ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವರುಣನ ಕೃಪೆಗೆ ಪ್ರಾರ್ಥಿಸಿ ಶನಿವಾರ ಶ್ರೀ ದೇವರಿಗೆ ಸೀಯಾಳಾಭಿಷೇಕ ಸೇವೆಯನ್ನು ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತು. ದೇವರ ನಡೆಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಪುತ್ತೂರು ಸೀಮೆಯಲ್ಲಿ ಶೀಘ್ರ ಮಳೆ ಸುರಿಯುವ ಮೂಲಕ ಇಲ್ಲಿನ ಕೃಷಿ ಸಹಿತ ಸಮೃದ್ಧಿ ಉಂಟಾಗುವಂತೆ ಶ್ರೀ ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ವೇ| ಮೂ| ವಸಂತ ಕೃಷ್ಣ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ದಂಪತಿ, ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಬಾಬು, ಸಮಿತಿಯ ಸದಸ್ಯರಾದ ಜಾನು ನಾಯ್ಕ, ಕಲ್ಲೇಗ ಸಂಜೀವ ನಾಯಕ್, ಕರುಣಾಕರ ರೈ, ಯು.ಪಿ. ರಾಮಕೃಷ್ಣ, ನಯನಾ ರೈ, ರೋಹಿಣಿ ಆಚಾರ್ಯ ಸಹಿತ ಭಕ್ತರು ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿಯ ಮನವಿಗೆ ಸ್ಪಂದಿಸಿ ಭಕ್ತರು ತಮ್ಮ ತೋಟಗಳಲ್ಲಿ ಬೆಳೆದ ಸೀಯಾಳಗಳನ್ನು ಸಾವಿರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಸಮರ್ಪಣೆ ಮಾಡಿದರು. ಸೀಮೆಯ ಒಡೆಯನಿಗೆ ಸೀಯಾಳಾಭಿಷೇಕ ಸೇವೆ ನೀಡಿದರೆ ಮಳೆ ಆರಂಭವಾಗುತ್ತದೆ ಎಂಬ ನಂಬಿಕೆ ಸೀಮೆಯ ಭಕ್ತರಲ್ಲಿದೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಭಕ್ತರು ಪ್ರಾರ್ಥನೆ ಸಲ್ಲಿಸಿದಾಗ ದೇವಾಲಯದ ಕೆರೆಯಲ್ಲಿ ನೀರು ಉಕ್ಕಿ ಬಂದು ಕೆರೆ ದಂಡೆಯಲ್ಲಿ ನಡೆಯುತ್ತಿದ್ದ ಅನ್ನದಾನದಲ್ಲಿ ಎಲೆಯಲ್ಲಿ ಬಡಿಸಿದ ಅನ್ನದ ಅಗಳುಗಳು ಮುತ್ತುಗಳಾದ ಕತೆ ಪುತ್ತೂರು ಮಹಾಲಿಂಗೇಶ್ವನ ಧಾರ್ಮಿಕ ಚರಿತ್ರೆಯಲ್ಲಿ ಸೇರಿದೆ.
ಒಳಿತು ಮಾಡುವ ದೇವರು ಜನರು ತಮ್ಮ ಎಲ್ಲ ಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದ ಸಂದರ್ಭಗಳಲ್ಲಿ ಒಳಿತನ್ನು ಅನುಗ್ರಹಿಸುವ ದೇವರು ಸೀಮೆಯ ಒಡೆಯ ಮಹಾಲಿಂಗೇಶ್ವರ. ಮಳೆಗಾಗಿ ಪ್ರಾರ್ಥಿಸಿದ ಸಂದರ್ಭದಲ್ಲೂ ದೇವರ ಅನುಗ್ರಹ ಪ್ರಾಪ್ತವಾಗಿದೆ.
– ಎನ್. ಸುಧಾಕರ ಶೆಟ್ಟಿ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