Advertisement

ಸದ್ದು ಮಾಡುತ್ತಿದೆ ಪ್ರವೀರ್ ಶೆಟ್ಟಿ ನಟನೆಯ ‘ಸೈರನ್’ ಟ್ರೇಲರ್

01:12 PM May 19, 2023 | Team Udayavani |

ಯುವನಟ ಪ್ರವೀರ್‌ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ “ಸೈರನ್‌’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ “ಸೈರನ್‌’ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ “ಸೈರನ್‌’ ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟ ಡಾಲಿ ಧನಂಜಯ್‌, ನಟಿ ಸ್ಪರ್ಶ ರೇಖಾ, ನಿರ್ದೇಶಕ ಎಎಂಆರ್‌ ರಮೇಶ್‌, ಪತ್ರಕರ್ತ ರಂಗನಾಥ್‌ ಭಾರಧ್ವಾಜ್‌ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, “ಸೈರನ್‌’ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ನಟ ಪ್ರವೀರ್‌ ಶೆಟ್ಟಿ, “ಇದೊಂದು ಕಂಪ್ಲೀಟ್‌ ಆ್ಯಕ್ಷನ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಈ ಸಿನಿಮಾದಲ್ಲಿ ನಾನು ಇನ್ವೆಸ್ಟಿಗೇಟಿಂಗ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದೇನೆ. ಸಮಾಜದಲ್ಲಿ ಇಂದು ನಡೆಯುತ್ತಿರುವ ಕೆಲವು ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ತುಂಬಾ ವೃತ್ತಿಪರವಾಗಿ ಸಿನಿಮಾ ಮೂಡಿಬಂದಿದೆ. ಸಿನಿಮಾ ನೋಡುವ ಆಡಿಯನ್ಸ್‌ಗೆ ಹೊಸಥರದ ಮನರಂಜನೆ ನೀಡಲಿದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ ತಿಂಗಳ ಅಂತ್ಯಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಹೊಸಬರ ಈ ಸಿನಿಮಾಕ್ಕೆ ಪ್ರೇಕ್ಷಕರ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲವಿರಲಿ’ ಎಂದರು.

ಸದ್ಯ “ಸೈರನ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯ ಮೂಲಕ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಮೇ 26ರಂದು “ಸೈರನ್‌’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ. ಚಿತ್ರಕ್ಕೆ ರಾಜ ವೆಂಕಯ್ಯ ಅವರ ನಿರ್ದೇಶನವಿದ್ದು, ಡೆಕ್ಕನ್‌ ಕಿಂಗ್‌ ಮೂವಿ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಬಿಜು ಶಿವಾನಂದ್‌ ಬಂಡವಾಳ ಹೂಡಿದ್ದಾರೆ.

ಚಿತ್ರದಲ್ಲಿ ಲಾಸ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್‌ ಲೋಹಿತಾಶ್ವ, ಸುಕನ್ಯಾ, ಅಚ್ಯುತ್‌ ಕುಮಾರ್‌, ಪವಿತ್ರಾ ಲೋಕೇಶ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಾಗೇಶ್‌ ಆಚಾರ್ಯ ಛಾಯಾಗ್ರಹಣವಿದೆ. ಭಾರಾಧ್ವಾಜ್‌ ಸಂಗೀತವಿರುವ ಈ ಚಿತ್ರಕ್ಕೆ ದೀಪಕ್‌ ಬಾಲಾಜಿ ಯವರ ಸಂಕಲನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next