ನಟ ಪ್ರವೀಣ್ ಅವರ “ಚೂರಿಕಟ್ಟೆ’ ಚಿತ್ರದ ಬಳಿಕ ಯಾವ ಚಿತ್ರ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆಗೆ ಇದೀಗ “ಸ್ಟ್ರೈಕರ್’ ಉತ್ತರವಾಗಿದೆ. ಇದೊಂದು ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಮತ್ತೂಂದು ಚಿತ್ರ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿರುವ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆದರೆ, ಥ್ರಿಲ್ಲರ್ ಅಂಶಗಳು ನೋಡುಗರಿಗೆ ಹೊಸ ಥ್ರಿಲ್ ಕೊಡಬೇಕು ಎಂಬ ಉದ್ದೇಶದಿಂದ ಹೊಸತನದ ಕಥೆ ಹೆಣೆದು, ವಿಭಿನ್ನ ನಿರೂಪಣೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ ನಿರ್ದೇಶಕ ಪವನ್ ತ್ರಿವಿಕ್ರಮ್.
ಎಲ್ಲಾ ಸರಿ, “ಸ್ಟ್ರೈಕರ್’ ಕಥೆ ಏನು? ಇದಕ್ಕೆ ಉತ್ತರಿಸುವ ನಿರ್ದೇಶಕ ಪವನ್ ತ್ರಿವಿಕ್ರಮ್. “ಚಿತ್ರದ ಕಥಾನಾಯಕನಿಗೆ ಒಂದು ಕಾಯಿಲೆ ಇರುತ್ತದೆ. ಆ ಕಾಯಿಲೆಯ ವಿಶೇಷವೆಂದರೆ, ಅವನು ಕನಸಲ್ಲಿ ಕಂಡಿದ್ದನ್ನು ಮರುದಿನ ನಿಜ ಅಂತ ಅರ್ಥಮಾಡಿಕೊಳ್ಳುತ್ತಾನೆ. ಕನಸಲ್ಲಿ ನಡೆದಂತಹ ಅಪರೂಪದ ಘಟನೆಗಳು ನಿಜ ಅಂತ ತಿಳಿದು, ಹೊರಗಡೆ ಮುಖವಾಡ ಧರಿಸಿ ಓಡಾಡುವಂತಹ ಸ್ಥಿತಿ ಅವನದಾಗುತ್ತದೆ.
ಆ ಘಟನೆಗಳು ಅವನ ಬಿಟ್ಟು ಬೇರೆ ಯಾರಿಗೂ ಗೊತ್ತಿರುವುದಿಲ್ಲ ಎಂದು ಅರಿತುಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತೆ. ಅಂತಹ ಸಂದರ್ಭದಲ್ಲೇ ಒಂದು ಘಟನೆ ನಡೆಯುತ್ತದೆ ಆ ಘಟನೆ ಏನೆಂಬುದೇ ಚಿತ್ರದ ಹೈಲೈಟ್. ಆ ಕುತೂಹಲ ಇಟ್ಟುಕೊಂಡು ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಯಾವುದೇ ಬೇಸರ ಆಗಲ್ಲ’ ಎಂಬ ಗ್ಯಾರಂಟಿ ನಿರ್ದೇಶಕರದ್ದು. ಪ್ರವೀಣ್ ಅವರಿಗೆ ಶಿಲ್ಪಾ ಜೋಡಿಯಾಗಿದ್ದಾರೆ.
ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಇದುವರೆಗೆ ನೋಡಿರುವ “ಭಜರಂಗಿ ಲೋಕಿ ಅವರು ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರದು ಇಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಚಿತ್ರದ ಇನ್ನೊಂದು ಪ್ರಮುಖ ಪಾತ್ರವಂತೆ.
ನಿರ್ದೇಶಕ ತ್ರಿವಿಕ್ರಮ್ ಈ ಚಿತ್ರದ ಕಥೆಯನ್ನು ಕಲ್ಪನೆ ಮಾಡಿಕೊಂಡು ಬರೆದಿಲ್ಲವಂತೆ. ಬದಲಾಗಿ ನಿಜ ಜೀವನದಲ್ಲಿ ಅವರು ಕಂಡಂತಹ ಅನೇಕ ವ್ಯಕ್ತಿಗಳಿಂದ ಕೇಳಿ ತಿಳಿದು, ಸ್ಫೂರ್ತಿ ಪಡೆದುಕೊಂಡು ಕಥೆ ಮಾಡಿದ್ದಾರಂತೆ.
ಹಾಗಾಗಿ, “ಸ್ಟ್ರೈಕರ್’ ನೋಡುಗರಿಗೆ ಹೊಸದು ಎನಿಸುವುದು ನಿಜ ಎಂಬುದು ಅವರ ಮಾತು. ಅಂದಹಾಗೆ, ಇಲ್ಲಿ ಪ್ರೀತಿ ಇದೆ, ಹಾಸ್ಯವೂ ಮೇಳೈಸಿದೆ. ಇದರೊಂದಿಗೆ ಸೆಂಟಿಮೆಂಟ್ ಕೂಡ ಇದೆ. ಚಿತ್ರದಲ್ಲಿ ಹಾಸ್ಯ ನಟ ಧರ್ಮಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ.ಜೆ.ಭರತ್ ಸಂಗೀತವಿದೆ. ರಾಕೇಶ್ ಯರಕ್ಕಲ್ ಛಾಯಾಗ್ರಹಣ ಮಾಡಿದ್ದಾರೆ.