Advertisement
ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ 11ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್. ಪೈ ಅವರಿಗೆ ಚಾಣಕ್ಯ ಪ್ರಶಸ್ತಿ ನೀಡಿ ಗೌರವಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಉತ್ತಮ ಸಂವಹನಕಾರನಾಗಿದ್ದರೆ ಮಾತ್ರ ವಿಶ್ವ ನಾಯಕನಾಗಲು ಸಾಧ್ಯ. ಪರಿಣಾಮಕಾರಿ ಸಂವಹನ ರಾಜಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಸಂವಹನದಲ್ಲಿ ಕಲಿಕೆಯು ನಿರಂತರವಾಗಿರುತ್ತದೆ. ಪ್ರಶಸ್ತಿಗೆ ಭಾಜನರಾದ ಎಲ್ಲರೂ ಅತ್ಯುತ್ತಮ ಸಂವಹನಕಾರರಾಗಿದ್ದು ಇತರರಿಗೆ ಮಾದರಿ ಎಂದರು. ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾಗ ಮೋಹನ್‌ದಾಸ್ ಮಾತನಾಡಿ, ಕಳೆದ 70 ವರ್ಷಗಳ ಪತ್ರಿಕಾ ಸ್ವಾತಂತ್ರ್ಯವನ್ನು ಬಳಸಿಕೊಂಡು ಅನೇಕ ಮಾಧ್ಯಮಗಳು ಸಮಾಜ ಕಟ್ಟಲು ನೆರವಾಗಿವೆ. ಪ್ರಮುಖವಾಗಿ ಸಮಾಜದಿಂದ ಹಿಂದುಳಿದ ವರನ್ನು ಮುಖ್ಯವಾಹಿನಿಗೆ ತರಲು, ಅನೇಕ ವಲಯಗಳ ಅಭಿವೃದ್ಧಿ, ವೈಜ್ಞಾನಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಪರಿಸ್ಥಿತಿ ಬದಲಾಗಿದೆ. ಬಹು ರಾಷ್ಟ್ರೀಯ ಕಂಪೆನಿಗಳು, ರಾಜಕಾರಣಿಗಳು ಮಾಧ್ಯಮ ವಲಯಕ್ಕೆ ಬಂದು ಅಲ್ಲಿನ ವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆ. ಎಂದರು.
Related Articles
ಇದೇ ಸಂದರ್ಭದಲ್ಲಿ ಉತ್ತಮ ಆಡಳಿತ ವಿಭಾಗ ದಲ್ಲಿ ವಾರ್ತಾ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಡಿಜಿಟಲ್ ಸಂವಹನ ವಿಭಾಗದಲ್ಲಿ ತೆಲಂಗಾಣ ಸರಕಾರದ ಡಿಜಿಟಲ್ ಮೀಡಿಯಾ ನಿರ್ದೇಶಕ ದಿಲೀಪ್ ಕೊನಥಂ ಸೇರಿದಂತೆ 10ಕ್ಕೂ ಹೆಚ್ಚು ವಿಭಾಗದಲ್ಲಿ ಚಾಣಕ್ಯ ಪ್ರಶಸ್ತಿ ವಿತರಿಸಲಾಯಿತು. ಜತೆಗೆ ಯುವ ಸಂಪರ್ಕ ಸಾಧಕರಿಗೆ ಕೌಟಿಲ್ಯ ಪ್ರಶಸ್ತಿ, ಸಾರ್ವಜನಿಕ ಸಂಪರ್ಕ ಸಾಧಕರಿಗೆ “ಹಾಲ್ ಆಫ್ ಫೇಮ…’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮೇಜರ್ ಜನರಲ್ ಸತ್ಯ ಪ್ರಕಾಶ್ ಯಾದವ್, ಎಂ.ಬಿ.ಜಯರಾಂ ಉಪಸ್ಥಿತರಿದ್ದರು.
Advertisement