Advertisement

ಪ್ರವೀಣ್‌ ಹತ್ಯೆ ಪ್ರಕರಣ : ಕೃತ್ಯಕ್ಕೆ ಬಳಸಿದ ಆಯುಧ ಎಲ್ಲಿ? ಹೊಳೆ, ಕಾಡಿಗೆ ಮಚ್ಚು ಎಸೆದರೇ?

08:29 AM Aug 14, 2022 | Team Udayavani |

ಪುತ್ತೂರು : ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ಆರೋಪಿಗಳು ಎರಡೂವರೆ ಕಿ.ಮೀ. ದೂರದ ಹೊಳೆ, ಕಾಡಿನ ನಡುವೆ ಕೊಲೆಗೆ ಬಳಸಿದ ಆಯುಧ ಎಸೆದಿರಬಹುದೇ ಎನ್ನುವ ಅನುಮಾನ ಹುಟ್ಟಿಕೊಂಡಿದ್ದು ಪರಾರಿ ಆಗಿರುವ ಈ ರಸ್ತೆ ಆ ಶಂಕೆಗೆ ಪುಷ್ಟಿ ನೀಡಿದೆ. ಮುಖ್ಯ ಅರೋಪಿಗಳು ಸೆರೆಯಾಗಿದ್ದರೂ ಆಯುಧ ಪತ್ತೆಯಾಗಿಲ್ಲ.

Advertisement

ಪ್ರವೀಣ್‌ಗೆ ಮಚ್ಚು ಬೀಸಿ ಆತ ನೆಲಕ್ಕುರುಳಿದ ಬೆನ್ನಲ್ಲೇ ಮೂವರು ಆರೋಪಿಗಳು ಅಂಕತಡ್ಕದ ರಿಯಾಜ್‌ನ ಬೈಕ್‌ನಲ್ಲಿ ಪರಾರಿಯಾಗಿದ್ದರು.ಮಾಸ್ತಿಕಟ್ಟೆ-ಪೆರುವಾಜೆ ರಸ್ತೆ ಮೂಲಕ ಸಂಚರಿಸಿ ಮೊದಲೇ 2 ಕಿ.ಮೀ. ದೂರದ ಕಾಡಿನ ಬಳಿ ನಿಲ್ಲಿಸಿದ ಬೈಕಿನಲ್ಲಿ ಬೇರೆಬೇರೆ ದಾರಿಯಲ್ಲಿ ಸಂಚರಿಸಿದ್ದರು. ರಿಯಾಜ್‌ಗೆ ಪರಿಚಿತ ರಸ್ತೆ ಇದಾಗಿದ್ದ ಕಾರಣ ಆತ ಮೊದಲೇ ಈ ರಸ್ತೆಯಲ್ಲಿ ತೆರಳುವ ಯೋಜನೆ ರೂಪಿಸಿದ್ದ. ಪೆರುವಾಜೆ ದಾಟಿ ಕಾಪು ಕಾಡಿನ ಬಳಿಯಿಂದ ಕಾಡಿನ ನಡುವೆ ಬೆಳಂದೂರಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಯಲ್ಲಿ ಓರ್ವ ಆರೋಪಿ ಸಂಚರಿಸಿರುವುದು ಬೆಳಕಿಗೆ ಬಂದಿದೆ. ಇನ್ನಿಬ್ಬರು ಮುಕ್ಕೂರು ಮಾರ್ಗ ವಾಗಿ ಸವಣೂರು ಅಥವಾ ಅಂಕತಡ್ಕಕ್ಕೆ ಸಂಚರಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಂಧಿತ ಓರ್ವ ಸವಣೂರಿನವನಾಗಿದ್ದು ಅಲ್ಲಿಗೆ ತೆರಳಿ ಬೈಕ್‌ ಅಡಗಿಟ್ಟಿಸಿರಬಹುದು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಹೊಳೆ, ಕಾಡಿಗೆ ಮಚ್ಚು ಎಸೆದರೇ?
ಪೆರುವಾಜೆ ರಸ್ತೆಯಲ್ಲಿನ ಪುದ್ದೂಟ್ಟು ಸೇತುವೆ ಬಳಿ ಗೌರಿ ಹೊಳೆಗೆ ಅಥವಾ ಕಾಪು, ಕಜೆ, ಬೆಳಂದೂರಿನ ದಟ್ಟ ಕಾಡಿಗೆ ಮಚ್ಚು ಎಸೆದಿರಬಹುದೇ ಅನ್ನುವ ಅನುಮಾನ ಇದೆ. ಇದಕ್ಕೆ ಪುಷ್ಟಿ ಎಂಬಂತೆ ಈ ರಸ್ತೆಯ ಇಕ್ಕೆಲಗಳ ಎಲ್ಲ ಸಿಸಿ ಕೆಮರಾಗಳ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕೊಲೆ ನಡೆದ ದಿನ ಹೊಳೆ ತುಂಬಿ ಹರಿಯುತ್ತಿದ್ದು ಆರೋಪಿಗಳಿಗೆ ಆಯುಧ ಎಸೆಯಲು ಇದು ಪೂರಕವಾಗಿತ್ತು. ಕೃತ್ಯ ಎಸಗುವ ಮೊದಲೇ ಈ ಬಗ್ಗೆ ತೀರ್ಮಾನಿಸಿದ್ದರು ಎನ್ನಲಾಗಿದ್ದು ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

