Advertisement

ಬ್ರಾಹ್ಮಣರಿಂದಲೇ ಬ್ರಾಹ್ಮಣ ಸಮುದಾಯಕ್ಕೆ ಅಪ್ರಪಚಾರ

11:21 AM Dec 16, 2018 | |

ಮೈಸೂರು: ಪಾಶ್ಚಿಮಾತ್ಯರು ಮಾತ್ರವಲ್ಲದೇ ಪ್ರಸ್ತುತ ಸಂದರ್ಭದಲ್ಲಿ ನಮ್ಮವರಿಂದಲೇ ಬ್ರಾಹ್ಮಣ ಸಮುದಾಯದ ಸಂಸ್ಕೃತಿ, ಧರ್ಮಕ್ಕೆ ಅಪಚಾರವಾಗುತ್ತಿದೆ. ಹೀಗಾಗಿ ತ್ರಿಮತಸ್ಥರು ಒಂದಾಗಿ, ಸೇವೆ ಹಾಗೂ ಹೋರಾಟದ ಮೂಲಕ ದೇಶ ಮತ್ತು ಬ್ರಾಹ್ಮಣ ಸಮುದಾಯ ಉಳಿವಿಗೆ ಮುಂದಾಗಬೇಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು. 

Advertisement

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿರುವ ಎರಡು ದಿನಗಳ ಮೈಸೂರು ನಗರ ಮತ್ತು ಜಿಲ್ಲಾ ಬೃಹತ್‌ ಬ್ರಾಹ್ಮಣ ಸಮಾವೇಶದಲ್ಲಿ ಅವರು ಮಾತನಾಡಿದರು.

ಬ್ರಿಟಿಷರಿಂದ ನಮ್ಮ ಧರ್ಮ, ಸಂಸ್ಕೃತಿ ಮೇಲೆ ದೊಡ್ಡ ಪ್ರಮಾಣದ ಆಕ್ರಮಣ ನಡೆದಿದೆ. ಆದರೆ, ಇದಕ್ಕಿಂತಲೂ ಹೆಚ್ಚಾಗಿ ಪಾಶ್ಚಿಮಾತ್ಯರ ವಿಚಾರಗಳಿಗೆ ಒಳಗಾಗಿರುವ ನಮ್ಮವರಿಂದ, ಬುದ್ಧಿಜೀವಿಗಳಿಂದ ಹಿಂದೂ ಸಂಸ್ಕೃತಿ, ಧರ್ಮಕ್ಕೆ ಹೆಚ್ಚು ಆಘಾತವಾಗಿದೆ. ಇವರಿಂದ ಹಿಂದೂ ಧರ್ಮದ ಬಗ್ಗೆ ಅಪಚಾರ, ಅಪವಾದಗಳು ನಡೆಯುತ್ತಿದ್ದು, ಅವರಿಗೆ ಸೂಕ್ತ ಉತ್ತರ ನೀಡುವ ಮೂಲಕ ಧರ್ಮ ಸಂಸ್ಕೃತಿಯ ರಕ್ಷಣೆಗೆ ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು. 

ಅಲ್ಪಸಂಖ್ಯಾತರಲ್ಲ: ಬ್ರಾಹ್ಮಣ ಸಮಾಜ ಅಲ್ಪಸಂಖ್ಯಾತ ಎಂದು ಗಾಬರಿಪಡುವ ಅಗತ್ಯವಿಲ್ಲ. ದೇಶದ ಇತಿಹಾಸವನ್ನು ಗಮನಿಸಿದರೆ ದೇಶದಲ್ಲಿ ಬಹುಸಂಖ್ಯಾತರು ಎಂದರೆ ಬ್ರಾಹ್ಮಣರು ಹಾಗೂ ದಲಿತರು ಮಾತ್ರವೇ ಆಗಿದ್ದಾರೆ. ಉಳಿದವರೆಲ್ಲಾ ಅಲ್ಪಸಂಖ್ಯಾತರಾಗಿದ್ದು, ದೇಶವ್ಯಾಪಿ ಇರುವ ಜಾತಿ ಎಂದರೆ ಬ್ರಾಹ್ಮಣರು ಹಾಗೂ ದಲಿತರಾಗಿದ್ದಾರೆ. ಇವರೆಲ್ಲರೂ ಒಗ್ಗೂಡಿದರೆ ಬ್ರಾಹ್ಮಣ ಸಮುದಾಯ ಪ್ರಬಲ ಸಮುದಾಯವಾಗಲಿದೆ.

ಆದರೆ, ಇದಕ್ಕಾಗಿ ತ್ರಿಮತಸ್ಥ ಬ್ರಾಹ್ಮಣರು ಸಂಘಟಿತರಾಗಿ, ನಮ್ಮಲ್ಲಿನ ಜಗಳ ಮನಸ್ತಾಪವನ್ನು ಬದಿಗೊತ್ತಿ ಹಿಂದೂ ಧರ್ಮ, ವೈದಿಕ ಧರ್ಮವೆಂಬ ಹಡಗನ್ನು ಉಳಿಸಲು ಏಕಮನಸ್ಸಿನಿಂದ ಪ್ರಯತ್ನಿಸಬೇಕಿದೆ. ನಮ್ಮ ವೇಷಭೂಷಣಗಳಲ್ಲಿ ಆಗಿರುವ ಬದಲಾವಣೆಯ ಜತೆಗೆ ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯದಲ್ಲಿ ಬದಲಾವಣೆ ಆಗಬಾರದು. ಈ ಬದಲಾವಣೆಯಾದರೆ ಬ್ರಾಹ್ಮಣರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದ ಅವರು, ಇದನ್ನು ಸ್ಥಿರವಾಗಿ ಉಳಿಸಿಕೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಕಾಪಾಡಬೇಕಿದೆ ಎಂದು ಹೇಳಿದರು. 

