೆ ನಿಯೋಜಿಸಬೇಕು. ಸುಬಾಷ್ ಕೌತಳ್ಳಿ, ಸುಭಾಷ್ಚಂದ್ರ ಬೋಸ್ ಯುವ ಸೇನೆ ಅಧ್ಯಕ್ಷ
  • ಎಸ್.ವಿ .ಹಿತಕರ್ ಜೈನ್ ಮಾತನಾಡಿ ರಸ್ತೆ ವಿಭಜಕಗಳ ನಿರ್ಮಿಸುವ ಯೋಜನೆಯಲ್ಲಿ ಮಾರ್ಕೆಟ್ ರಸ್ತೆ ಮತ್ತು ಬಿಎಚ್ ರಸ್ತೆಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವ ಮೂಲಕ ನಗರಸಭೆಗೆ ಆಧಾಯ ಸಂಗ್ರಹಿಸಲು ಪ್ರಯತ್ನಿಸಬಹುದು. ಬೀದಿ ದೀಪಗಳ ಬಳಕೆಯಲ್ಲಿ ಸೋಲಾರ್ ದೀಪಕ್ಕೆ ಆದ್ಯತೆ ನೀಡಬೇಕು. ನಗರಸಭೆ ಕಟ್ಟಡಗಳ ಮೇಲ್ಛಾವಣಿಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪಿಸಬೇಕು. ಎಸ್.ವಿ.ಹಿತಕರ ಜೈನ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ
Advertisement

Udayavani is now on Telegram. Click here to join our channel and stay updated with the latest news.

Next