ವೇಗವಾಗಿ ಸಾಗಿದ್ದ ಬೈಕ್‌ ಯಾವುದು?
ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಪೆರುವಾಜೆ- ಮುಕ್ಕೂರು-ಸವಣೂರು ಮಾರ್ಗವಾಗಿ ಬೈಕೊಂದು ಅತೀ ವೇಗದಲ್ಲಿ ಸಂಚರಿಸಿದ್ದನ್ನು ಹಲವರು ಗಮನಿಸಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಮಾಸ್ತಿಕಟ್ಟೆ ದ್ವಾರದ ಬಳಿ ಕೋಟ್‌ ಧರಿಸಿದ ಇಬ್ಬರು ಹೆಲ್ಮೆಟ್‌ ಧಾರಿಗಳು ಪ್ರವೀಣ್‌ ಅಂಗಡಿ ಕಡೆ ಮುಖ ಮಾಡಿ ನಿಂತದ್ದನ್ನು ಕಂಡವರಿದ್ದಾರೆ. ಹೀಗಾಗಿ ಈ ಎರಡು ಅಂಶಗಳು ಕೊಲೆಯ ಅನಂತರ ಪರಾರಿ ಆಗಲು ಈ ರಸ್ತೆ ಬಳಸಿರುವುದನ್ನು ದೃಢಪಡಿಸುತ್ತಿದೆ.

ಪೂರ್ವಯೋಜಿತ
ಮಸೂದ್‌ ಹತ್ಯೆಯಾದ 3 ದಿನದೊಳಗೆ ಬೆಳ್ಳಾರೆಯಲ್ಲಿ ಕೊಲೆಗೆ ಸಂಚು ನಡೆದಿತ್ತು. ಆದರೆ ಅಂದು ಗುರಿ ಇರಿಸಿದ್ದ ಇಬ್ಬರು ಸಿಕ್ಕಿರ ಲಿಲ್ಲ. ಮರುದಿನ ದುಷ್ಕರ್ಮಿಗಳ ಕಣ್ಣು ಪ್ರವೀಣ್‌ ಮೇಲೆ ಬಿದ್ದಿತ್ತು. ಪೂರ್ವ ಭಾವಿಯಾಗಿ ಶಿಹಾಬ್‌ ನೇತೃತ್ವದಲ್ಲಿ 3 ಬಾರಿ ರಹಸ್ಯ ಸಭೆ ನಡೆಸಿ ಪೂರ್ಣ ಸಂಚು ರೂಪಿಸಲಾಗಿತ್ತು. ಕೊಲೆಯ ಬಳಿಕ ಮೂವರು ಆರೋಪಿಗಳು ಬೇರೆ ಬೇರೆ ದಾರಿಗಳಲ್ಲಿ ಮಂಗಳೂರು ಸೇರಿ ಅಲ್ಲಿಂದ ಕಾಸರಗೋಡಿಗೆ ಪ್ರಯಾಣಿಸಿದ್ದರು. ಬಳಿಕ ಕುಶಾಲನಗರ, ಪಾಲಕ್ಕಾಡ್‌, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದ್ದರು ಎನ್ನುವ ಮಾಹಿತಿ ಇದೆ.

Advertisement

ಊರಿನ ಶಾಂತಿಗೆ ಧಕ್ಕೆ: ಹಿಡಿಶಾಪ!
ಶಾಂತಿ, ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿದ್ದ ಬೆಳ್ಳಾರೆ ಪರಿಸರದಲ್ಲಿ ಕಳಂಜದ ಮಸೂದ್‌, ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ಅಶಾಂತಿ ನೆಲೆಸಿದ್ದು, ವಾತಾವರಣ ಇನ್ನೂ ತಿಳಿಯಾಗಿಲ್ಲ. ಪರಸ್ಪರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದ ಈ ಹತ್ಯೆಗಳ ಬಗ್ಗೆ ಉಭಯ ಸಮುದಾಯವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆ ತನಕ ಮುಖ ಕೊಟ್ಟು ಮಾತನಾಡಿದ್ದವರು ಈಗ ತಲೆ ತಗ್ಗಿಸಿ ನಡೆಯುವ ಸ್ಥಿತಿ ಉಂಟಾಗಿದ್ದು ಎರಡೂ ಕೊಲೆಯ ಹಂತಕರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next