Advertisement

ಪ್ರತಿಭೆಗೆ ಪ್ರೋತ್ಸಾಹಿಸಿ: ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯ ಆತಂಕದಲ್ಲಿದೆ. ನಮ್ಮಲ್ಲಿ ಅನೇಕ ಪ್ರತಿಭೆ ಇದ್ದರೂ, ಈ ಪ್ರತಿಭೆಗಳು ಅವಕಾಶ ವಂಚಿತವಾಗಿದ್ದಾರೆ. ಪರಿಣಾಮ ನಮ್ಮಲ್ಲಿರುವ ಪ್ರತಿಭಾವಂತರು ವಿದೇಶದಲ್ಲಿ ದುಡಿಯುವಂತಾಗಿದೆ. ಹೀಗಾಗಿ ಸರ್ಕಾರಗಳು ಪ್ರತಿಭೆಗೆ ಮನ್ನಣೆ ನೀಡಬೇಕಿದ್ದು, ಜಾತಿಯ ಆಧಾರದಲ್ಲಿ ಪ್ರತಿಭೆಗೆ ಅವಕಾಶ ನೀಡದಿರುವುದು ಸರಿಯಲ್ಲ.

ಅಲ್ಲದೇ ಬ್ರಾಹ್ಮಣ ಸಮುದಾಯದ ಜನರು ನಮ್ಮ ಸಂಸ್ಕೃತಿ, ಆಚರಣೆಗಳನ್ನು ಬದಿಗೊತ್ತಿ ಎಲ್ಲರೊಂದಿಗೆ ಬೆರೆಯುತ್ತೇವೆ ಎಂಬುದು ಸಮಂಜಸವಲ್ಲ. ಬದಲಿಗೆ ನಮ್ಮ ಸಮುದಾಯದ ಆಚರಣೆ, ಪದ್ಧತಿಯನ್ನು ಉಳಿಸಿಕೊಂಡು ಮುನ್ನಡೆಯಬೇಕಿದೆ. ಇನ್ನೊಂದು ಸಮಾಜವನ್ನು ತಿರಸ್ಕರಿಸಿದೆ ನಮ್ಮ ಸಮುದಾಯದ ಉಳಿವಿಗಾಗಿ ಶ್ರಮಿಸೋಣ ಎಂದು ಹೇಳಿದರು. 

ಸನ್ಮಾನ, ಸ್ಮರಣ ಸಂಚಿಕೆ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬ್ರಾಹ್ಮಣ ಸಮುದಾಯದ ಹಲವರನ್ನು ಸನ್ಮಾನಿಸಲಾಯಿತು. ಸಮಾವೇಶದ ಅಂಗವಾಗಿ ಹೊರತರಲಾಗಿರುವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಮೈಸೂರಿನ ಪರಕಾಲ ಮಠದ ಅಭಿನವವಾಗೀಶ ಬ್ರಹ್ಮತಂತ್ರ ಸ್ವತಂತ್ರ ಸ್ವಾಮೀಜಿ, ಸೋಸಲೆ ಮಠದ ವಿದ್ಯಶೇಷ ಶ್ರೀಪಾದರು,

ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಶಾಸಕ ಎಸ್‌.ಎ.ರಾಮದಾಸ್‌, ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಆರ್‌. ಲಕ್ಷ್ಮೀಕಾಂತ್‌, ಅಸಗೋಡು ಜಯಸಿಂಹ, ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌ ಇತರರಿದ್ದರು.

ಮೀಸಲಾತಿ ಇತಿಮಿತಿ ಇರಲಿ – ಪೇಜಾವರ ಶ್ರೀ: ಸುಪ್ರೀಂಕೋರ್ಟ್‌ ಶೇ.50 ಮೀಸಲಾತಿ ನೀಡಬೇಕೆಂದು ಹೇಳಿದ್ದರೂ, ಅನೇಕ ರಾಜ್ಯಗಳಲ್ಲಿ ಈ ಆದೇಶವನ್ನು ಲೆಕ್ಕಿಸದೆ ಶೇ.50ಕ್ಕಿಂತಲೂ ಹೆಚ್ಚು ಮೀಸಲಾತಿ ನೀಡಲಾಗುತ್ತಿದೆ. ಇದನ್ನು ವಿರೋಧಿಸಲು ಯಾವ ರಾಜಕೀಯ ಪಕ್ಷಗಳಿಗೂ ಧೈರ್ಯವಿಲ್ಲ ಹಾಗೂ ತಡೆಯುವ ಪ್ರಯತ್ನವೂ ಆಗುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಮೀಸಲಾತಿಗೆ ತಮ್ಮ ವಿರೋಧವಿಲ್ಲ,

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕಿದೆ. ಆದರೆ, ಮೀಸಲಾತಿಗೆ ತನ್ನದೇ ಇತಿಮಿತಿ ಇರಬೇಕಿದ್ದು, ಮೀಸಲಾತಿ ಜತೆಗೆ ಪ್ರತಿಭೆಗೂ ಅವಕಾಶ ಕಲ್ಪಿಸಬೇಕಿದೆ. ಇಲ್ಲವಾದಲ್ಲಿ ಬ್ರಾಹ್ಮಣ ಸಮುದಾಯ ಮಾತ್ರವಲ್ಲದೇ ರಾಷ್ಟ್ರ ಹಾಗೂ ರಾಷ್ಟ್ರದ ಪ್ರಗತಿಗೆ ದೊಡ್ಡ ಅನ್ಯಾಯವಾಗಲಿದೆ. ಹೀಗಾಗಿ ಎಲ್ಲರೂ ಇದನ್ನು ಬಲವಾಗಿ ಎದುರಿಸಬೇಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next