ವಾಡಿ: ಬಕ್ರೀದ್ ಹಬ್ಬದ ನಿಮಿತ್ತ ಸಿಮೆಂಟ್ ನಗರಿಯ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಸೇರಿದ್ದ ಸಾವಿರಾರು ಮುಸ್ಲಿಮರು ಸಾಮೂಹಿಕ ನಮಾಜ್ ಕೈಗೊಳ್ಳುವ ಮೂಲಕ ಅಲ್ಲಾಹನನ್ನು ಪ್ರಾರ್ಥಿಸಿದರು.
ನಮಾಜ್‌ಗೂ ಮುಂಚೆ ಕುರ್ಬಾನಿ ನೀಡುವ ಮಹತ್ವದ ಕುರಿತು ಮಾಹಿತಿ ನೀಡಿದ ಜಾಮಿಯಾ ಮಸೀದಿಯ ಮೌಲಾನಾ ಅಬ್ದುಲ್ ಖ್ವಾಲೀದ್ ಬಾರಿ, ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಆಚರಣೆ ಹಿಂದೆ ರೋಚಕ ಇತಿಹಾಸವಿದೆ. ಅಲ್ಲಾಹನ ಕೃಪೆಗೆ ಪಾತ್ರರಾಗುವುದು ಎಂದರೆ ತ್ಯಾಗ ಮತ್ತು ಬಲಿದಾನದ ಪರೀಕ್ಷೆ ಎದುರಿಸಬೇಕಾಗುತ್ತದೆ ಎಂದರು.
ಮದರಸಕ್ಕಾಗಿ ಧನ ಸಂಗ್ರಹ: ಈದ್ ಅಂಗವಾಗಿ ನಡೆಯಬೇಕಿದ್ದ ಸಾಮೂಹಿಕ ನಮಾಜ್‌ಗಾಗಿ ಈದ್ಗಾ ಮೈದಾನವು ಸ್ವಚ್ಛತೆಯಿಂದ ಸಿದ್ಧವಾಗಿತ್ತು. ಈದ್ಗಾ ದ್ವಾರಕ್ಕೆ ಪಿಎಸ್‌ಐ ವಿಜಯಕುಮಾರ ಭಾವಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ಮಕ್ಕಳ ಕುರಾನ್ ಪಠಣ ಅಭ್ಯಾಸ ಹಾಗೂ ಧಾರ್ಮಿಕ ಶಿಕ್ಷಣ ನೀಡುವ ಮದರಸಾ ಪ್ರಗತಿಗಾಗಿ ಧನ ಸಹಾಯ ಪಡೆಯುತ್ತಿದ್ದ ಕೆಲ ಮುಸ್ಲಿಂ ಸಹೋದರರು, ಈದ್ಗಾದ ಪ್ರವೇಶ ದ್ವಾರದಲ್ಲಿಯೇ ಗಮನ ಸೆಳೆದರು. ನಮಾಜ್ ಕೈಗೊಳ್ಳಲು ಬರುತ್ತಿದ್ದವರು ಮಕ್ಕಳ ಧರ್ಮ ಶಿಕ್ಷಣಕ್ಕಾಗಿ ಧನಸಹಾಯ ನೀಡಿ ಈದ್ಗಾ ಪ್ರವೇಶ ಪಡೆಯುತ್ತಿದ್ದುದು ವಿಶೇಷವಾಗಿತ್ತು.
ಸಾಮೂಹಿಕ ನಮಾಜ್ ನಂತರ ಧಾರ್ಮಿಕ ಚಟುವಟಿಕೆಗಳಿಗಾಗಿ ಮತ್ತು ಮಸೀದಿಯ ಅಭಿವೃದ್ಧಿಗಾಗಿ ಧರ್ಮ ಕಾಣಿಕೆ ಪ್ರತ್ಯೇಕವಾಗಿ ಸ್ವೀಕರಿಸಲಾಯಿತು. ಈದ್ಗಾದಲ್ಲಿ ದಾನ ಧರ್ಮದ ಅನಾವರಣ ಗಮನ ಸೆಳೆಯಿತು. ಸೇರಿದ್ದ ಮಕ್ಕಳೂ ಸಾಮೂಹಿಕ ನಮಾಜ್‌ನಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮ ಹೆಚ್ಚಿಸಿದರು.
ನಮಾಜ್ ನಂತರ ಈದ್ಗಾ ಮೈದಾನದಲ್ಲಿಯೇ ಪರಸ್ಪರ ತಬ್ಬಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ಮುಕ್ಬುಲ್ ಜಾನಿ ಹಾಗೂ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಈದ್ಗಾದಲ್ಲಿ ಪಾಲ್ಗೊಂಡಿದ್ದರು.
ಹಳಕರ್ಟಿ, ರಾವೂರ, ಲಾಡ್ಲಾಪುರ, ಸನ್ನತಿ, ನಾಲವಾರ, ಕುಂದನೂರ, ಚಾಮನೂರ, ಕಮರವಾಡಿ, ಕುಂಬಾರಹಳ್ಳಿ, ಕೊಲ್ಲೂರ ಗ್ರಾಮಗಳಲ್ಲೂ ಮುಸ್ಲಿಮರು ಬಕ್ರೀದ್ ಆಚರಿಸಿದರು.